More

    ರಾಜ್ಯದಲ್ಲಿ ನಿತ್ಯ ನಾಲ್ವರರು ಮಕ್ಕಳು ಸೇರಿ 53 ಮಂದಿ ಮಿಸ್ಸಿಂಗ್!

    ಬೆಂಗಳೂರು: ರಾಜ್ಯದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಪ್ರತಿದಿನ 53 ಮಂದಿ ಕಾಣೆಯಾಗುತ್ತಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳು ಇರುವುದು ಆಘಾತಕಾರಿ ವಿಷಯವಾಗಿದೆ.
    ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕಾಣೆಯಾದವರ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿದಾಗ ಕರ್ನಾಟಕ 7ನೇ ಸ್ಥಾನದಲ್ಲಿದೆ. ಮಕ್ಕಳ ಮಿಸ್ಸಿಂಗ್ ಪ್ರಕರಣ ಗಮನಿಸಿದರೆ 16ನೇ ಸ್ಥಾನದಲ್ಲಿರುವುದು ತೃಪ್ತಿದಾಯಕವಾಗಿದೆ.
    ಮಾನವ ಕಳ್ಳ ಸಾಗಾಣಿಕೆ, ದಾರಿ ತಪ್ಪಿ ಮನೆಗೆ ವಾಪಸ್ ಹೋಗದಿರುವುದು, ಕೌಟುಂಬಿಕ ಕಲಹದಿಂದ ದೂರಾಗುವುದು ಮತ್ತು ಪ್ರೇಮ ವಿವಾಹದ ಸಲುವಾಗಿ ಮನೆ ಬಿಟ್ಟು ಹೋಗುವುದು ಇನ್ನಿತ್ತರ ಕಾರಣದಿಂದ ಮಕ್ಕಳು ಮತ್ತು ಪುರುಷ, ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ವಾರಸುದಾರರು ದೂರು ಕೊಟ್ಟರೂ ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ. ಕೆಲವೊಂದು ಸಮಯದಲ್ಲಿ ದೂರು ಕೊಟ್ಟು ಪಾಲಕರು ಸುಮ್ಮನೆ ಇರುವ ಪ್ರಮಾಣವೂ ಹೆಚ್ಚಾಗಿದೆ.

    2022ನೇ ಸಾಲಿನಲ್ಲಿ ಕರ್ನಾಟಕ 19,372 (ಗಂ-7,090; ಹೆ-12,282)ಕಾಣೆಯಾಗಿದ್ದಾರೆ. ಇನ್ನೂ 8,407 ಹಳೇ ಪ್ರಕರಣಗಳು ಉಳಿದಿದ್ದು, ಒಟ್ಟಾರೆ 27,779 ಕೇಸುಗಳು ವರದಿಯಾಗಿವೆ. ಇದರಲ್ಲಿ 18,576 ಪ್ರಕರಣಗಳು (ಗಂ-6791; ಹೆ-11,785) ಪತ್ತೆಯಾಗಿವೆ.
    18 ವರ್ಷ ಒಳಗಿನವರ ಮಿಸ್ಸಿಂಗ್ ಕೇಸ್‌ಗಳನ್ನು ಗಮನಿಸಿದಾಗ 2022ರಲ್ಲಿ 1,110 (ಗಂಡು-157, ಹೆಣ್ಣು-568) ಮಕ್ಕಳು ನಾಪತ್ತೆಯಾಗಿದ್ದಾರೆ. ಇದಲ್ಲದೆ, ಹಳೆಯ 607 ಪ್ರಕರಣಗಳು ಸೇರಿ ಒಟ್ಟಾರೆ 1,717 ಮಕ್ಕಳು ಮಿಸ್ಸಿಂಗ್ ಆಗಿರುವ ಬಗ್ಗೆ ದಾಖಲಾಗಿವೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡು 2022ರಲ್ಲಿ 1173 ಮಕ್ಕಳನ್ನು (ಗಂ-568; ಹೆ-605) ಪತ್ತೆಹಚ್ಚಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಹಿರಿಯ ನಾಗರಿಕರಿಗೆ ಸುರಕ್ಷಿತವಲ್ಲ

    ಬೆಂಗಳೂರು ನಗರದಲ್ಲಿ ಹಿರಿಯ ನಾಗರಿಕರ ವಿರುದ್ಧ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಎನ್‌ಸಿಆರ್‌ಬಿ ವರದಿ ಪ್ರಕಾರ 2020ರಲ್ಲಿ 210 ಅಪರಾಧ ಪ್ರಕರಣಗಳು ವರದಿ ಆಗಿದ್ದವು. 2021ಕ್ಕೆ 237 ಪ್ರಕರಣಕ್ಕೆ ಏರಿಕೆಯಾಗಿದ್ದು, 2022ರಲ್ಲಿ ದ್ವಿಗುಣ(458) ಆಗಿದೆ. ಇದು ಆತಂಕದ ವಿಚಾರವಾಗಿದೆ. ದೇಶದಲ್ಲಿ 5ನೇ ಸ್ಥಾನದ ಕುಖ್ಯಾತಿಗೆ ಒಳಗಾಗಿದೆ. ಇದಲ್ಲದೆ, ಹಿರಿಯ ನಾಗರಿಕರ ಕೊಲೆ ಕೇಸುಗಳಲ್ಲಿ ದೆಹಲಿ ನಗರ (22 ಕೊಲೆ) ಹೊರತುಪಡಿಸಿದರೇ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಹಿರಿಯ ನಾಗರಿಕರು (17) ಕೊಲೆಯಾಗಿದ್ದಾರೆ. ವೃದ್ಧರು ವಂಚನೆಗೂ ಒಳಗಾಗಿದ್ದಾರೆ. 2022ರಲ್ಲಿ 158 ವಂಚನೆ ಪ್ರಕರಣಗಳು ದಾಖಲಾಗಿದ್ದು, 19 ಮಹಾನಗರಗಳ ಪೈಕಿ ಸಿಲಿಕಾನ್ ಸಿಟಿ ಮೊದಲ ಸ್ಥಾನದಲ್ಲಿದೆ. ಹಿರಿಯ ನಾಗರಿಕರಿಗೆ ಜೀವನ ನಡೆಸಲು ಸುರಕ್ಷಿತವಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

    ಮಕ್ಕಳ ಮೇಲಿನ ಅಪರಾಧ ಹೆಚ್ಚಳ

    ಬೆಂಗಳೂರು ನಗರದಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಸಹ ಏರು ಮುಖವಾಗುತ್ತಿವೆ. 2020ರಲ್ಲಿ 1,103 ಮಕ್ಕಳ ಮೇಲೆ ಅಪರಾಧ ನಡೆದಿದ್ದರೆ, 2021ರಲ್ಲಿ 1,342 ಪ್ರಕರಣ ಮತ್ತು 2022ರಲ್ಲಿ 1,578 ಕೇಸ್‌ಗಳು ವರದಿಯಾಗಿವೆ. 2022ರಲ್ಲಿ ದೆಹಲಿ ನಗರದಲ್ಲಿ 7400 ಮತ್ತು ಮುಂಬೈನಲ್ಲಿ 3178 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಮೊದಲ ಎರಡು ಸ್ಥಾನದಲ್ಲಿವೆ. 2022ರಲ್ಲಿ ಬೆಂಗಳೂರು ನಗರದಲ್ಲಿ 9 ಮಕ್ಕಳು ಕೊಲೆಯಾಗಿದ್ದು, ದೆಹಲಿ ನಗರದಲ್ಲಿ 22 ಮಕ್ಕಳ ಹತ್ಯೆ ಆಗಿರುವ ವರದಿಯಾಗಿದೆ. ಸಿಲಿಕಾನ್ ಸಿಟಿಯಲ್ಲಿ 468 ಪೋಕ್ಸೋ ಪ್ರಕರಣ ಮತ್ತು 68 ಸೈಬರ್ ಕ್ರೈಂ ಕೇಸು ದಾಖಲಾಗಿವೆ.

    ದೇಶದಲ್ಲಿ ಅತೀ ಹೆಚ್ಚು ಕಾಣೆಯಾದ ಪ್ರಕರಣ

    ——————————-
    ರಾಜ್ಯ -ಕಾಣಿಯಾದವರು- ಮಕ್ಕಳು
    ——————————-
    ಮಹಾರಾಷ್ಟ್ರ -70,756 -3,069
    ಪಶ್ಚಿಮ ಬಂಗಾಳ -58,871- 12,455
    ಮಧ್ಯಪ್ರದೇಶ- 50,344 -11,352
    ರಾಜಸ್ಥಾನ- 33,067 -6,194
    ತಮಿಳುನಾಡು -27,701 -7,009

    ಹಿರಿಯ ನಾಗರಿಕರ ವಿರುದ್ಧ ಅಪರಾಧಗಳು

    ———————————
    ಮಹಾನಗರ -ಪ್ರಕರಣ- ಕೊಲೆ -ವಂಚನೆ
    ——————————-
    ದೆಹಲಿ ನಗರ- 1313- 22- 136
    ಮುಂಬೈ- 572 -5 -120
    ಬೆಂಗಳೂರು ನಗರ- 458- 17 -158
    ಹೈದರಾಬಾದ್ -331- 2 -86
    ಅಹಮದಬಾದ್ -238- 8- 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts