ಧಾರವಾಡ: ಕರೊನಾ ನಿಯಂತ್ರಣದ ವ್ಯಾಕ್ಸಿನೇಷನ್ ನಿರ್ವಹಣೆಗಾಗಿಯೇ ಕಾಶಿ ಜಗದ್ಗುರು ಪೀಠದಿಂದ ಪಿಎಂ ಕೇರ್ಸ್ ಫಂಡ್ಗೆ 5 ಲಕ್ಷ ರೂ. ದೇಣಿಗೆಯನ್ನು ವಾರಣಾಸಿ ವಿಭಾಗಾಧಿಕಾರಿ ದೀಪಕ್ ಅಗರ್ವಾಲ್ ಮೂಲಕ ಭಾನುವಾರ ಸಮರ್ಪಿಸಲಾಯಿತು.
ನಂತರ ಮಾತನಾಡಿದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕರೊನಾದಿಂದ ಆಗಿರುವ ಸಾವು-ನೋವುಗಳ ಸಂಖ್ಯೆ ಅಧಿಕಗೊಂಡು ಜನರು ಭಯಭೀತಗೊಂಡಿದ್ದಾರೆ. ಸರ್ವರನ್ನು ರಕ್ಷಿಸುವ ವೈಜ್ಞಾನಿಕ ರಕ್ಷಾಕವಚ ಅಂದರೆ ಅದು ವ್ಯಾಕ್ಸಿನೇಷನ್ ಮಾತ್ರ. ಲಸಿಕೆಯ ರಕ್ಷಾಕವಚ ಭಾರತೀಯರಿಗೆ ದೊರೆಯಲೆಂಬ ಉದ್ದೇಶದಿಂದ ಕಾಶಿ ಪೀಠವು ತನ್ನ ಪಾಲಿನ ದೇಣಿಗೆಯನ್ನು ಕೊಡಮಾಡಿದೆ. ಅಲಕ್ಷ್ಯ ವಹಿಸದೆ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
‘ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಪೀಠವು ಕೋವಿಡ್ ಕೇರ್ ಸೆಂಟರ್ ತೆರೆಯುವುದರೊಂದಿಗೆ, ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಆಶ್ರಯ, ಊಟ ಹಾಗೂ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿರುವುದು ಆದರ್ಶಪ್ರಾಯವಾದ ಸಾಮಾಜಿಕ ಸೇವೆ’ ಎಂದು ದೀಪಕ್ ಅಗರ್ವಾಲ್ ಪ್ರಶಂಶಿಸಿದರು.