More

    50 ಎಕರೆಯಲ್ಲಿ ನಾನಾ ಬೆಳೆ

    ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪ

    ಕೃಷಿಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಪೊನ್ನಂಪೇಟೆ ತಾಲೂಕು ಮಾಯಮುಡಿ ಗ್ರಾಮದ ಚೆಪ್ಪುಡಿರ ರಾಧಾ ಅಚ್ಚಯ್ಯ ಸಾಕ್ಷಿ.

    50 ಎಕರೆ ಕೃಷಿ ಭೂಮಿ ಹೊಂದಿರುವ ಇವರು ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕಾಫಿ, ಕಾಳುಮೆಣಸು, ಅಡಕೆ, ಭತ್ತ ಇವರ ಪ್ರಮುಖ ಬೆಳೆಯಾಗಿದ್ದು, ಇದರಿಂದ ವಾರ್ಷಿಕ ಲಕ್ಷಾಂತರ ರೂ. ಆದಾಯ ಬರುತ್ತಿದೆ. ಜತೆಗೆ ಬಾಳೆ, ಹೂವು, ಹಣ್ಣಿನ ಗಿಡಗಳನ್ನು ಕೂಡ ಬೆಳೆಯಲಾಗಿದೆ. ಮನೆ ಸುತ್ತಲು ಕೈತೋಟ ನಿರ್ಮಿಸಿ ಅನೇಕ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ಮೂವತ್ತು ವರ್ಷಕ್ಕೂ ಹಿಂದಿನ ಬೊನ್ಸಾಯ್ ಗಿಡಗಳನ್ನು ಪೋಷಿಸಿಕೊಂಡು ಬರಲಾಗುತ್ತಿದೆ.

    ಕಾಲೇಜು ದಿನಗಳಿಂದಲೇ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ರಾಧಾ ಅಚ್ಚಯ್ಯ, ಮದುವೆಯ ನಂತರವೂ ಗಂಡನ ಮನೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಇತರೆಡೆ ಭತ್ತದ ಗದ್ದೆಗಳನ್ನು ಪಾಳು ಬೀಡುತ್ತಿರುವ ಸಂದರ್ಭದಲ್ಲಿ ಇವರು ಭತ್ತ ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಸುಮಾರು 5 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈ ಬಾರಿ ಜೀರಿಗೆ ಸಣ್ಣ ಭತ್ತ ಬೆಳೆದಿದ್ದಾರೆ. ಇದು ಇತರ ಭತ್ತದಂತಲ್ಲ, ದುಬಾರಿ ಬೆಲೆಯ ಅಕ್ಕಿಯಂತೆ ಆಹಾರಕ್ಕೆ ರುಚಿಕೊಡುತ್ತದೆ ಎನ್ನುತ್ತಾರೆ. ಕೀನ್ಯಾ ದೇಶದಲ್ಲಿ ನೆಲೆಸಿರುವ ಪುತ್ರ ಅಪ್ಪಣ್ಣ ಅಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿನ ಕೃಷಿ ಅನುಭವಗಳನ್ನು ತಾಯಿಗೆ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ, ಅವರು ಕೂಡ ಕೃಷಿಯಲ್ಲಿ ವಿದೇಶಿ ಮಾದರಿಯಲ್ಲಿ ಬೆಳೆ ಬೆಳೆಯುವ ಪ್ರಯೋಗ ಮಾಡುತ್ತಿದ್ದಾರೆ. ಸದ್ಯ ಪಾಲಿ ಹೌಸ್‌ನಲ್ಲಿ ತರಕಾರಿ ಬೆಳೆಯುವ ಹಾಗೂ ಸೋಲಾರ್ ಪಂಪ್‌ಗಳ ಮೂಲಕ ನೀರು ಹರಿಸುವ ಚಿಂತನೆ ಹೊಂದಿದ್ದಾರೆ.
    ರಾಧಾ ಅಚ್ಚಯ್ಯ ಅವರು ಕೃಷಿಯ ಜತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದು, ಲಯನ್ಸ್ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಭರಿಸುವುದೂ ಸೇರಿದಂತೆ ಇತರ ಸಾಮಾಜಿ ಕಾರ್ಯದೊಂದಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ.

    20ಕ್ಕೂ ಹೆಚ್ಚು ದನ-ಕರುಗಳ ಸಾಕಣೆ: ಹಸು ಸಾಕಣೆಯಲ್ಲಿಯೂ ಆಸಕ್ತಿ ತೋರಿರುವ ರಾಧಾ ಅಚ್ಚಯ್ಯ, 20ಕ್ಕೂ ಹೆಚ್ಚಿನ ದೇಸಿ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಇವುಗಳಿಗೆ 3 ಕೊಟ್ಟಿಗೆ ನಿರ್ಮಿಸಲಾಗಿದೆ. ಗಬ್ಬದ ಹಸು, ಹಾಲು ಕರೆಯುವ ಹಾಗೂ ಇತರೆ ದನಗಳಿಗೆ ಪ್ರತ್ಯೇಕ ಕೊಟ್ಟಿಗೆ ನಿರ್ಮಿಸಲಾಗಿದೆ. ತಮ್ಮಲ್ಲಿ ಉತ್ಪತ್ತಿಯಾಗುವ ಹಾಲನ್ನು ಸ್ಥಳೀಯವಾಗಿಯೇ ಮಾರಾಟ ಮಾಡಲಾಗುತ್ತಿದೆ. ಬೆಣ್ಣೆ ಹಾಗೂ ತುಪ್ಪ ಕೂಡ ತಯಾರಿಸುತ್ತಿದ್ದಾರೆ. ಸಗಣಿ ಮತ್ತು ಗಂಜಲದಿಂದ ಜೀವಾಮೃತ ತಯಾರಿಸಿ ತೋಟಕ್ಕೆ ಸಿಂಪಡಿಸಲಾಗುತ್ತಿದೆ. ಇದರಿಂದ ಮಣ್ಣಿನಲ್ಲಿ ಎರೆಹುಳುಗಳ ಸಂತತಿ ಹೆಚ್ಚಿ ಮಣ್ಣು ಫಲವತ್ತಾಗುತ್ತಿದೆ. ಏಕ ಕಾಲಕ್ಕೆ 16 ಬ್ಯಾರೆಲ್‌ನಲ್ಲಿ ಜೀವಾಮೃತ ತಯಾರಿಸಲಾಗುತ್ತಿದೆ. 20 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿ ಕೃಷಿ ಮಾಡಲಾಗುತ್ತಿದೆ.

    ಮೀನು ಸಾಕಣೆ
    ಜಮೀನಿನಲ್ಲಿ ಮೂರು ಕೆರೆಗಳನ್ನು ನಿರ್ಮಿಸಿ ವಿವಿಧ ತಳಿಯ ಮೀನು ಸಾಕಣೆಯಲ್ಲೂ ರಾಧಾ ಅಚ್ಚಯ್ಯ ತೊಡಗಿಸಿಕೊಂಡಿದ್ದಾರೆ. ಕಾಟ್ಲ, ರೋಹು, ಸಿಲ್ವರ್ ಕ್ರಾಪ್, ಕಾಮನ್ ಕ್ರಾಪ್, ಥಿಲೇಪಿಯಾ ಮೀನುಗಳ ಸಾಕಣೆ ಮಾಡಲಾಗುತ್ತಿದೆ. ಇವುಗಳಿಂದಲೂ ಉತ್ತಮ ಆದಾಯ ಗಳಿಸಲಾಗುತ್ತಿದೆ.

    ಡ್ರಾಗನ್ ಫ್ರೂಟ್ ಬೆಳೆ
    ತೋಟದ ಅಂಚಿನಲ್ಲಿ 40ಕ್ಕೂ ಹೆಚ್ಚು ಡ್ರಾೃಗನ್ ಫ್ರೂಟ್ ಗಿಡಗಳನ್ನು ಬೆಳೆಸಿ ಪೋಷಿಸಲಾಗುತ್ತಿದೆ. ಉತ್ತಮವಾಗಿ ಬೆಳೆದ ಗಿಡಗಳಿಂದ ಕಳೆದ ವರ್ಷ ಉತ್ತಮ ಆದಾಯ ಗಳಿಸಿದ್ದಾರೆ. ಇವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಲಾಗುತ್ತಿದೆ. ತೋಟಕ್ಕೆ ಆನೆಗಳ ಕಾಟ ಅಧಿಕವಾಗಿತ್ತು. ಈಗ ತೋಟದ ಸುತ್ತಲೂ ಸೋಲಾರ್ ಬೆಲೆ ಅಳವಡಿಸಲಾಗಿದ್ದು, ಆನೆಗಳ ಕಾಟ ನಿಯಂತ್ರಣಕ್ಕೆ ಬಂದಿದೆ.

    ಕೃಷಿ ನನಗೆ ಆಸಕ್ತಿಯ ಕ್ಷೇತ್ರ. ಮೊದಲಿನಿಂದಲೂ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದೇನೆ. ಮಗ ವಿದೇಶದಲ್ಲಿದ್ದು, ಅವನು ಕೂಡ ಕೃಷಿಯಲ್ಲಿ ನಿರತನಾಗಿದ್ದಾನೆ. ಅವನ ಅನುಭವಗಳನ್ನು ಕೂಡ ಇಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಜತೆಗೆ ಹೂವಿನ ತೋಟ ನಿರ್ಮಾಣದಲ್ಲೂ ಆಸಕ್ತಿ ಹೊಂದಿದ್ದು, ನೂರಾರು ರೀತಿಯ ಬೊನ್ಸಾಯ್ ಗಿಡಗಳನ್ನು ಪೋಷಿಸಲಾಗುತ್ತಿದೆ.
    ಚೆಪ್ಪುಡಿರ ರಾಧಾ ಅಚ್ಚಯ್ಯ, ರೈತ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts