More

    ಐಎಲ್ಒ ನೀಡಿದೆ ಆತಂಕದ ವರದಿ: ಕರೊನಾದಿಂದಾಗಿ ಭಾರತದಲ್ಲಿ 40 ಕೋಟಿ ಜನರು ಬಡತನದ ಕೂಪಕ್ಕೆ

    ನವದೆಹಲಿ: ಮೊದಲೇ ಏದುಸಿರಿಗೆ ಬಂದು ನಿಂತಿದ್ದ ಭಾರತದ ಆರ್ಥಿಕ ವ್ಯವಸ್ಥೆಗೆ ಕರೊನಾ ಮರ್ಮಾಘಾತ ನೀಡಿದೆ. 21 ದಿನಗಳ ಲಾಕ್​ಡೌನ್​ಅನ್ನು ಏಪ್ರಿಲ್​ 14ರ ನಂತರವೂ ಮುಂದುವರಿಸಿದ್ದೇ ಕೈಗಾರಿಕಾ ವಲಯ ಭಾರಿ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಉದ್ಯಮಿಗಳು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದಾರೆ. ಪ್ರಮುಖ ಕೈಗಾರಿಕೆಗಳ ಆರಂಭಕ್ಕಾದರೂ ಅವಕಾಶ ನೀಡಬೇಕು ಎಂಬುದು ಇವರ ಮನವಿ.

    ಈ ನಡುವೆ ಕರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಭಾರತದಲ್ಲಿ 40 ಕೋಟಿಗೂ ಅಧಿಕ ಜನರು ಬಡತನದ ಕೂಪಕ್ಕೆ ಬೀಳಲಿದ್ದಾರೆ ಎಂಬ ಆತಂಕದ ವರದಿಯನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್​ಒ) ನೀಡಿದೆ. ‘ಐಎಲ್​ಒ ನಿಗಾ ಎರಡನೇ ಆವೃತ್ತಿ- ಕೋವಿಡ್​-19 ಮತ್ತು ಕಾರ್ಮಿಕ ಜಗತ್ತು’ ಎಂಬ ಶೀರ್ಷಿಕೆಯ ವರದಿಯಲ್ಲಿ ಸರ್ವವ್ಯಾಪಿ ರೋಗ ಕರೊನಾ ತಂದಿಟ್ಟಿರುವ ದುಸ್ಥಿತಿಯನ್ನು 2ನೇ ಮಹಾಯುದ್ಧ ನಂತರದ ಅತ್ಯಂತ ಸಂಕಷ್ಟದ ಜಾಗತಿಕ ವಿದ್ಯಮಾನ’ ಎಂದು ಬಣ್ಣಿಸಿದೆ.

    ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಂತರ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಕರೊನಾ ಇನ್ನಷ್ಟು ಹದಗೆಡಿಸಲಿದೆ. 19.5 ಕೋಟಿಗೂ ಅಧಿಕ ಪೂರ್ಣಕಾಲಿಕ ಉದ್ಯೊಗವನ್ನು ಕರೊನಾ ಕಸಿಯಲಿದೆ. ಎರಡನೇ ತ್ರೈಮಾಸಿಕ ಅವಧಿ ವೇಳೆಗೆ ಜಾಗತಿಕವಾಗಿ ಶೇ.6.7 ತಾಸಿನ ದುಡಿಮೆಯನ್ನು ನುಂಗಿ ಹಾಕಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಕಾರ್ಮಿಕರು ಹಾಗೂ ವಹಿವಾಟು ಭಾರಿ ತೊಂದರೆಗೆ ಒಳಗಾಗಿದೆ. ಇದನ್ನು ಸರಿಪಡಿಸಲು ಎಲ್ಲರೂ ಒಂದಾಗಿ ಅಷ್ಟೇ ವೇಗವಾಗಿ, ನಿಖರವಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಐಎಲ್​ಒ ಪ್ರಧಾನ ಕಾರ್ಯದರ್ಶಿ ಗೈ ರೈಡರ್​ ಹೇಳಿದ್ದಾರೆ. ಸರಿಯಾದ ಹಾಗೂ ತ್ವರಿತವಾದ ಕ್ರಮಗಳು ಯಾರು ಉಳಿಯುತ್ತಾರೆ ಯಾರು ಅಳಿಯುತ್ತಾರೆ ಎಂಬುದನ್ನು ನಿರ್ಧರಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಭಾರತ, ನೈಜಿರಿಯಾ, ಬ್ರೆಜಿಲ್​ನಲ್ಲಿ ಅಸಂಘಟಿತ ವಲಯದ ಕಾರ್ಮಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಭಾರತದಲ್ಲಿ ಶೇ.90 ರಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರೊನಾದಿಂದಾಗಿ ಬಹುತೇಕರು ತಾವು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ಗ್ರಾಮೀಣ ಪ್ರದೇಶಗಳನ್ನು ಸೇರುವಂತಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಅಂತಾರಾಷ್ಟ್ರೀಯ ಸಹಕಾರ ಅತೀ ಅಗತ್ಯ:
    ಕಳೆದ 75 ವರ್ಷಗಳಲ್ಲಿಯೇ ಅಂತಾರಾಷ್ಟ್ರಿಯ ಸಹಕಾರಕ್ಕೆ ಇದೊಂದು ಸವಾಲಿನ ಸಮಯವಾಗಿದೆ. ಒಮದು ರಾಷ್ಟ್ರ ಕೆಳಗೆ ಬಿದ್ದರೆ ಉಳಿದವರು ಬೀಳುತ್ತಾರೆ. ಜಾಗತಿಕ ಸಮುದಾಯದ ಎಲ್ಲ ವಲಯಗಳಿಗೂ ನೆರವಾಗುವಂತೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಅದರಲ್ಲೂ ಅತ್ಯಂತ ತೊಂದರೆಯಲ್ಲಿರುವ ಹಾಗೂ ಸ್ವಾವಲಂಬಿಗಳಲ್ಲದವರ ನೆರವಿಗೆ ಮುಂದಾಗಬೇಕಿದೆ ಎಂದು ರೈಡರ್​ ಅಭಿಪ್ರಾಯಪಟ್ಟಿದ್ದಾರೆ.

    ಈ ನಿಟ್ಟಿನಲ್ಲಿ ನಮ್ಮ ಆಯ್ಕೆಗಳು ಶತಕೋಟಿ ಜನರ ಬದುಕಿನ ಮೇಲೆ ಪ್ರಭಾವ ಬೀರಲಿವೆ. ಸರಿಯಾದ ಕ್ರಮಗಳಿಂದ ನಾವು ಇದನ್ನು ತಡೆಗಟ್ಟಬಹುದು. ಮುಂದಿನ ನಮ್ಮ ವ್ಯವಸ್ಥೆಗಳು ಅತ್ಯಂತ ಸುರಕ್ಷಿತ, ನ್ಯಾಯಯುತ ಹಾಗೂ ಹೆಚ್ಚು ಸುಸ್ಥಿರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

    ಮುಂದುವರಿದ ರಾಷ್ಟ್ರಗಳಲ್ಲೂ ಹೆಚ್ಚು ಉದ್ಯೊಗ ಕಡಿತವಾಗಲಿದೆ. ಅರಬ್​ ರಾಷ್ಟ್ರಗಳಲ್ಲಿ 50 ಲಕ್ಷ ಜನರು ಪೂರ್ಣಕಾಲಿಕ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಯುರೋಪ್​ನಲ್ಲಿ 120 ಲಕ್ಷ, ಏಷ್ಯಾ ಹಾಗೂ ಪೆಸಿಫಿಕ್​ ಭಾಗದಲ್ಲಿ 12.50 ಕೋಟಿ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಮಧ್ಯಮ ಹಾಗೂ ಮೇಲ್ವರ್ಗದಲ್ಲಿ ಜನರು ಕೂಡ ನಿರುದ್ಯೋಗಿಳಾಗಲಿದ್ದು, 10 ಕೋಟಿಗೂ ಅಧಿಕ ಉದ್ಯೋಗ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​​ ಸಾವಿನ ಸುದ್ದಿ ಪ್ರಕಟಿಸಿ ತೀವ್ರ ಮುಜುಗರಕ್ಕೀಡಾದ ಪಾಕ್​ ಮುಂಚೂಣಿ ಮಾಧ್ಯಮ!

    VIDEO| ಟರ್ಕಿ ಕೋಳಿಗಳಿಗೆ ರಸ್ತೆ ದಾಟಲು ಸಹಾಯ ಮಾಡಿದ ಸಾರ್ವಜನಿಕರು: ಜಾಲತಾಣದಲ್ಲಿ ವಿಡಿಯೋ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts