More

    61 ದಿನಗಳ ಬಳಿಕ ಆಳ ಸಮುದ್ರ ಮೀನುಗಾರಿಕೆಗೆ ದೋಣಿಗಳು ಸಜ್ಜು

    ಸುಭಾಸ ಧೂಪದಹೊಂಡ ಕಾರವಾರ

    ಮಳೆಗಾಲದ 61 ದಿನಗಳ ರಜೆಯ ಬಳಿಕ ದೊಡ್ಡ ದೋಣಿಗಳು ಮತ್ತೆ ಮತ್ಸ್ಯ ಬೇಟೆಗಾಗಿ ಸಮುದ್ರಕ್ಕೆ ಇಳಿಯಲು ಸಜ್ಜಾಗಿವೆ. ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆಗೆ ಅನುಮತಿ ಇದ್ದು, ಅದಕ್ಕಾಗಿ ಮೀನುಗಾರರು ತಯಾರಿ ಪ್ರಾರಂಭಿಸಿದ್ದಾರೆ. ಕಾರವಾರದ ಪರ್ಸೀನ್ ಬೋಟ್ ಮಾಲೀಕರು ಆ. 6ರಿಂದ ಸಮುದ್ರಕ್ಕಿಳಿಯಲು ನಿರ್ಧರಿಸಿದ್ದಾರೆ.

    ಸಮುದ್ರದಲ್ಲಿ ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರಿಂದ ಜೂನ್ 1 ರಿಂದ ಜುಲೈ 31ರವರೆಗೆ 10 ಎಚ್​ಪಿಗಿಂತ ಅಧಿಕ ಸಾಮರ್ಥ್ಯದ ಇಂಜಿನ್ ಇರುವ ಬೋಟ್​ಗಳನ್ನು ಬಳಸಿ ಮೀನುಗಾರಿಕೆ ನಡೆಸುವುದನ್ನು ಸರ್ಕಾರ ನಿಷೇಧಿಸುತ್ತದೆ. ಇದರಿಂದ ದೊಡ್ಡ ದೋಣಿಗಳು ದಡ ಸೇರುತ್ತವೆ. ನಿಷೇಧದ ಅವಧಿ ಮುಗಿಯುತ್ತಿದ್ದು, ದಡ ಸೇರಿದ ಬೋಟ್​ಗಳನ್ನು ರಿಪೇರಿ ಮಾಡಿ ನೀರಿಗಿಳಿಸುವ ತಯಾರಿ ಭರದಿಂದ ಸಾಗಿದೆ.

    ಹೊರ ರಾಜ್ಯದ ಕಾರ್ವಿುಕರು: ಇಂದು ಸಮುದ್ರಕ್ಕೆ ಹೋಗಿ ಇಂದೇ ಮೀನು ಹಿಡಿದು ವಾಪಸಾಗುವ ಮಧ್ಯಮ ಗಾತ್ರದ ಟ್ರಾಲರ್ ಹಾಗೂ ಫಿಶಿಂಗ್ ಬೋಟ್​ಗಳಲ್ಲಿ ಸ್ಥಳೀಯ ಕಾರ್ವಿುಕರು ದುಡಿದರೆ ಐದಾರು ದಿನ ಸಮುದ್ರದಲ್ಲೇ ಇದ್ದು ಮೀನುಗಾರಿಕೆ ಮಾಡುವ ದೊಡ್ಡ ಪರ್ಸೀನ್ ಬೋಟ್​ಗಳಲ್ಲಿ ಹೊರ ರಾಜ್ಯದ ಕಾರ್ವಿುಕರು ದುಡಿಯುತ್ತಾರೆ. ಕಳೆದ ಎರಡು ವರ್ಷಗಳಿಂದ ಕರೊನಾ ಕಾರಣ ಕಾರ್ವಿುಕರಿಲ್ಲದೆ ಮೀನುಗಾರಿಕೆಗೆ ಸಮಸ್ಯೆಯಾಗಿತ್ತು. ಈ ಬಾರಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಒಡಿಶಾ, ಜಾರ್ಖಂಡ್, ಬಿಹಾರ ಮುಂತಾದ ರಾಜ್ಯಗಳ ಕಾರ್ವಿುಕರು ಬಂದಿಳಿಯುತ್ತಿದ್ದಾರೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲ.

    ಆನ್​ಲೈನ್ ವ್ಯವಸ್ಥೆ: ದೋಣಿ ಮಾಲೀಕರು ಡೀಸೆಲ್ ಪಾಸ್​ಬುಕ್ ಹಾಗೂ ಮೀನುಗಾರಿಕೆ ಲೈಸೆನ್ಸ್ ಪಡೆಯಲು ಈ ಬಾರಿಯಿಂದ ಆನ್​ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದುವರೆಗೆ ಡೀಸೆಲ್ ಪಾಸ್​ಬುಕ್, ಬ್ಯಾಂಕ್ ಪಾಸ್​ಬುಕ್, ಹಳೆಯ ಲೈಸೆನ್ಸ್, ವಿಮೆ ತುಂಬಿದ ದಾಖಲೆ, ಸಮೀಕ್ಷಾ ವರದಿ ಹೀಗೆ ಹಲವು ದಾಖಲೆಗಳೊಂದಿಗೆ ತಾಲೂಕು ಮೀನುಗಾರಿಕೆ ಇಲಾಖೆಗೆ ಲಿಖಿತ ಅರ್ಜಿ ಸಲ್ಲಿಸಬೇಕಿತ್ತು. ಈ ಬಾರಿ ಈ ವ್ಯವಸ್ಥೆಯನ್ನು ಆನ್​ಲೈನ್ ಮಾಡಲಾಗಿದ್ದು, ಈಗಾಗಲೇ ಇರುವ ದೋಣಿಗಳ ಹಾಗೂ ಅದರ ಮಾಹಿತಿಯನ್ನು ಜಾಲತಾಣದಲ್ಲಿ ಅಪ್​ಲೋಡ್ ಮಾಡಲಾಗಿದೆ. ಈಗ ದೋಣಿಗಳ ಮಾಲೀಕರು ಮೀನುಗಾರಿಕೆ ಇಲಾಖೆ ನೀಡಿರುವ ಲಿಂಕ್ ಮೂಲಕ ಆನ್​ಲೈನ್​ನಲ್ಲೇ ಪರವಾನಗಿ ಅರ್ಜಿ ಸಲ್ಲಿಸಬಹುದು. ‘ದೋಣಿ ಸಮುದ್ರಕ್ಕಿಳಿಯಲು ಘಟ್ಟಿಯಾಗಿರುವ ಬಗ್ಗೆ ಸಮೀಕ್ಷಾ ವರದಿ ಹಾಗೂ ವಿಮಾ ಕಂತು ಪಾವತಿಸಿರುವ ದಾಖಲೆಗಳನ್ನು ಮಾತ್ರ ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಿದರೆ ಸಾಕು. ಇದಕ್ಕಾಗಿ ನಾವು ಮೀನುಗಾರಿಕೆ ಬಂದರು, ಇಲಾಖೆಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯಾಂತ್ರೀಕೃತ ನಾಡದೋಣಿಗಳಿಗೂ ಇದೇ ವ್ಯವಸ್ಥೆ ಜಾರಿಗೆ ತರುವ ಸಿದ್ಧತೆ ನಡೆದಿದೆ’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts