More

    ನೌಕರಿ ಆಮಿಷವೊಡ್ಡಿ ಐನೂರು ಜನರಿಗೆ 5 ಕೋಟಿ ವಂಚನೆ; ಸಂತ್ರಸ್ತರ ಖೆಡ್ಡಾಗೆ ಬಿದ್ದ ವಂಚಕ!

    ಬೆಂಗಳೂರು: ನೌಕರಿ ಕೊಡಿಸುವುದಾಗಿ ನಂಬಿಸಿ ತರಬೇತಿ ನೆಪದಲ್ಲಿ ಕೋಟ್ಯಂತರ ರೂ. ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ವಂಚಕನನ್ನು ಸಂತ್ರಸ್ತರೇ ಗಾಳ ಎಸೆದು ಪೊಲೀಸರಿಗೆ ಹಿಡಿದುಕೊಂಡಿದ್ದಾರೆ.

    ಆಂಧ್ರ ಪ್ರದೇಶದ ವಿಜಯವಾಡ ನಿವಾಸಿ ಕೆ.ವಿ. ಪವನ್ ಕುಮಾರ್ (38) ಬಂಧಿತ. ಈತನ ವಿರುದ್ಧ 24 ಮಂದಿ ದೂರು ಸಲ್ಲಿಸಿದ್ದು, ಐನೂರು ಉದ್ಯೋಗ ಆಕಾಂಕ್ಷಿಗಳಿಗೆ 5 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಂಬಿಎ ಪದವೀಧರ ಪವನ್, ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಸುಲಭವಾಗಿ ಹಣ ಸಂಪಾದನೆ ಉದ್ದೇಶದಿಂದ ವೈಟ್‌ಫೀಲ್ಡ್ ಟೆಕ್‌ಪಾರ್ಕ್‌ನಲ್ಲಿ ಎರಡು ಕಂಪನಿ ತೆರೆದಿದ್ದ. ನೌಕರರನ್ನು ನೇಮಕ ಮಾಡಿಕೊಂಡು ಅವರ ಮೂಲಕ ಉದ್ಯೋಗ ಆಕಾಂಕ್ಷಿಗಳಿಗೆ ಕರೆ ಮಾಡಿಸಿ ಸ್‌ಟಾವೇರ್ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ನೋಂದಣಿ ಶುಲ್ಕ ಪಡೆಯುತ್ತಿದ್ದ. ಹೆಚ್ಚಾಗಿ ಆಂಧ್ರ ಮೂಲದ ವಿದ್ಯಾವಂತರನ್ನೇ ಟಾರ್ಗೆಟ್ ಮಾಡಿದ್ದ. ವರ್ಷಕ್ಕೆ 5 ಲಕ್ಷ ರೂ. ಸಂಬಳ ಸಿಗುವ ಕೆಲಸ ಮಾಡಿಸುವುದಾಗಿ ನಂಬಿಸಿ ಪ್ರತಿಯೊಬ್ಬರ ಬಳಿ 1 ರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದ.
    ಆನಂತರ ತರಬೇತಿ ನೆಪದಲ್ಲಿ ಲಕ್ಷಾಂತರ ರೂ. ಪಡೆದಿದ್ದ. ನೋಂದಣಿ ಮಾಡಿಕೊಂಡ ಯುವಕ, ಯುವತಿಯರನ್ನು ತರಬೇತಿಗೆಂದು ಕಚೇರಿಗೆ ಕರೆಸಿಕೊಂಡು ಅವರ ಕಡೆಯಿಂದ ಮತ್ತೆ ಉದ್ಯೋಗ ಆಕಾಂಕ್ಷಿಗಳಿಗೆ ಕರೆ ಮಾಡಿಸುತ್ತಿದ್ದ.

    ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್‌ಗಳನ್ನು ಕೊಟ್ಟು ತಿಂಗಳ ಸಂಬಳ ಕೂಡ ನೀಡಿ ಅವರ ಮೂಲಕ ಇತರರಿಗೆ ಗಾಳ ಹಾಕುತ್ತಿದ್ದ. ಇತ್ತೀಚೆಗೆ ಏಕಾಏಕಿ ಕಂಪನಿ ಕಚೇರಿಗಳನ್ನು ಮುಚ್ಚಿಕೊಂಡು ದೆಹಲಿಗೆ ಪರಾರಿಯಾಗಿದ್ದ. ಹಣ ಕಳೆದುಕೊಂಡು ಕಂಗಾಲಾಗಿದ್ದ ಯುವಕ, ಯುವತಿಯರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

    ಇದರ ನಡುವೆ ಹಣ ಕಳೆದುಕೊಂಡ ಸಂತ್ರಸ್ತರು, ಪವನ್ ಕುಮಾರ್ ಮೊಬೈಲ್ ನಂಬರ್ ಸಂಗ್ರಹಿಸಿ ಆತನಿಗೆ ಕರೆ ಮಾಡಿದ್ದರು. 40 ಯುವಕ, ಯುವತಿಯರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೇವೆ. ನಿಮ್ಮ ಕಡೆಯಿಂದ ಸಹಾಯ ಬೇಕೆಂದು ಕೋರಿದ್ದರು. ಅದನ್ನು ನಂಬಿದ ಪವನ್, ತಲಾ 1 ಲಕ್ಷ ರೂ. ಕೊಡಬೇಕೆಂದು ಷರತ್ತು ವಿಧಿಸಿದ್ದ. ಉದ್ಯೋಗ ಆಕಾಂಕ್ಷಿಗಳು ಒಪ್ಪಿ ಹಣ ಸಿದ್ಧವಾಗಿದೆ ಎಂದು ಹೇಳಿದಾಗ ದೆಹಲಿಯಿಂದ ಬಂದಿದ್ದ. ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡುವುದಾಗಿ ಪವನ್ ಕುಮಾರ್ ಹೇಳಿದಾಗ ಅಲ್ಲಿಗೆ ಹೋದ ಉದ್ಯೋಗ ಆಕಾಂಕ್ಷಿಗಳನ್ನು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts