More

    ಜಿಲ್ಲೆಯಲ್ಲಿ 41 ಅಮೃತ ಗ್ರಾಪಂಗಳು: ಅಮೃತ ಗ್ರಾಪಂ ಯೋಜನೆಗೆ ಇಂದು ಚಾಲನೆ

    ಕೋಲಾರ : 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅಮೃತ ಗ್ರಾಪಂ ಹಾಗೂ ಅಮೃತ ಗ್ರಾಮೀಣ ವಸತಿ ಯೋಜನೆಗೆ ಸೆ. 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಜಿಲ್ಲೆಯ ಒಟ್ಟು 41 ಗ್ರಾಪಂಗಳು ಆಯ್ಕೆಯಾಗಿವೆ.

    ಆಯಾ ಜಿಲ್ಲೆಗಳಲ್ಲಿನ ಗ್ರಾಪಂಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯಾ ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಡಿಸಿ, ಜಿಪಂ ಸಿಇಒ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸೇರಿ 7 ಸದಸ್ಯರ ಸಮಿತಿಗೆ ಆಯ್ಕೆ ಜವಾಬ್ದಾರಿ ವಹಿಸಲಾಗಿತ್ತು.
    ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ ಸಂಖ್ಯೆಗನುಗುಣವಾಗಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.

    ಅಮೃತ ಗ್ರಾಪಂ: ಗ್ರಾಪಂಗಳಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ಅಮೃತ್ ಗ್ರಾಪಂ ಯೋಜನೆಯಡಿ ಕೋಲಾರ, ಮುಳಬಾಗಿಲು ತಾಲೂಕಿನ ತಲಾ 4 ಗ್ರಾಪಂ, ಮಾಲೂರು, ಶ್ರೀನಿವಾಸಪುರದ ತಲಾ 3 ಗ್ರಾಪಂ, ಬಂಗಾರಪೇಟೆ, ಕೆಜಿಎಫ್‌ನ ತಲಾ 2 ಗ್ರಾಪಂ ಸೇರಿ ಒಟ್ಟು 18 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ.

    ಗ್ರಾಪಂ ವಿವರ: ಕೋಲಾರ- ಕ್ಯಾಲನೂರು, ನರಸಾಪುರ, ವಕ್ಕಲೇರಿ, ವೇಮಗಲ್. ಮಾಲೂರು -ಶಿವಾರಪಟ್ಟಣ, ನೊಸಗೆರೆ, ಚಿಕ್ಕತಿರುಪತಿ. ಬಂಗಾರಪೇಟೆ-ಐನೋರಹೊಸಹಳ್ಳಿ, ಸೂಲಿಕುಂಟೆ. ಕೆಜಿಎಫ್-ಕ್ಯಾಸಂಬಳ್ಳಿ, ಎನ್.ಜಿ.ಹುಲ್ಕೂರು. ಮುಳಬಾಗಿಲು-ತಾಯಲೂರು, ಆವಣಿ, ಉತ್ತನೂರು, ಕಪ್ಪಲಮಡಗು ಹಾಗೂ ಶ್ರೀನಿವಾಸಪುರ-ಆರಿಕುಂಟೆ, ರಾಯಲ್ಪಾಡು, ಯಲ್ದೂರು ಗ್ರಾಪಂಗಳು ಆಯ್ಕೆಯಾಗಿವೆ.

    ಯೋಜನೆಗಳು: ಈ ಪಂಚಾಯಿತಿಗಳಲ್ಲಿ ಬೀದಿದೀಪ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವುದು, ಶೇ. 100 ಘನತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ನಿರ್ವಹಿಸುವುದು, ಗ್ರಾಪಂ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ ಉದ್ಯಾನ ನಿರ್ಮಾಣ, ಗ್ರಾಪಂ ಗ್ರಂಥಾಲಯಗಳ ಡಿಜಿಟಲೀಕರಣ, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಗೃಹ, ಶಾಲೆಗಳಲ್ಲಿ ಆಟದ ಮೈದಾನ, ಕಾಂಪೌಂಡ್ ನಿರ್ಮಾಣ ಹಾಗೂ ಕೆರೆ ಮತ್ತು ಕಲ್ಯಾಣಿಗಳ ಪುನಶ್ಚೇತನ ಕೈಗೊಳ್ಳಬೇಕಿದೆ.
    ಗ್ರಾಪಂ ವಿವರ (ಅಮೃತ ವಸಿ ಯೋಜನೆ): ಜಿಲ್ಲೆಯ 23 ಗ್ರಾಪಂಗಳಲ್ಲಿ ಅಮೃತ ವಸತಿ ಯೋಜನೆ ಅನುಷ್ಠಾನ ಮಾಡಲು ಸರ್ಕಾರ ಆದೇಶಿಸಿದ್ದು, ಕೋಲಾರ, ಮಾಲೂರು, ಬಂಗಾರಪೇಟೆ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕಿನ ತಗಲಾ 4 ಗ್ರಾಪಂ ಹಾಗೂ ಕೆಜಿಎಫ್‌ನ 3 ಗ್ರಾಪಂ ಸೇರಿ ಒಟ್ಟು 23 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ.

    ಗ್ರಾಪಂಗಳ ವಿವರ: ಕೋಲಾರ-ವಕ್ಕಲೇರಿ ಗ್ರಾಪಂ, ಅಮ್ಮನಲ್ಲೂರು, ಚನ್ನಸಂದ್ರ, ಮಾರ್ಜೇನಹಳ್ಳಿ, ಮಾಲೂರು -ನೂಟವೆ, ಕೆಜಿ.ಹಳ್ಳಿ, ದಿನ್ನಹಳ್ಳಿ, ಹಸಾಂಡಹಳ್ಳಿ. ಬಂಗಾರಪೇಟೆ-ಆಲಂಬಾಡಿಜೋತೇನಹಳ್ಳಿ, ದೊಡ್ಡೂರು ಕರಪನಹಳ್ಳಿ, ಬಲಮಂದೆ, ಹುಲಿಬೆಲೆ. ಕೆಜಿಎಫ್-ಶ್ರೀನಿವಾಸಸಂದ್ರ, ಸುಂದರಪಾಳ್ಯ, ಕಂಗಾಂಡ್ಲಹಳ್ಳಿ, ಮುಳಬಾಗಿಲು-ಮುದಿಗೆರೆ, ಎಚ್. ಗೊಲ್ಲಹಳ್ಳಿ, ಊರುಕುಂಟೆ ಮಿಟ್ಟೂರು, ಗುಡಿಪಲ್ಲಿ ಹಾಗೂ ಶ್ರೀನಿವಾಸಪುರ-ಕೋಡಿಪಲ್ಲಿ, ಲಕ್ಷ್ಮೀಪುರ, ಮುತ್ತಕಪಲ್ಲಿ, ಅಣ್ಣಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ.

    25 ಲಕ್ಷ ರೂ: ಯೋಜನೆಯಡಿ ಆಯ್ಕೆಯಾದ ಗ್ರಾಪಂಗಳು ಹಾಲಿ ಜಾರಿಯಲ್ಲಿರುವ ಯೋಜನೆಗಳನ್ನು ಒಗ್ಗೂಡಿಸಿಕೊಂಡು ಸರ್ಕಾರದ ಮಾರ್ಗಸೂಚಿಗನುಗುಣವಾಗಿ ಅಮೃತ ಯೋಜನೆ ಯಶಸ್ವಿ ಮಾಡಿದ ಗ್ರಾಪಂಗೆ ಸರ್ಕಾರದಿಂದ 25 ಲಕ್ಷ ರೂ. ಅನಿರ್ಬಂಧಿತ ಅನುದಾನ ಸಿಗಲಿದೆ. ಪ್ರಮುಖವಾಗಿ ಜಲಜೀವನ್ ಮಿಷನ್‌ನಡಿ ಮನೆ, ಶಾಲೆ, ಅಂಗನವಾಡಿಗಳಿಗೆ ನಳ ಸಂಪರ್ಕ, ಗ್ರಂಥಾಲಯ ಡಿಜಿಟಲೀಕರಣಕ್ಕೆ ಗ್ರಾಪಂ ಸ್ವಂತ ಅನುದಾನ, 15ನೇ ಹಣಕಾಸು ಯೋಜನೆಯಡಿ ಬೀದಿದೀಪ, ಸೋಲಾರ್ ದೀಪ ಅಳವಡಿಕೆ, ನರೇಗಾದಡಿ ಉದ್ಯಾನ, ಆಟದ ಮೈದಾನ, ಕಾಂಪೌಂಡ್ ನಿರ್ಮಾಣ, ಘನತ್ಯಾಜ್ಯ ವಿಲೇವಾರಿಗೆ ಸ್ವಚ್ಛ ಭಾರತ್ ಮಿಷನ್, 15ನೇ ಹಣಕಾಸು ಯೋಜನೆಯ ಅನುದಾನ ಹಾಗೂ ಇತರೆ ಮೂಲಗಳಾದ ಸಿಎಸ್‌ಆರ್ ನಿಧಿ, ಭೌತಿಕ ದೇಣಿಕೆ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಒಗ್ಗೂಡಿಸಿಕೊಂಡು ಬಳಸಿಕೊಳ್ಳಬಹುದು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts