More

    40 ವರ್ಷಗಳಿಂದ ಬೆಸೆದಿಲ್ಲ ಸೇತುವೆ ಕನಸು

    ಪುತ್ತೂರು: ಅಭಿವೃದ್ಧಿಗಾಗಿ ಸರ್ಕಾರಗಳಿಂದ ಕೋಟಿಗಟ್ಟಲೆ ಅನುದಾನ ಘೋಷಣೆಯಾಗುತ್ತದೆ. ಆದರೆ ಗ್ರಾಮೀಣ ಭಾಗದ ಜನತೆಯ ಬೇಡಿಕೆಗಳಿಗೆ ಬೆಲೆ ಸಿಗುತ್ತಿಲ್ಲ. 40 ವರ್ಷಗಳಿಂದ ರಸ್ತೆ ಸಂಪರ್ಕದ ಸೇತುವೆಗಾಗಿ ಮನವಿ ನೀಡಿ ಕಂಗಾಲಾದ ಅಗರಿ ದಲಿತ ಕಾಲನಿಯ 35ಕ್ಕೂ ಹೆಚ್ಚು ಕುಟುಂಬಗಳು ಈಗ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿವೆ.

    ಹಿರೇಬಂಡಾಡಿ ಗ್ರಾಮದ ಅಗರಿ ಭಾಗದ ದಲಿತ ಕಾಲನಿಯಲ್ಲಿ 12 ಕುಟುಂಬಗಳು ವಾಸ್ತವ್ಯವಿದ್ದು, ಈ ಭಾಗದಲ್ಲಿ ಸುಮಾರು 25ಕ್ಕೂ ಹೆಚ್ಚು ಇತರ ಕುಟುಂಬಗಳಿವೆ. ಉಪ್ಪಿನಂಗಡಿ- ಕಡಬ ರಸ್ತೆಯನ್ನು ಪೆರಿಯಡ್ಕದ ಮೂಲಕ ಸಂಪರ್ಕಿಸುವ ಈ ಅಗರಿ ರಸ್ತೆಗೆ ಕಲ್ಲಡ್ಕ ಎಂಬಲ್ಲಿರುವ ಕಿರುಹೊಳೆಗೆ ಸೇತುವೆ ತೀರಾ ಅಗತ್ಯವಿದ್ದು, ಇದಕ್ಕಾಗಿ ಕಳೆದ 4 ದಶಕಗಳಿಂದ ಮನವಿ ನೀಡುತ್ತಿದ್ದಾರೆ. ಆದರೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಇವರ ಕೂಗಿಗೆ ಬೆಲೆ ನೀಡಿಲ್ಲ.

    ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಶಾಸಕರಿದ್ದಾಗ ಇಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ನೀಡಲಾಗಿತ್ತು. ಈಗ ಇದೇ ಗ್ರಾಮದ ಸಂಜೀವ ಮಠಂದೂರು ಶಾಸಕರಾಗಿದ್ದಾರೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಸಿಎಂ ಯಡಿಯೂರಪ್ಪ ಅವರಿಗೂ ಇಲ್ಲಿನ ಜನತೆ ವಿಧಾನಸಭೆಯ ಮೆಟ್ಟಲು ಹತ್ತಿ ಸೇತುವೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

    ಚುನಾವಣೆಗೆ ಬಹಿಷ್ಕಾರ: 40 ವರ್ಷಗಳಿಂದ ಈ ಸೇತುವೆಗಾಗಿ ಹೋರಾಟ ಮಾಡುತ್ತಿದ್ದೇವೆ. 7 ಬಾರಿ ಬೆಂಗಳೂರಿಗೆ ಹೋಗಿ ಮನವಿ ನೀಡಲಾಗಿದೆ. ಮುಖ್ಯಮಂತ್ರಿಗಳಾದಿಯಾಗಿ ಎಲ್ಲರಿಗೂ ಮನವಿ ನೀಡಿದ್ದೇವೆ. ಆದರೆ ಯಾರೊಬ್ಬರೂ ನಮ್ಮ ಕೂಗಿಗೆ ಸ್ಪಂದಿಸಿಲ್ಲ. ಇನ್ನು ಚುನಾವಣೆಯ ಬಹಿಷ್ಕಾರ ಮಾತ್ರ ನಮಗಿರುವ ಏಕೈಕ ಮಾರ್ಗ ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿರುವ ಬಾಬು ಅಗರಿ.

    ಮಳೆಗಾಲದಲ್ಲಿ ನಮ್ಮ ಮಕ್ಕಳು ಶಾಲೆಗೆ ಹೋಗುವುದು ಅಸಾಧ್ಯವಾಗಿದೆ. ಔಷಧ ಬೇಕಾದರೂ ಆಸ್ಪತ್ರೆಗೆ ಹೋಗಲು ಸಮಸ್ಯೆಯಾಗುತ್ತದೆ. ಇಲ್ಲಿರುವ ಕುಟುಂಬಗಳು ಬಹುತೇಕ ಬಡವರ್ಗಕ್ಕೆ ಸೇರಿದ್ದು, ಸ್ವಂತ ವಾಹನಗಳಿಲ್ಲ. ಬಾಡಿಗೆ ವಾಹನಗಳು ಕಿರುಹೊಳೆಯಲ್ಲಿ ನೀರಿದ್ದರೆ ಬರುವುದಿಲ್ಲ. ನಮ್ಮ ಬದುಕಿನ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ.
    – ಬಾಬು ಅಗರಿ, ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮ ನಿವಾಸಿ

    ತಾಲೂಕಿನ ವಿವಿಧ ಕಡೆಗಳಲ್ಲಿ ಕಾಲುಸಂಕ, ಸೇತುವೆ ನಿರ್ಮಾಣ ಕಾಮಗಾರಿಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಅಗರಿ ಭಾಗದಲ್ಲೂ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲಿ ಈ ಬಗ್ಗೆ ಯೋಜನಾ ವರದಿ ಸಿದ್ಧಪಡಿಸಲಾಗುವುದು.
    – ಸಂಜೀವ ಮಠಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts