More

    400 ಕೋಟಿ ರೂ. ಹೂಡಿಕೆ!

    ಬೆಳಗಾವಿ: ನಗರದಲ್ಲಿ ಪ್ರಥಮ ಬಾರಿಗೆ ಡ್ರೋನ್ ಕೈಗಾರಿಕೆ ಮತ್ತು ಎಲೆಕ್ಟ್ರಿಕ್ ವಾಹನಗಳು (ಇವಿ) ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕ್ಷೇತ್ರದಲ್ಲಿ 400 ಕೋಟಿ ರೂ. ಹೂಡಿಕೆಗೆ ವಿವಿಧ ಕಂಪನಿಗಳು ಆಸಕ್ತಿ ತೋರಿಸಿವೆ.

    ನಗರದ ಮಯೂರ್ ಬೆಳಗಾವಿ ಪ್ರಸಿಡೆನ್ಸಿ ಕ್ಲಬ್‌ನಲ್ಲಿ ಶುಕ್ರವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇವಿ ಮತ್ತು ಡ್ರೋನ್ ಕ್ಲಸ್ಟರ್ ಉದ್ಘಾಟನೆ ದಿನವೇ 16ಕ್ಕೂ ಅಧಿಕ ಉದ್ಯಮಿಗಳು ಇವಿ ಮತ್ತು ಡ್ರೋನ್ ಕ್ಲಸ್ಟರ್‌ನಲ್ಲಿ ಹೂಡಿಕೆಗೆ ಮುಂದಾಗಿವೆ. ಇದರಿಂದಾಗಿ ಇವಿ ಮತ್ತು ಆರ್ ಆ್ಯಂಡ್ ಡಿ ಕ್ಷೇತ್ರದಲ್ಲಿ ಹೂಡಿಕೆಯಿಂದ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟರು.

    ಇವಿ ಮತ್ತು ಡ್ರೋನ್ ಕ್ಲಸ್ಟರ್ ಉದ್ಘಾಟನೆಯ ಒಂದು ದಿನದ ಈ ಕಾರ್ಯಕ್ರಮದಲ್ಲಿ ಸುಮಾರು 150 ಉದ್ಯಮಿ, ವಿವಿಧ ಕಂಪನಿಗಳ ಅಧಿಕಾರಿಗಳು, ನೀತಿ ನಿರೂಪಕರು, ಆರ್ ಆ್ಯಂಡ್ ಡಿ ಸಮುದಾಯ ಮತ್ತು ಸ್ಟಾರ್ಟ್‌ಅಪ್‌ಗಳ ಪ್ರಮುಖರು, ವಿವಿಧ ವಲಯದ ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬೆಳಗಾವಿಯಲ್ಲಿ ಡ್ರೋನ್ ಇವಿ ಕ್ಲಸ್ಟರ್‌ಗೆ ಹೆಚ್ಚಿನ ಆದ್ಯತೆ ನೀಡಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ವಿನಂತಿಸಿದರು.

    ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ದೇಶದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿ ವರ್ಷ 30,00 ಇಂಜಿನಿಯರಿಂಗ್ ಮತ್ತು ಐಐಟಿ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಇಂತಹ ಸ್ಥಳೀಯ ಪ್ರತಿಭೆಗಳಿಗೆ ಭವಿಷ್ಯದಲ್ಲಿ ಪ್ರಮುಖವಾಗಲಿರುವ ಡ್ರೋನ್ ಮತ್ತು ಇವಿ ಉತ್ಪದನಾ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದು ಈ ಕ್ಲಸ್ಟರ್ ಸ್ಥಾಪನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ ಎಂದರು.

    ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನೇಕ ಸ್ಟಾರ್ಟ್‌ಅಪ್‌ಗಳಿಗೆ ಬೆಳಗಾವಿ ಉತ್ಯುತ್ತಮ ಪರಿಸರ ವ್ಯವಸ್ಥೆ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಡ್ರೋನ್ ಇವಿ ಕ್ಲಸ್ಟರ್ ಸ್ಥಾಪಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಡ್ರೋನ್ ಮಾರುಕಟ್ಟೆ ವಾರ್ಷಿಕ ಶೇ. 10 ಮತ್ತು ಇವಿ ಮಾರುಕಟ್ಟೆ ಶೇ. 50ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಹೊಂದಲಾಗಿದೆ. ಈ ಬೆಳವಣಿಗೆಯಲ್ಲಿ ಕರ್ನಾಟಕವು ಪ್ರಮುಖ ಪಾತ್ರ ವಹಿಸಲಿದೆ. ಅದಕ್ಕಾಗಿ ಕೆಇಡಿಎಂ ಹೊಸ ಕ್ಲಸ್ಟರ್ ರಚಿಸುವ ಮೂಲಕ ಈ ಬೆಳವಣಿಗೆಗೆ ಮತ್ತಷ್ಟು ವೇಗ ನೀಡುತ್ತಿದೆ. ಜತೆಗೆ ಬೆಳಗಾವಿಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕಾ ಕ್ಲಸ್ಟರ್‌ಗಳ ಬೆಳವಣಿಗೆಗೂ ಡೋನ್ ಇವಿ 2023 ಪೂರಕವಾಗಲಿದೆ ಎಂದು ಹೇಳಿದರು.

    ನೂತನ ಡ್ರೊನ್ ಇವಿ ಉಪಕ್ರಮವು ಸ್ಥಳೀಯ ಕೈಗಾರಿಕೆಗಳು ಹಾಗೂ ಪಾಲುದಾರರನ್ನು ಜಾಗತಿಕ ಪೂರೈಕೆ ಜಾಲದ ಭಾಗವಾಗಿಸಲು ಮತ್ತು ಈ ವಲಯಗಳಲ್ಲಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಗುರಿ ಹೊಂದಿದೆ. ಡ್ರೋನ್ ಮತ್ತು ಎಲೆಕ್ಟ್ರಿಕ್ ವಾಹನ ಉದ್ಯಮ ಸ್ಥಾಪನೆ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಗಳು, ಬುದ್ಧಿಮತ್ತೆ , ಉತ್ಪನ್ನಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು ಡ್ರೋನ್ ಇವಿ ಕ್ಲಸ್ಟರ್ ನೆರವಾಗಲಿದೆ ಎಂದು ತಿಳಿಸಿದರು. ಉದ್ಯಮಿಗಳಾದ ಅಶೋಕ ಪಾಟೀಲ, ರಂಜಿತಾ ರವಿ, ರೋಹನ ಜವಳಿ, ಇವಿ ಬಿಡಿ ಉತ್ಪನ್ನಗಳ ತಯಾರಕರು, ಬ್ಯಾಟರಿ ಉತ್ಪಾದಕರು, ಚಾರ್ಜಿಂಗ್ ಸಲಕರಣೆ ಮತ್ತು ಮೂಲಸೌಕರ್ಯ ಪೂರೈಕೆದಾರರು, ಆಟೋಮೊಬೈಲ್ ಘಟಕ ತಯಾರಕರು ಇತರರು ಇದ್ದರು.

    ಏರೋಸ್ಪೇಸ್ ಉದ್ಯಮ ಬೆಳವಣಿಗೆಗೆ ಪೂರಕ

    ಬೆಳಗಾವಿಯಲ್ಲಿ ಈಗಾಗಲೇ ಉದ್ಯಮ ಬೆಳೆಯುತ್ತಿವೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿಯ ಕೈಗಾರಿಕಾ ಕ್ಲಸ್ಟರ್‌ಗಳು ಬಿಯಾಂಡ್ ಬೆಂಗಳೂರು ಪರಿಕಲ್ಪನೆ ಸಾಕಾರಗೊಳಿಸಲು ಸಹಾಯಕವಾಗುತ್ತಿವೆ. ಈ ಭಾಗದಲ್ಲಿರುವ ಪ್ರತಿಭೆ, ಕೌಶಲ್ಯಭರಿತ ಕಾರ್ಮಿಕ ವರ್ಗಕ್ಕೆ ಸ್ಥಳೀಯವಾಗಿ ಹೆಚ್ಚು ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಡಿಇಎಂ ಬೆಂಬಲದೊಂದಿಗೆ ಎಲೆಕ್ಟ್ರಾನಿಕ್ಸ್ ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಡ್ರೋನ್ ಮತ್ತು ಇವಿ ಕ್ಲಸ್ಟರ್ ಸ್ಥಾಪಿಸುತ್ತಿದೆ. ಈಗಾಗಲೇ ಏರೋಸ್ಪೇಸ್ ಉತ್ಪಾದನಾ ವಲಯ ಕಳೆದ 12 ತಿಂಗಳಿನಿಂದ ಸುಮಾರು ನೂರಾರು ಕೋಟಿ ರೂ. ಮೊತ್ತದ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಇದರೊಂದಿಗೆ ಡ್ರೋನ್ ಮತ್ತು ಎಲೆಕ್ಟ್ರಿಕ್ ವಾಹನ ಕ್ಲಸ್ಟರ್ ಏರೋಸ್ಪೇಸ್ ಉದ್ಯಮದ ಬೆಳವಣಿಗೆಗೆ ಪೂರಕ ಪರಿಸರ ವ್ಯವಸ್ಥೆ ಒದಗಿಸಲಿದೆ ಎಂದು ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts