More

    4735 ಅಭ್ಯರ್ಥಿಗಳ ಹಣೆಬರಹ ಬರೆದ ಮತದಾರ

    ಕಾರವಾರ: ಜಿಲ್ಲೆಯ ಕರಾವಳಿಯ ಐದು ತಾಲೂಕುಗಳ 101 ಗ್ರಾಪಂಗಳ 1264 ಸ್ಥಾನಗಳಿಗೆ ಸ್ಪರ್ಧೆ ಮಾಡಿದ 4735 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

    ಮಂಗಳವಾರ ಬೆಳಗ್ಗೆ 7 ರಿಂದ ಸಾಯಂಕಾಲದವರೆಗೆ ಮತದಾನ ನಡೆಯಿತು. ಕೆಲ ಸಣ್ಣಪುಟ್ಟ ಗಲಾಟೆ, ಗೊಂದಲ ಹೊರತುಪಡಿಸಿ ಬಹುತೇಕ ಪ್ರಕ್ರಿಯೆ ಶಾಂತಿಯುತವಾಗಿತ್ತು. ಕಳೆದ 15 ದಿನಗಳಿಂದ ವಿವಿಧ ರೀತಿಯಲ್ಲಿ ಪ್ರಚಾರ ನಡೆಸಿದ್ದ ಅಭ್ಯರ್ಥಿಗಳು ಮಂಗಳವಾರ ಮತಗಟ್ಟೆಗಳ ಎದುರು ದೀನರಾಗಿ ನಿಂತು ನಡು ಬಗ್ಗಿಸಿ ನಮಸ್ಕರಿಸಿ ಮತ ಯಾಚಿಸಿದರು. ಹೊರಗೆ ಅಭ್ಯರ್ಥಿಗಳ ಪರ ಟೇಬಲ್ ಹಾಕಿ ಪ್ರಚಾರ ನಡೆಸುವ ಅಬ್ಬರವೂ ಎಲ್ಲೆಡೆ ಜೋರಾಗಿತ್ತು. ಬೆಳಗಿನಿಂದಲೇ ಸಾಕಷ್ಟು ಜನ ಆಸಕ್ತಿಯಿಂದ ಆಗಮಿಸಿ ಮತದಾನ ಮಾಡಿದರು. ಸಾಯಂಕಾಲದ ಹೊತ್ತಿಗೆ ಮತಗಟ್ಟೆಗಳ ಎದುರು ದೊಡ್ಡ ಸರದಿ ಕಂಡುಬಂತು.

    ಕೋವಿಡ್ ನಿಯಮ ಪಾಲನೆ: ಎಲ್ಲ ಮತಗಟ್ಟೆಗಳ ಎದುರು 6 ಅಡಿ ಅಂತರದಲ್ಲಿ ಬಣ್ಣದಲ್ಲಿ ಗುರುತು ಹಾಕಿ ಮತದಾರರು ಪರಸ್ಪರ ಅಂತರದಲ್ಲಿ ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಯಲ್ಲೂ ಕೈಗೆ ಸ್ಯಾನಿಟೈಸರ್ ಸಿಂಪಡಿಸಲು, ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ಪರೀಕ್ಷಿಸಲು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗಿತ್ತು. ಕುಮಟಾ ತಾಲೂಕಿನ ಐಗಳಕುರ್ವೆ ಮತಗಟ್ಟೆಗೆ ದೋಣಿಯಲ್ಲಿ ಮತಪೆಟ್ಟಿಗೆಯನ್ನು ಕೊಂಡೊಯ್ದು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಶಾಲೆಗಳಲ್ಲೇ ಬಿಸಿಯೂಟ, ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಯಿಂದ 200 ಮೀಟರ್ ಹೊರಗೆ ಗೆರೆ ಹಾಕಲಾಗಿತ್ತು. ಕೆಂಪು ಧ್ವಜ ಹಾಗಿ ಅದರೊಳಗೆ ವಾಹನ ನಿಲ್ಲಿಸದಂತೆ ಪ್ರಚಾರ ಮಾಡದಂತೆ ಅಧಿಕಾರಿಗಳು ತಡೆದರು. ಶಿರವಾಡದ ಸೂಕ್ಷ್ಮ ಮತಗಟ್ಟೆಯ ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಕಾರು ತಂದ ವ್ಯಕ್ತಿಯನ್ನು ಪೊಲೀಸರು ತಡೆದು ಹೊರಗೆ ಕಳಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರು ಚಾಲಕನ ನಡುವೆ ಮಾತಿನ ಚಕಮಕಿ ನಡೆಯಿತು.

    ಹೊರ ರಾಜ್ಯದಿಂದಲೂ ಆಗಮನ: ಎಲ್ಲ ಮತಗಟ್ಟೆಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ವಯಸ್ಸಾದವರು, ನಡೆಯಲಾಗದವರನ್ನು ವೀಲ್ ಚೇರ್ ಮೇಲೆ ಕರೆತಂದು ಮತದಾನ ಮಾಡಿಸಿದ ಸನ್ನಿವೇಶ ಹಲವು ಮತಗಟ್ಟೆಗಳಲ್ಲಿ ಕಂಡುಬಂತು. ಗೋವಾದಲ್ಲಿ ಉದ್ಯೋಗದಲ್ಲಿರುವ ಕಾರವಾರದ ಸದಾಶಿವಗಡ, ಹಣಕೋಣ, ಗೋಟೆಗಾಳಿ, ಮಲ್ಲಾಪುರ ಸೇರಿ ವಿವಿಧೆಡೆಗಳ ಜನ ಅಲ್ಲಿಂದ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

    ಪಂಚಾಯಿತಿ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ: ಪಂಚಾಯಿತಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಕಾರವಾರದ ಚೆಂಡಿಯಾ ಮತಗಟ್ಟೆಯಲ್ಲಿ ಮತದಾನ ಮಾಡಿ ಅವರು ಮಾತನಾಡಿದರು. ನಾನು ಇದೇ ಚೆಂಡಿಯಾದ ಗ್ರಾಪಂ ಸದಸ್ಯೆಯಾಗಿದ್ದೆ. ನಂತರ ತಾಪಂ ಸದಸ್ಯೆ, ಅಧ್ಯಕ್ಷೆಯಾಗಿ, ಶಾಸಕಿಯಾಗಿದ್ದೇನೆ. ಗ್ರಾಮೀಣ ಚುನಾವಣೆ ಹಾಗೂ ಜನರ ಸಂಕಷ್ಟಗಳ ಅರಿವು ನನಗಿದೆ. ಗ್ರಾಪಂ ಎಂದರೆ ದೇವಾಲಯವಿದ್ದಂತೆ ಇಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಎಲ್ಲೆಡೆ ಬಿಜೆಪಿ ಪರ ವಾತಾವರಣ ಕಂಡುಬರುತ್ತದೆ ಎಂದರು. ಮಾಜಾಳಿಯ ಮತಗಟ್ಟೆಯಲ್ಲಿ ಮಾಜಿ ಶಾಸಕ ಸತೀಶ ಸೈಲ್ ಮತದಾನ ಮಾಡಿದರು.

    ಮತಪೆಟ್ಟಿಗೆಗೆ ನಮಸ್ಕರಿಸಿದ ಅಭ್ಯರ್ಥಿಗಳು: ಮತದಾನ ಪ್ರಾರಂಭಕ್ಕೂ ಪೂರ್ವದಲ್ಲಿ ಹಲವು ಅಭ್ಯರ್ಥಿಗಳು ಒಳಗೆ ತೆರಳಿ ಮತಪೆಟ್ಟಿಗೆಗೆ ನಮಸ್ಕಾರ ಮಾಡುವುದು ಕಂಡುಬಂತು. ಸದಾಶಿವಗಡ ಗ್ರಾಪಂನಲ್ಲಿ ಸ್ಪರ್ಧೆ ಮಾಡಿರುವ ಮಂಜುನಾಥ ನಾಯ್ಕ ಬೆಳಗ್ಗೆ 7 ಗಂಟೆಗೂ ಮುಂಚೆ ತೆರಳಿ ಮತಪೆಟ್ಟಿಗೆಗೆ ನಮಸ್ಕರಿಸಿದರು. ಇನ್ನೂ ಹಲವು ಕಡೆ ಇದೇ ರೀತಿ ನಡೆದಿದೆ.

    ಚೀಟಿಯ ಹಿಂದೆ ಚಿಹ್ನೆ
    ಮತದಾರರ ಗುರುತಿನ ಸಂಖ್ಯೆ ಬರೆದುಕೊಡುವ ಚೀಟಿಯ ಹಿಂದೆ ಅಭ್ಯರ್ಥಿಗಳ ಚಿಹ್ನೆಗಳನ್ನು ಮುದ್ರಿಸಿ ವಿತರಿಸುವ ಮೂಲಕ ಅಕ್ರಮ ಎಸಗಲಾಗಿದೆ ಎಂಬ ಆರೋಪ ಅಸ್ನೋಟಿ ಗ್ರಾಪಂನ ಮಧೇವಾಡ ಮತಗಟ್ಟೆಯಲ್ಲಿ ಕೇಳಿ ಬಂದಿದೆ. ಚುನಾವಣೆಯನ್ನು ರದ್ದುಪಡಿಸಬೇಕು ಎಂದು ಅಭ್ಯರ್ಥಿ ಅರುಣಕುಮಾರ ಸಾಳುಂಕೆ ಆಗ್ರಹಿಸಿದ್ದಾರೆ.

    ಆಗದ್ದೇನು..?: ಮತಗಟ್ಟೆ ಅಧಿಕಾರಿಗಳಿಗೆ ಪಟ್ಟಿಯಲ್ಲಿರುವ ಮತದಾರರ ಗುರುತಿನ ಸಂಖ್ಯೆ ಶೀಘ್ರ ಹುಡುಕಲು ಅನುಕೂಲವಾಗಲಿ ಎಂದು ಅಭ್ಯರ್ಥಿಗಳ ಪರ ಕೆಲವರು ಮತಗಟ್ಟೆಯ ಹೊರಗೆ ಟೇಬಲ್ ಹಾಕಿ ಕುಳಿತು ನಂಬರ್ ತೆಗೆದು ಸಣ್ಣ ಖಾಲಿ ಚೀಟಿಯಲ್ಲಿ ಬರೆದುಕೊಡುವ ವಾಡಿಕೆ ಇದೆ. ಅಸ್ನೋಟಿ ಗ್ರಾಪಂನಲ್ಲಿ ಪೂಜಾ ಪ್ರಶಾಂತ ಕೊಠಾರಕರ್, ಶ್ಯಾಮ ದತ್ತಾ ನಾಯ್ಕ, ಸುಧಾ ಶಂಕರ ನಾಯ್ಕ, ಸಂಜಯ ಗಣಪತಿ ಸಾಳುಂಕೆ ಒಂದು ವಾರ್ಡ್​ನಿಂದ ಸ್ಪರ್ಧಿಸಿದ್ದರು. ‘ಅವರ ಚಿಹ್ನೆಗಳಾದ ಟೇಬಲ್, ಟೀ ಕಪ್, ಕುಕ್ಕರ್ ಹಾಗೂ ಆಟೋ ರಿಕ್ಷಾವನ್ನು ಸಣ್ಣ ಚೀಟಿಗಳಲ್ಲಿ ಮುದ್ರಿಸಿ, ಇನ್ನೊಂದು ಪಕ್ಕದಲ್ಲಿ ಮತದಾರರ ಗುರುತಿನ ಚೀಟಿಯನ್ನು ಬರೆದು ಮತಗಟ್ಟೆಗೆ ಬರುವ ಮತದಾರರ ಕೈಗೆ ನೀಡಲಾಗುತ್ತಿತ್ತು. ಬೆಳಗ್ಗೆ 7 ರಿಂದ 19 ಗಂಟೆಯವರೆಗೆ ಇದೇ ರೀತಿ ಚೀಟಿಗಳನ್ನು ನೀಡಲಾಗಿದ್ದು, 253 ಮತಗಳು ಚಲಾವಣೆಯಾಗಿದ್ದವು. ನಾನು ಆಕ್ಷೇಪಣೆ ಮಾಡಿದ ನಂತರ ನಿಲ್ಲಿಸಲಾಯಿತು’ ಎಂಬುದು ಪ್ರತಿಸ್ಪರ್ಧಿ ಅಭ್ಯರ್ಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅರುಣ ಕುಮಾರ ಸಾಳುಂಕೆ ಅವರ ದೂರು. ‘ಮತಗಟ್ಟೆಯ 100 ಮೀಟರ್ ಒಳಗೆ ಯಾವುದೇ ಚಿಹ್ನೆಯನ್ನೂ ತೋರಿಸಿ ಪ್ರಚಾರ ಮಾಡುವಂತಿಲ್ಲ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಮತದಾರರಿಗೆ ನೀಡಿದ ಚೀಟಿಗಳ ಹಿಂದೆ ಚಿಹ್ನೆಗಳಿರುವುದಕ್ಕೆ ಸಾಕಷ್ಟು ಸಾಕ್ಷಿ ಸಿಕ್ಕಿದೆ ಎಂದು ಅವರು ವಾದಿಸಿದ್ದಾರೆ.

    ನಾನು ಯಾವುದೇ ಅಕ್ರಮ ಮಾಡಿಲ್ಲ. ಈ ಹಿಂದೆ ಕೊಂಕಣ ಮರಾಠಾ ಸಂಘಟನೆಯ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದೆ. ಈಗಲೂ ಸೋಲಿನ ಭೀತಿಯಿಂದ ಪ್ರತಿಸ್ಪರ್ಧಿ ಅಭ್ಯರ್ಥಿ ನನ್ನ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ.
    ಸಂಜಯ ಸಾಳುಂಕೆ ಅಸ್ನೋಟಿ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸ್ಪರ್ಧಿ

    ಮತದಾರ ಗುರುತನ್ನು ಮತಗಟ್ಟೆಯ ಒಳಗೆ ತೆಗೆದುಕೊಂಡು ಹೋಗಲು ಚುನಾವಣಾ ಅಧಿಕಾರಿಗಳು ಅವಕಾಶ ನೀಡಿರುವುದು ಅಕ್ರಮವಾಗಿದೆ. 10 ಗಂಟೆಯ ನಂತರ ಈ ಷಡ್ಯಂತ್ರ ನನ್ನ ಗಮನಕ್ಕೆ ಬಂತು. ಅದುವರೆಗೆ ಸಾಕಷ್ಟು ಮತದಾನವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಇಡೀ ಮತದಾನ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ತಹಸೀಲ್ದಾರರಿಗೆ ಮನವಿ ನೀಡುತ್ತೇನೆ. ನ್ಯಾಯ ಸಿಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇನೆ.
    ಅರುಣ ಕುಮಾರ ಸಾಳುಂಕೆ ಅಸ್ನೋಟಿ ಗ್ರಾಪಂ ಅಭ್ಯರ್ಥಿ

    ನಮಗೆ ಯಾವುದೇ ಲಿಖಿತ ದೂರು ಬಂದಿಲ್ಲ. ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿ ಹೋಗಿ ಬಗೆಹರಿಸಿದ್ದಾರೆ. ನಾನು ಭೇಟಿ ನೀಡಿದಾಗಲೂ ಅಂಥ ಯಾವುದೇ ಅಂಶಗಳು ಕಂಡುಬಂದಿಲ್ಲ.
    ರಾಮಚಂದ್ರ ಕಟ್ಟಿ ತಹಸೀಲ್ದಾರ್ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts