More

    ಕುಡಿವ ನೀರಿಗೆ 76 ಕೋಟಿ ರೂ.

    ಕೊಟ್ಟೂರು: ಧಾರ್ಮಿಕ ಕ್ಷೇತ್ರವಾಗಿ ಕೊಟ್ಟೂರು ಪ್ರಸಿದ್ಧಿ ಪಡೆದಿದೆ. ಮೂಲ ಸೌಕರ್ಯ ಮತ್ತು ಇತರ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಜಿಲ್ಲೆಯ ಡಿಎಂಎಫ್ ಅನುದಾನದಲ್ಲಿ ಪಟ್ಟಣ ಮತ್ತು ಕ್ಷೇತ್ರ ವ್ಯಾಪ್ತಿಯ ಎಲ್ಲ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.

    ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. 76 ಕೋಟಿ ರೂ. ವೆಚ್ಚದಲ್ಲಿ ಪಟ್ಟಣಕ್ಕೆ ದಿನವಿಡೀ ಕುಡಿವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಹತ್ತು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಅವರು ಅಭಿವೃದ್ಧಿ ಪರವಾಗಿದ್ದು, ಪ್ರಗತಿ ವಿಷಯದಲ್ಲಿ ಅವರು ರಾಜಕಾರಣ ಮಾಡಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ನಿರ್ವಂಚನೆಯಿಂದ ಕೊಡುತ್ತಾರೆ ಎಂದರು.

    ಇದನ್ನು ಓದಿ:ಸಿಎಂಗೆ ಸಾರ್ವಜನಿಕರ ಅಹವಾಲು

    ನಂತರ ಡಿಸಿ ಎಂ.ಎಸ್.ದಿವಾಕರ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸ್ಮಶಾನ ಅಭಿವೃದ್ಧಿ, ತೇರು ಬಯಲು ಪ್ರದೇಶದಲ್ಲಿರುವ ಆನಂದ ಬಾರ್‌ನಿಂದ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವುದು, ಸುಟ್ಟಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಗದ ಸರ್ವೇ ಮಾಡಿಸುವುದು, ಬೆಳೆ ವಿಮೆ-ಪರಿಹಾರ ಸಮಸ್ಯೆಗೆ ಪರಿಹಾರ.. ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಅರ್ಜಿಗಳು ಸಲ್ಲಿಕೆಯಾದವು. ಇವೆಲ್ಲ ಪರಿಶೀಲಿಸಿದ ಜಿಲ್ಲಾಧಿಕಾರಿ, ಎಲ್ಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಅಮರೇಶ, ತಾಪಂ ಇಒ ರವಿಕುಮಾರ್, ಪಪಂ ಮುಖ್ಯಾಧಿಕಾರಿ ನಸರುಲ್ಲಾ ಇದ್ದರು.

    ಸೈಕಲ್ ಸವಾರಿ ಮಾಡಿದ ಡಿಸಿ
    ಜನತಾ ದರ್ಶನಕ್ಕೂ ಮೊದಲು ಜಿಲ್ಲಾಧಿಕಾರಿ ದಿವಾಕರ, ತಹಸೀಲ್ದಾರ್ ಅಮರೇಶ, ತಾಪಂ ಇಒ ರವಿಕುಮಾರ್ ಪಟ್ಟಣದಲ್ಲಿ ಸೈಕಲ್ ಸವಾರಿ ಮಾಡಿದರು. ಎಪಿಎಂಸಿ ಸ್ವಚ್ಛತೆ, ತೂಕದ ನಿಖರತೆ ಪರೀಕ್ಷೆ ಮಾಡಿದರು. ಬಸ್ ನಿಲ್ದಾಣದಲ್ಲಿ ಶೌಚಗೃಹ ವೀಕ್ಷಿಸಿ ಸ್ವಚ್ಛತೆ ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚಿಸಿದರು.

    ಬೀದಿಬದಿ ಮೆಣಸಿನಕಾಯಿ ಖಾರ ಮಂಡಕ್ಕಿ ವ್ಯಾಪಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ವಾರ್ಡ್‌ಗಳಲ್ಲಿ ಸೌಲಭ್ಯಗಳ ಕುರಿತು ಜನರನ್ನು ವಿಚಾರಿಸಿದರು. ಜನತಾ ದರ್ಶನದಲ್ಲಿ ಕಂದಾಯ ಇಲಾಖೆಯಿಂದ 38, ಕಾರ್ಮಿಕ 1, ಪಪಂ 12, ಮಹಿಳಾ-ಮಕ್ಕಳ ಅಭಿವೃದ್ಧಿ 7, ಲೋಕೋಪಯೋಗಿ 1, ತೋಟಗಾರಿಕೆ 2, ತಾಪಂ 7, ಗ್ರಾಮೀಣ ಕುಡಿವ ನೀರು-ನೈರ್ಮಲ್ಯ 1, ಆಹಾರ-ನಾಗರಿಕ ಸರಬರಾಜು 7, ಶಿಕ್ಷಣ 6, ಜೆಸ್ಕಾಂ 1, ಅಬಕಾರಿ 1, ನೋಂದಣಿ 2, ಪಂಚಾಯತ್ ರಾಜ್ ಇಂಜಿನಿಯರಿಂಗ್ 7, ಭೂಮಾಪನ 4 ಅರ್ಜಿಗಳು ಸಲ್ಲಿಕೆಯಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts