

ಚೆನ್ನೈ: ಸಿಮೆಂಟ್ ಚೀಲಗಳು ತುಂಬಿದ್ದ ಟ್ರಕ್ಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 6 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ತಮಿಳುನಾಡಿನಲ್ಲಿ ಭಾನುವಾರ (ಜ.28) ಮುಂಜಾನೆ ಸಂಭವಿಸಿದೆ.
ಮೃತರನ್ನು ಕಾರ್ತಿಕ್, ವೇಲ್ ಮನೋಜ್, ಸುಬ್ರಮಣಿ, ಮನೋಹರನ್ ಮತ್ತು ಪೋತಿರಾಜ್ ಎಂದು ಗುರುತಿಸಲಾಗಿದೆ. ಕುತ್ರಾಲಂನಿಂದ ವೀಕೆಂಡ್ ಟ್ರಿಪ್ ಮುಗಿಸಿಕೊಂಡು ವಾಪಸ್ ಬರುವಾಗ ಇಂದು ಮುಂಜಾನೆ 3.30ರ ಸುಮಾರಿಗೆ ಚಾಲಕ ನಿದ್ರೆಗೆ ಜಾರಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಕೇರಳ ಮೂಲದ ಟ್ರಕ್ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ 6 ಮಂದಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಪ್ರಯಾಣಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾನೆ. ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಆಗಮಿಸಿ, ಕೇವಲ 30 ನಿಮಿಷಗಳಲ್ಲಿ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಘಟನೆಯ ಬಗ್ಗೆ ಕೂಲಂಕಷ ತನಿಖೆ ಆರಂಭಿಸಿದ್ದಾರೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ತೊಪ್ಪೂರ್ ಘಾಟ್ ರಸ್ತೆಯಲ್ಲಿ ಬುಧವಾರ (ಜ.24) ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿ, ಎಂಟು ಮಂದಿ ಗಾಯಗೊಂಡರು. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತಿ ವೇಗದ ಟ್ರಕ್ ನಿಯಂತ್ರಣ ಕಳೆದುಕೊಂಡು ಮತ್ತೊಂದು ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಟ್ರಕ್ಗಳ ನಡುವೆ ಕಾರು ಸಿಕ್ಕಿಕ್ಕೊಂಡು ಭಯಾನಕ ಅಪಘಾತ ಸಂಭವಿಸಿತು. ಒಟ್ಟು ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತವಾಯಿತು.
ಡಿಕ್ಕಿಯ ರಭಸಕ್ಕೆ ಕಾರು ಸ್ಥಳದಲ್ಲೇ ನಜ್ಜುಗುಜ್ಜಾಗಿ, ಟ್ರಕ್ ರೈಲಿಂಗ್‌ಗೆ ಡಿಕ್ಕಿ ಹೊಡೆದು ಸೇತುವೆಯಿಂದ ಪಲ್ಟಿಯಾಯಿತು. (ಏಜೆನ್ಸೀಸ್)