More

    6 ತಿಂಗಳಾದರೂ ಬಾರದ ವೇತನ

    ಬೆಳಗಾವಿ: ಹಳ್ಳಿ-ಹಳ್ಳಿಗಳಿಗೆ ಅಲೆದಾಡಿ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗಾಗಿ ಆರ್ಥಿಕ ಸಾಲ ಸೌಲಭ್ಯ ಒದಗಿಸುವಲ್ಲಿ ನಿರತರಾಗಿರುವ ಎನ್‌ಆರ್‌ಎಲ್‌ಎಂ (ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್) ಸಿಬ್ಬಂದಿ ತಮ್ಮ ವೇತನಕ್ಕಾಗಿ ವರ್ಷಗಟ್ಟಲೇ ಕಾಯುವ ಸ್ಥಿತಿ ಎದುರಾಗಿದೆ. 6 ತಿಂಗಳಿನಿಂದ ವೇತನ ಪಾವತಿಯಾಗದ್ದರಿಂದ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.

    ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಗ್ರಾಮೀಣರ ಜೀವನೋಪಾಯ ಸುಧಾರಣೆಗಾಗಿ ಸರ್ಕಾರಿ ಸಹಾಯಧನ, ಸಾಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯಡಿ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ 2022ರ ಆಗಸ್ಟ್ ತಿಂಗಳಿನಿಂದ ವೇತನ ಜಮೆ ಆಗಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಸಾಲದ ಮೊರೆ ಹೋಗಿದ್ದಾರೆ.

    ರಾಜ್ಯದ ಬಹುದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಎಲ್ಲ 14 ತಾಲೂಕುಗಳಲ್ಲೂ ಎನ್‌ಆರ್‌ಎಲ್‌ಎಂ ಯೋಜನೆ ಜಾರಿಯಲ್ಲಿದ್ದು, ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಕಾರ್ಯಕ್ರಮ ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, ಗಣಕಯಂತ್ರ ನಿರ್ವಾಹಕರು ಸೇರಿ ವಿವಿಧ ಹುದ್ದೆಗಳಿಗೆ ಜಿಲ್ಲೆಯವರು ಮಾತ್ರವಲ್ಲದೆ ಹೊರ ಜಿಲ್ಲೆಯವರೂ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯವರು ಸಮೀಪದ ಊರುಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದು, ದಿನವೂ ಮನೆಯಿಂದಲೇ ಕೆಲಸಕ್ಕೆ ಹೋಗಿಬಂದು ಮಾಡುತ್ತಾರೆ. ಆದರೆ, ಹೊರ ಜಿಲ್ಲೆಯವರು ಬಾಡಿಗೆ ಮನೆಮಾಡಿಕೊಂಡಿದ್ದಾರೆ. ಹಲವರಿಗೆ ಕಳೆದ ಆರು ತಿಂಗಳಿನಿಂದ ಬಾಡಿಗೆ ಪಾವತಿಸದ ಕಾರಣ ಮಾಲೀಕರು ಮನೆ ಬಿಡುವಂತೆ ತಿಳಿಸುತ್ತಿದ್ದು, ದಿಕ್ಕೇ ತೋಚದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

    ಈ ಕುರಿತು ಪತ್ರಿಕೆ ಜತೆ ಮಾತನಾಡಿದ ವಲಯ ಮೇಲ್ವಿಚಾರಕರೊಬ್ಬರು, ಹೊರಗುತ್ತಿಗೆ ಆಧಾರದಲ್ಲಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಆಗಾಗ, ಹೀಗೆ ವೇತನ ಸಮಸ್ಯೆ ಆಗುತ್ತಲೇ ಇರುತ್ತದೆ. ಆರು ತಿಂಗಳಿಂದ ಗುತ್ತಿಗೆದಾರರು ಯಾರಿಗೂ ವೇತನ ಜಮೆ ಮಾಡಿಲ್ಲ. ಸ್ನೇಹಿತರ ಬಳಿ ಕೈಗಡ ಹಾಗೂ ಸ್ಥಳೀಯ ಲೇವಾದೇವಿಗಾರರಿಂದ ಬಡ್ಡಿಗೆ ಸಾಲ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಸಂಬಳ ಬಂದಿಲ್ಲ ಎಂದು ಒಂದು ದಿನವೂ ಕೆಲಸ ನಿಲ್ಲಿಸಿಲ್ಲ. ಸ್ವಸಹಾಯ ಗುಂಪುಗಳಡಿ ಸಾವಿರಾರು ಕುಟುಂಬಗಳಿಗೆ ಸೌಲಭ್ಯ ಒದಗಿಸುತ್ತೇವೆ. ಆದರೆ, ನಮಗೆ ಆರು ತಿಂಗಳಾದರೂ ವೇತನ ಕೈಸೇರುತ್ತಿಲ್ಲ. ಸರಿಯಾದ ಸಮಯಕ್ಕೆ ವೇತನ ಸೇರಿ ಭತ್ಯೆ ನೀಡುವುದಿಲ್ಲ. ಇದರಿಂದ ತುಂಬ ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

    ಅನ್ಯ ಇಲಾಖೆಗಳ ಕೆಲಸದ ಹೊರೆ

    ಎನ್‌ಆರ್‌ಎಲ್‌ಎಂ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಮಹಿಳಾ ಸಂಘಗಳನ್ನು ಒಗ್ಗೂಡಿಸುವ ಯೋಜನೆಯಾಗಿದ್ದು, ಇದರ ಸಿಬ್ಬಂದಿ ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ನೀಡುವುದು, ಅಕೌಂಟ್ಸ್ ಬರೆಯುವ, ಲಾಭ ಪಡೆಯುವ ವಿಧಾನ, ಸಂಘಗಳ ಬೆಳವಣಿಗೆ ಸೇರಿ ಸಂಘದ ಸಂಪೂರ್ಣ ಮಾಹಿತಿ ಪಡೆಯುವ ಹಾಗೂ ಅವುಗಳಿಗೆ ಆರ್ಥಿಕ ಚೈತನ್ಯ ನೀಡುವಲ್ಲಿ ನಿರತರಾಗಿರುತ್ತಾರೆ. ಅದಷ್ಟೇ ಅಲ್ಲದೆ, ಕಾಲಕಾಲಕ್ಕೆ ಮಹಿಳಾ ಸ್ವಸಹಾಯ ಸಂಘಗಳನ್ನು ಹಲವು ಇಲಾಖೆಗಳ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು ಸೇರಿ ಇನ್ನಿತರ ಇಲಾಖೆಗಳ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಹೆಚ್ಚುವರಿ ಕೆಲಸವನ್ನೂ ಮಾಡಬೇಕಾಗುತ್ತದೆ. ಅಧಿಕಾರಿಗಳು ದಿನದಿಂದ ದಿನಕ್ಕೆ ಕೆಲಸದ ಹೊರೆ ಹೆಚ್ಚು ಮಾಡುತ್ತಿದ್ದಾರೆ. ನ್ಯಾಯಯುತವಾಗಿ ಸಿಗಬೇಕಿದ್ದ ವೇತನವನ್ನು ಸಕಾಲಕ್ಕೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಎನ್‌ಆರ್‌ಎಲ್‌ಎಂ ಸಿಬ್ಬಂದಿಗೆ ತಾಂತ್ರಿಕ ಕಾರಣಗಳಿಂದ ನಾಲ್ಕೈದು ತಿಂಗಳ ವೇತನ ಪಾವತಿಯಾಗಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ವೇತನ ಪಾವತಿಗೆ ಕ್ರಮ ವಹಿಸಲಾಗುವುದು.
    | ಎಂ.ಆರ್.ಮರಿಗೌಡರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು.

    ಕಳೆದ ಆಗಸ್ಟ್ ತಿಂಗಳಿನಲ್ಲಿ ಜುಲೈ ತಿಂಗಳ ವೇತನ ಪಾವತಿಸಿದ್ದರು. ಆ ಬಳಿಕ ವೇತನ ಜಮೆ ಮಾಡಿಲ್ಲ. ವೇತನಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಕೇಳಿದಾಗೊಮ್ಮೆ ಈ ವಾರದಲ್ಲಿ ಜಮೆ ಮಾಡುತ್ತೇವೆ ಎನ್ನುತ್ತಲೇ ಇದ್ದಾರೆ. ಆದರೆ, ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ.
    | ಹೆಸರು ಹೇಳಲಿಚ್ಛಿಸದ ಎನ್‌ಆರ್‌ಎಲ್‌ಎಂ ಸಿಬ್ಬಂದಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts