More

    73,600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ

    ಲಕ್ಷ್ಮೇಶ್ವರ: ಒಂದು ವಾರದಿಂದ ಮುಂಗಾರು ಮಳೆ ಚುರುಕು ಪಡೆದುಕೊಂಡಿದೆ. ಇದರಿಂದಾಗಿ ತಾಲೂಕಿನಾದ್ಯಂತ ಹದವಾಗಿ ಸಿದ್ಧವಾಗಿಟ್ಟುಕೊಂಡಿದ್ದ ಭೂಮಿಯಲ್ಲಿ ಶೇಂಗಾ, ಹೆಸರು ಮತ್ತು ಹತ್ತಿಕಾಳು ಬಿತ್ತನೆ ಕಾರ್ಯದಲ್ಲಿ ರೈತ ಸಮುದಾಯ ನಿರತವಾಗಿದೆ.

    ಕೃಷಿ ಇಲಾಖೆ ಮಾಹಿತಿ ಪ್ರಕಾರ ಮೇ ಕೊನೆಯ ವಾರದಿಂದ ಜೂನ್ 15ರೊಳಗಾಗಿ ಹೆಸರು, ಜೋಳ, ಶೇಂಗಾ, ಬಿಟಿ ಹತ್ತಿ, ಉಳ್ಳಾಗಡ್ಡಿ ಬೀಜ ಬಿತ್ತನೆ ಮಾಡಲು ಸಕಾಲವಾಗಿದೆ. ಇದಕ್ಕೆ ಪೂರಕವೆಂಬಂತೆ ಮೇ ಕೊನೆಯ ವಾರದಿಂದಲೇ ಭರವಸೆ ಮೂಡಿಸಿದ ಮಳೆಯಿಂದಾಗಿ ಈಗಾಗಲೇ ಬಿತ್ತನೆ ಮಾಡಿರುವ ಹೆಸರು, ಶೇಂಗಾ, ಹತ್ತಿ ಸೇರಿ ಇತರೇ ಬೆಳೆಗಳು ಭೂಮಿಯನ್ನು ಹಸಿರಾಗಿಸಿವೆ.

    ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಹಂಗಾಮಿಗೆ ಒಟ್ಟು 73,600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಪ್ರಮುಖ ಬೆಳೆಯಾದ ಗೋವಿನಜೋಳ 31,000 ಹೆಕ್ಟೇರ್, ಹತ್ತಿ 17,000 ಹೆಕ್ಟೇರ್, ಶೇಂಗಾ 12,000 ಹೆಕ್ಟೇರ್, ಹೆಸರು 10,000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಅಂದಾಜಿದೆ. ಈ ವರ್ಷ ಹತ್ತಿ ಕ್ಷೇತ್ರ ಗುರಿ ಮೀರಿ ಬಿತ್ತನೆಯಾಗುವ ಸಾಧ್ಯತೆಯಿದೆ.

    ಗೆಜ್ಜೆಶೇಂಗಾ, ಹೆಸರು ಬೀಜವನ್ನು ಆದಷ್ಟು ಬೇಗ ಬಿತ್ತನೆ ಮಾಡಿದರೆ ಬೆಳೆ ಬೇಗ ಬರುತ್ತದೆ. ಮುಂದೆ ಹಿಂಗಾರಿನಲ್ಲಿ ಕಡಲೆ, ಬಿಳಿಜೋಳ, ಗೋದಿ ಬೆಳೆ ಪಡೆಯಬಹುದು. ಹೀಗಾಗಿ ಮೇ ಕೊನೆಯ ವಾರದಲ್ಲಿಯೇ ಶೇಂಗಾ ಮತ್ತು ಹೆಸರು ಬಿತ್ತನೆ ಮಾಡಿದ್ದೇವೆ. ಜಿಟಿಜಿಟಿ ಸುರಿಯುತ್ತಿದ್ದು, ಈಗಾಗಲೇ ಬಿತ್ತಿರುವ ಬೀಜಗಳೆಲ್ಲ ಮೊಳಕೆಯೊಡೆದು ಭೂಮಿಯಲ್ಲಿ ಹಸಿರು ಕಂಗೊಳಿಸುತ್ತಿದೆ ಎಂದು ಬಸವರಾಜ ಕೊಡ್ಲಿ, ಶಿವಾನಂದ ಲಿಂಗಶೆಟ್ಟಿ, ಬಾಪೂಗೌಡ ಪಾಟೀಲ ಮತ್ತಿತರ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

    ಟ್ರ್ಯಾಕ್ಟರ್ ಬಿತ್ತನೆಗೆ ಹೆಚ್ಚಿದ ಬೇಡಿಕೆ

    ಪ್ರತಿ ವರ್ಷ ರೈತ ಸಮುದಾಯ ಹಿಂಗಾರಿನ ಕೃಷಿ ಚಟುವಟಿಕೆ ಮುಗಿದ ಬಳಿಕ ಎತ್ತುಗಳನ್ನು ಮಾರಾಟ ಮಾಡಿ ಮತ್ತೇ ಮುಂಗಾರು ಪೂರ್ವದಲ್ಲಿ ಖರೀದಿಸುತ್ತಾರೆ. ಆದರೆ, ಈ ವರ್ಷ ಕರೊನಾ ಲಾಕ್​ಡೌನ್ ಎಫೆಕ್ಟ್​ನಿಂದ ರಾಜ್ಯದ ಬಹುತೇಕ ಕಡೆ ಎತ್ತುಗಳ ಸಂತೆ ಸ್ಥಗಿತಗೊಂಡಿದ್ದರಿಂದ ಎತ್ತುಗಳನ್ನು ಮತ್ತೆ ಖರೀದಿಸಲಾಗುತ್ತಿಲ್ಲ. ಹೀಗಾಗಿ ಪ್ರಸಕ್ತ ವರ್ಷ ಟ್ರ್ಯಾಕ್ಟರ್​ಗಳ ಮೂಲಕವೇ ಜಮೀನು ಹದಗೊಳಿಸಿ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಟ್ರ್ಯಾಕ್ಟರ್​ಗಳಿಗೆ ಕಳೆದ ವರ್ಷಕ್ಕಿಂತ ಈ ಬಾರಿ ಡಿಮ್ಯಾಡ್ ಹೆಚ್ಚಿದೆ. ಕಳೆದ ವರ್ಷ ಟ್ರ್ಯಾಕ್ಟರ್​ನಿಂದ ಬಿತ್ತನೆ ಕಾರ್ಯ ಕೂಗೊಳ್ಳಲು ಪ್ರತಿ ಎಕರೆಗೆ 600ರಿಂದ 700 ರೂ. ಬಾಡಿಗೆ ಪಡೆಯಲಾಗುತ್ತಿತ್ತು. ಆದರೆ ಈ ವರ್ಷ 800ರಿಂದ 850 ರೂ.ಗಳವರೆಗೂ ಏರಿಕೆಯಾಗಿದೆ.

    ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ 44 ಕ್ವಿಂಟಾಲ್ ಹೆಸರು, 25 ಕ್ವಿಂಟಾಲ್ ತೊಗರಿ, 10 ಕ್ವಿಂಟಾಲ್ ಜೋಳ, 30 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ಮಾರಾಟವಾಗಿದೆ. ಬೇಡಿಕೆ ಹಿನ್ನೆಲೆಯಲ್ಲಿ ಮತ್ತೆ 20 ಕ್ವಿಂಟಾಲ್ ಹೆಸರು, 100 ಕ್ವಿಂಟಾಲ್ ಶೇಂಗಾ, 150 ಕ್ವಿಂಟಾಲ್ ಗೋವಿನಜೋಳದ ಸುಧಾರಿತ ತಳಿಯ ಬೀಜಗಳು ದಾಸ್ತಾನು ಮಾಡಲಾಗಿದೆ. ಮಾರಾಟ ಕೇಂದ್ರದಲ್ಲಿ ಗೊಬ್ಬರ, ಬಿಟಿ ಹತ್ತಿ ಬೀಜದ ದಾಸ್ತಾನಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು.

    | ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ನಿರ್ದೇಶಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts