More

    75 ಕೋಟಿ ಡೋಸ್ ಲಸಿಕೆ: ಭಾರತದ ಹೊಸ ದಾಖಲೆ, ಅಭಿಯಾನ ಚುರುಕು

    ನವದೆಹಲಿ: ಭಾರತ ಇದುವರೆಗೆ 75 ಕೋಟಿ ಅಧಿಕ ಡೋಸ್ ಕರೊನಾ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ. ಜನವರಿಯಲ್ಲಿ ಆರಂಭವಾದ ಜಗತ್ತಿನ ಅತಿ ದೊಡ್ಡ ಲಸಿಕೆ ಅಭಿಯಾನ ಈ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸೋಮವಾರ ಹೇಳಿದ್ದಾರೆ. ಇದೇ ವೇಗದಲ್ಲಿ ಸಾಗಿದರೆ ವರ್ಷಾಂತ್ಯದೊಳಗೆ ಜನಸಂಖ್ಯೆಯ ಶೇಕಡ 43 ಮಂದಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸಾಧನೆಗಾಗಿ ಭಾರತೀಯರಿಗೆ ಅಭಿ ನಂದನೆಗಳನ್ನು ಸಲ್ಲಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದಿಂದಾಗಿ ಲಸಿಕೆ ಅಭಿಯಾನ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ ಎಂದಿದ್ದಾರೆ.

    ಕೊವ್ಯಾಕ್ಸಿನ್​ಗೆ ಡಬ್ಲ್ಯುಎಚ್​ಒ ಅಸ್ತು?: ಭಾರತ್ ಬಯೋಟೆಕ್​ನ ಕರೊನಾ ಲಸಿಕೆ ಕೊವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಈ ವಾರ ಅನುಮೋದನೆ ನೀಡುವ ಸಾಧ್ಯತೆಯಿದೆ. ತುರ್ತು ಬಳಕೆಗೆ ಅನುಮತಿ ದೊರೆಯಲು ಅಗತ್ಯವಾದ ಎಲ್ಲ ದಾಖಲೆಪತ್ರ್ರಳನ್ನು ಡಬ್ಲ್ಯುಎಚ್​ಒಗೆ ಸಲ್ಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಜುಲೈನಲ್ಲಿ ಸಂಸತ್ತಿಗೆ ತಿಳಿಸಿತ್ತು. ಡಬ್ಲ್ಯುಎಚ್​ಒ ತುರ್ತು ಬಳಕೆ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಸಾಮಾನ್ಯವಾಗಿ ಆರು ವಾರ ಸಮಯ ತೆಗೆದು ಕೊಳ್ಳುತ್ತದೆ. ಭಾರತ್ ಬಯೋಟೆಕ್ ವ್ಯಾಕ್ಸಿನ್ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಮೌಲ್ಯಾಂಕನ ‘ಪ್ರಕ್ರಿಯೆ ಮುಂದುವರಿದಿದೆ’ ಎಂದು ಲಸಿಕೆ ಕುರಿತ ಡಬ್ಲ್ಯುಎಚ್​ಒ ಸಹಾಯಕ ಮಹಾ-ನಿರ್ದೇಶಕರಲ್ಲಿ ಒಬ್ಬರಾದ ಮರಿಯೆಂಗಲಾ ಸಿಮಾವೊ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಲಸಿಕೆಗೆ ಅನುಮೋದನೆ ಸಿಗಬಹುದೆಂಬುದು ಅಧಿಕಾರಿಗಳ ಆಶಾವಾದವಾಗಿದೆ.

    ಚೀನಾದಲ್ಲಿ ಹೊಸ ಕೇಸ್: ಆಗ್ನೇಯ ಚೀನಾದ ಫುಜಿಯಾನ್ ಪ್ರಾಂತ್ಯದ ಹಲವು ನಗರಗಳಲ್ಲಿ ಕರೊನಾ ಸೋಂಕಿನ 22 ಹೊಸ ಪ್ರಕರಣಗಳು ದೃಢಪಟ್ಟಿದ್ದು ಡೆಲ್ಟಾ ಪ್ರಭೇದದ ಹಾವಳಿಯಿಂದ ಒಟ್ಟು 43 ಜನರು ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನ ಹೊಸ ಹಾವಳಿಯಿಂದಾಗಿ ಪ್ರಾಂತ್ಯದ ಪುಟಿಯಾನ್ ನಗರದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಶನಿವಾರ ಬಸ್ ಮತ್ತು ರೈಲು ಸೇವೆಗಳನ್ನು ರದ್ದುಪಡಿಸಲಾಗಿತ್ತು. ಚಿತ್ರ ಮಂದಿರಗಳು, ಬಾರ್​ಗಳನ್ನು ಕೂಡ ಮುಚ್ಚಲಾಗಿದೆ.

    ಲಸಿಕೆ ಪ್ರಭಾವಶಾಲಿ: ಕರೊನಾ ವೈರಸ್​ನ ಡೆಲ್ಟಾ ಪ್ರಭೇದದ ವಿರುದ್ಧ ವ್ಯಾಕ್ಸಿನ್ ಪರಿಣಾಮಕಾರಿ ಎಂದು ಅಮೆರಿಕದ ಅಧ್ಯಯನವೊಂದು ಹೇಳಿದೆ. ಆಸ್ಪತ್ರೆಗೆ ದಾಖಲುಗೊಳ್ಳುವುದು ಮತ್ತು ತುರ್ತು ವಿಭಾಗಕ್ಕೆ ಸೇರುವುದನ್ನು ತಡೆಯುವಲ್ಲಿ ಲಸಿಕೆಗಳು ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧಕ ಶಾನ್ ಗ್ರಾನಿಸ್ ಅಭಿಪ್ರಾಯ ಪಟ್ಟಿದ್ದಾರೆ.

    ಮಹಾಮಾರಿಗೆ ಕೊನೆಯೆಂದು?: ಎರಡು ವರ್ಷದಿಂದ ಜಗತ್ತನ್ನು ತಲ್ಲಣಗೊಳಿಸಿರುವ ಕರೊನಾ ಮಹಾಮಾರಿ ಯಾವಾಗ ಕೊನೆಗೊಳ್ಳ ಬಹುದು ಎನ್ನುವುದು ಪ್ರತಿಯೊಬ್ಬರ ಕುತೂಹಲದ ಪ್ರಶ್ನೆಯಾಗಿದೆ. ಮುಂದಿನ ಮೂರರಿಂದ ಆರು ತಿಂಗಳೊಳಗೆ ಸಾಂಕ್ರಾಮಿಕತೆ ಕೊನೆಗೊಳ್ಳ ಬಹುದೆಂಬುದು ಜನಸಾಮಾನ್ಯರ ನಿರೀಕ್ಷೆಯಾಗಿದೆಯಾದರೂ ವಿಜ್ಞಾನಿಗಳ ಲೆಕ್ಕಾಚಾರ ಬೇರೆಯೇ ಆಗಿದೆ. ಇನ್ನೂ ಹೆಚ್ಚು ಕಾಲ ಕಾಯಬೇಕಾಗಬಹುದೆಂಬುದು ಅವರ ಅಭಿಪ್ರಾಯವಾಗಿದೆ. ಸಾಂಕ್ರಾಮಿಕತೆ ಕೊನೆಗೊಳ್ಳುವುದಕ್ಕೂ ಮುನ್ನ ಪ್ರತಿಯೊಬ್ಬರೂ ಸೋಂಕಿತರಾಗುತ್ತಾರೆ ಅಥವಾ ಲಸಿಕೆ ಪಡೆಯಲಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ಸಂಭವಿಸುವ ಸಾಧ್ಯತೆಯಿದೆ. ಕೆಲವು ದುರಾದೃಷ್ಟವಂತರು ಒಂದಕ್ಕಿಂತ ಹೆಚ್ಚು ಬಾರಿ ಸೋಂಕಿತರಾಗುವ ಸಾಧ್ಯತೆಯೂ ಇದೆ.

    ದೇಶದಲ್ಲಿ 27,254 ಹೊಸ ಕೇಸ್: ಸೋಮವಾರ ಭಾರತದಲ್ಲಿ ಕರೊನಾ ಸೋಂಕಿನ 27,254 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,32,64,175ಕ್ಕೆ ಏರಿದೆ. 219 ಜನರ ಸಾವಿನೊಂದಿಗೆ ರೋಗಕ್ಕೆ ಒಟ್ಟು 4,42,874 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರಿಸಿದೆ. ಸತತ 78ನೇ ದಿನವೂ ದೈನಿಕ ಕೇಸ್​ಗಳ ಸಂಖ್ಯೆ 50,000ಕ್ಕಿಂತ ಕಡಿಮೆಯಾಗಿದೆ.

    ಪ್ಲಾಸ್ಮಾ ಚಿಕಿತ್ಸೆಯಿಂದ ಲಾಭವಿಲ್ಲ: ಕೋವಿಡ್-19 ವ್ಯಾಧಿಯಿಂದ ಗಂಭೀರವಾಗಿ ಸೋಂಕಿತರಾದವರಿಗೆ ರಕ್ತದ ಪ್ಲಾಸ್ಮಾ ಚಿಕಿತ್ಸೆಯಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಸಾಮಾನ್ಯ ಚಿಕಿತ್ಸೆ ಪಡೆದವರಿಗಿಂತ ಪ್ಲಾಸ್ಮಾ ಚಿಕಿತ್ಸೆ ಪಡೆದವರಲ್ಲಿ ಅಧಿಕ ಪರಿಣಾಮಗಳು ಕಂಡು ಬಂದಿವೆ ಎಂದು ನೇಚರ್ ಜರ್ನಲ್​ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

    ಆಕ್ಲೆಂಡ್ ಲಾಕ್​ಡೌನ್: ಸೋಮವಾರ 33 ಹೊಸ ಕೇಸ್​ಗಳು ವರದಿ ಯಾದ್ದರಿಂದ ನ್ಯೂಜಿಲ್ಯಾಂಡ್​ನ ಅತಿ ದೊಡ್ಡ ನಗರ ಆಕ್ಲಂಡ್​ನಲ್ಲಿ ಸೆಪ್ಟೆಂಬರ್ 21ರ ವರೆಗೆ ಕಠಿಣ ಲಾಕ್​ಡೌನ್ ಹೇರಲಾಗಿದೆ. ಹೆಚ್ಚು ವೇಗವಾಗಿ ಹರಡುವ ಡೆಲ್ಟಾ ಸೋಂಕನ್ನು ತಡೆಗಟ್ಟಲು ಲಾಕ್​ಡೌನ್ ವಿಧಿಸಲಾಗಿದೆ ಎಂದು ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಹೇಳಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಕೋವಿಡ್ ಸೋಂಕು ತಗಲಿರುವುದು ಖಚಿತಪಟ್ಟ ಮೇಲೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೂ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡವರ ಪ್ರಕರಣಗಳನ್ನು ಪರಿಹಾರ ನೀಡಿಕೆಗೆ ಪರಿಗಣಿಸಬಾರದು ಎಂಬ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರದ ಪರಿಶೀಲಿಸಬೇಕೆಂದು ನ್ಯಾಯಮೂರ್ತಿಗಳಾದ ಎಂ. ಆರ್. ಶಾ ಹಾಗೂ ಎ.ಎಸ್. ಬೋಪಣ್ಣ ಅವರಿದ್ದ ಪೀಠ ಹೇಳಿದೆ. ಪರಿಹಾರ ನೀಡಿಕೆಯಿಂದ ಇಂಥವರನ್ನು ಹೊರತುಪಡಿಸುವ ಸರ್ಕಾರದ ನಿರ್ಧಾರವನ್ನು ಮೇಲ್ನೋಟಕ್ಕೆ ಒಪು್ಪವುದಿಲ್ಲ ಎಂದಿದೆ. ಪರಿಹಾರ ಮಾರ್ಗಸೂಚಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳನ್ನು ಹೊರತುಪಡಿಸಿರುವುದು ಅವೈಜ್ಞಾನಿಕ ಹಾಗೂ ಏಕಪಕ್ಷೀಯ ಎಂದು ವಕೀಲ ಗೌರವ್ ಬನ್ಸಾಲ್ ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts