More

    ಟಿಕೆಟ್ ಕೇಳಲು 5000 ರೂಪಾಯಿ ಶುಲ್ಕ !

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತಲಾ 5 ಸಾವಿರ ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಿ ಅಚ್ಚರಿ ಮೂಡಿಸಿದೆ. ಬಿಜೆಪಿ, ಆಮ್ ಆದ್ಮಿ ಪಕ್ಷ ಹಾಗೂ ಬಹುಜನ ಸಮಾಜದ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಶುಲ್ಕದ ಭಾರವಿಲ್ಲ.
    ಅರ್ಜಿ ಶುಲ್ಕ ಪಾವತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಜೆಡಿಎಸ್ ಪಕ್ಷ ಶೇ. 50 ರಷ್ಟು ರಿಯಾಯಿತಿ (2500 ರೂ.) ಪ್ರಕಟಿಸಿದೆ. ಸಾಮಾನ್ಯ ವರ್ಗದ ಟಿಕೆಟ್ ಆಕಾಂಕ್ಷಿಗಳು ಮಾತ್ರ 5 ಸಾವಿರ ರೂ. ಪಾವತಿಸಬೇಕು. ಆದರೆ, ಸಾಮಾಜಿಕ ನ್ಯಾಯವೇ ತಮ್ಮ ಧ್ಯೇಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಎಲ್ಲ ವರ್ಗದವರಿಗೂ 5 ಸಾವಿರ ರೂ. ನಿಗದಿ ಪಡಿಸಿದೆ. ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ಪ್ರಕಟಿಸದಿರುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ಆಕ್ರೋಶವನ್ನು ಹುಟ್ಟಿಸಿದೆ.
    ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸುವ ಟಿಕೆಟ್ ಆಕಾಂಕ್ಷಿಗಳು ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 100 ರೂ. ಪಾವತಿಸಿ ಅರ್ಜಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ 5 ಸಾವಿರ ರೂ. ಶುಲ್ಕವನ್ನು ಡಿಡಿ ಮೂಲಕ ಅಥವಾ ನಗದು ರೂಪದಲ್ಲಿ ಪಾವತಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಆ. 15 ಕೊನೆಯ ದಿನವಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ (ಕೆಪಿಸಿಸಿ) ನಿರ್ದೇಶನದ ಮೇರೆಗೆ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿ ಶುಕ್ರವಾರವೇ ಪ್ರಕಟಣೆ ಹೊರಡಿಸಿದೆ.
    ಜಿಲ್ಲಾ ಜೆಡಿಎಸ್ ನಿರ್ಧಾರ: ಕೈ ಪಡೆಯಲ್ಲಿ ಅರ್ಜಿ ಶುಲ್ಕ ನಿಗದಿಯನ್ನು ಕೆಪಿಸಿಸಿ ತೀರ್ವನಿಸಿದರೆ, ಜೆಡಿಎಸ್​ನಲ್ಲಿ ಸ್ಥಳೀಯ ಮುಖಂಡರು ನಿರ್ಧರಿಸಿದ್ದಾರೆ. ಅರ್ಜಿ ಶುಲ್ಕವನ್ನು ಪಕ್ಷದ ಹೆಸರಿನಲ್ಲಿ ಚೆಕ್ ಮೂಲಕ ಪಾವತಿಸಬೇಕು ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಸೂಚಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಆ. 16ರವರೆಗೆ ಸ್ವೀಕರಿಸಲಾಗುವುದು ಎಂದು ಪಕ್ಷ ತಿಳಿಸಿದೆ. ಇಲ್ಲಿ ಪಕ್ಷದ ಮುಖಂಡರ ಬಳಿ ಅರ್ಜಿ ನೀಡುವ ವ್ಯವಸ್ಥೆ ರೂಪಿಸಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಲ್ಲೂ ಅರ್ಜಿ ಶುಲ್ಕ ಮರಳಿ ನೀಡುವ (ರಿಫಂಡ್) ವ್ಯವಸ್ಥೆ ಇರುವುದಿಲ್ಲ.

    ದುಡ್ಡು ಮಾಡುವ ಉದ್ದೇಶದಿಂದ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ. ಚುನಾವಣೆಯಲ್ಲಿ ನಿಜವಾಗಿಯೂ ಆಸಕ್ತಿಯುಳ್ಳವರು ಸ್ಪರ್ಧಿಸಲು ಮುಂದೆ ಬರಲಿ ಎಂಬ ಕಾರಣಕ್ಕೆ ಅರ್ಜಿ ಶುಲ್ಕ ಇಟ್ಟಿದ್ದೇವೆ. ಸುಖಾಸುಮ್ಮನೆ ಎಲ್ಲರೂ ಅರ್ಜಿ ಕೊಡುವುದು ತಪ್ಪುತ್ತದೆ.
    | ಗುರುರಾಜ ಹುಣಸಿಮರದ
    ಹು-ಧಾ ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ


    ಕೆಪಿಸಿಸಿ ನಿರ್ದೇಶನದ ಮೇರೆಗೆ ಎಲ್ಲ ವರ್ಗದ ಟಿಕೆಟ್ ಆಕಾಂಕ್ಷಿಗಳಿಗೆ 5 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಪಡಿಸಿದ್ದೇವೆ. ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಅರ್ಜಿ ಶುಲ್ಕ ನಿಗದಿಪಡಿಸಿಲ್ಲ. ಬೆಳಗಾವಿ ಹಾಗೂ ಕಲಬುರಗಿ ಪಾಲಿಕೆ ಚುನಾವಣೆಯಲ್ಲೂ ಅರ್ಜಿ ಶುಲ್ಕ ನಿಗದಿ ಪಡಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ.
    | ನವೀದ ಮುಲ್ಲಾ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts