More

    40 ಸಾವಿರ ಕುಟುಂಬಕ್ಕೆ ಪಾಲಿಕೆ ಆಹಾರ ಕಿಟ್

    ಶಿವಮೊಗ್ಗ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ನಗರ ವ್ಯಾಪ್ತಿಯ 40 ಸಾವಿರ ಕುಟುಂಬಗಳಿಗೆ ಮಹಾನಗರ ಪಾಲಿಕೆ ಆಹಾರದ ಕಿಟ್ ವಿತರಣೆಗೆ ಮುಂದಾಗಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪಾಲಿಕೆಯಲ್ಲಿ 35 ಜನರಿಗೆ ಸಾಂಕೇತಿಕವಾಗಿ ಆಹಾರದ ಕಿಟ್ ವಿತರಿಸಿ ಚಾಲನೆ ನೀಡಿದರು.

    ಲಾಕ್​ಡೌನ್​ನಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಪಡಿತರ ಸೇರಿ ಆಹಾರದ ಕಿಟ್​ಗಳನ್ನು ವಿತರಿಸಿದೆ. ಸ್ಥಳೀಯ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಯುವ ಮುಖಂಡರು ಆಹಾರ ಮತ್ತು ತರಕಾರಿ ಕಿಟ್​ಗಳನ್ನು ವಿತರಿಸಿದ್ದಾರೆ. ಇದೀಗ ಪಾಲಿಕೆ ಸರದಿ ಬಂದಿದ್ದು, 40 ಸಾವಿರ ಕಿಟ್ ವಿತರಿಸಲು ಸಜ್ಜಾಗಿದೆ.

    ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಉಚಿತವಾಗಿ ಆಹಾರದ ಕಿಟ್ ವಿತರಣೆ ಇಲ್ಲಿಗೆ ನಿಲ್ಲಬಾರದು. ಜನರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಸಾರ್ವಜನಿಕರು ಕೂಡ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮಾತನಾಡಿ, ಸಂಕಷ್ಟಲ್ಲಿರುವ ಬಡವರನ್ನು ಗುರುತಿಸಿ ಎಲ್ಲ ವರ್ಗದವರಿಗೂ ಆಹಾರದ ಕಿಟ್ ನೀಡಲು ನಿರ್ಧರಿಸಿದ್ದು ಈಗಾಗಲೇ 35 ವಾರ್ಡ್​ಗಳ ವ್ಯಾಪ್ತಿಯಲ್ಲಿ ಕಿಟ್​ಗಳನ್ನು ಮನೆ ಮನೆಗೆ ವಿತರಿಸಲಾಗುತ್ತಿದೆ ಎಂದರು.

    ಜಿಪಂ ಸದಸ್ಯ ಕೆ.ಇ.ಕಾಂತೇಶ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪ್ರತಿಪಕ್ಷದ ನಾಯಕ ಎಚ್.ಸಿ.ಯೋಗೇಶ್ ಇತರರಿದ್ದರು.

    ಕಿಟ್​ನಲ್ಲಿ ಏನೇನಿತ್ತು ? ಆಹಾರದ ಕಿಟ್​ನಲ್ಲಿ ತಲಾ ಒಂದು ಕೆಜಿ ಅಕ್ಕಿ, ಗೋದಿ ಹಿಟ್ಟು, ತೊಗರಿಬೇಳೆ, ಒಂದು ಲೀ. ಅಡುಗೆ ಎಣ್ಣೆ, ಉಪ್ಪು, ಸಾಂಬರ್​ಪುಡಿ, ಒಂದು ಸೋಪು ಸೇರಿ 9 ಪದಾರ್ಥ ನೀಡಲಾಯಿತು.

    ಆಹಾರದ ಕಿಟ್​ಗೂ ಅಪಸ್ವರ: ಪಾಲಿಕೆಯಿಂದ ವಿತರಿಸಿದ ಆಹಾರದ ಕಿಟ್ ಬಗ್ಗೆ ಕೆಲ ಪಾಲಿಕೆ ಸದಸ್ಯರು ಸೇರಿ ಸಾರ್ವಜನಿಕರಿಂದ ಅಪಸ್ವರ ಕೇಳಿಬಂದಿತು. ಲಾಕ್​ಡೌನ್​ನಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ಕನಿಷ್ಠ ವಾರಕ್ಕೆ ಆಗುವಷ್ಟು ಆಹಾರದ ಪದಾರ್ಥ ನೀಡಬಹುದಾಗಿತ್ತು. ಆದರೆ ಒಂದೆರಡು ದಿನದಲ್ಲೇ ಮುಕ್ತಾಯವಾಗುವಷ್ಟು ಪದಾರ್ಥಗಳನ್ನು ನೀಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ಇದೇ ವೇಳೆ ಸಚಿವರು ಸಾಂಕೇತಿಕವಾಗಿ ವಿತರಿಸಿ ಹೋದ ಬಳಿಕ ಕೆಲವರು ನಮಗೆ ಕಿಟ್ ಸಿಗಲಿಲ್ಲವೆಂದು ಮೇಯರ್ ಸೇರಿ ಕಾರ್ಪೆರೇಟರ್​ಗಳ ಎದುರೇ ಬೇಸರ ವ್ಯಕ್ತಪಡಿಸಿದರು.

    ಸಿಎಂ ನಿಧಿಗೆ ಒಂದು ದಿನದ ವೇತನ: ಸ್ಮಾರ್ಟ್​ಸಿಟಿ ನೌಕರರು ತಮ್ಮ ಒಂದು ದಿನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ಸಮರ್ಪಿಸಿದ್ದು ಸ್ಮಾರ್ಟ್​ಸಿಟಿ ವ್ಯವಸ್ಥಾಪಕ ನಿರ್ದೇಶಕರೂ ಆದ ಚಿದಾನಂದ ವಟಾರೆ ಅವರು ಸಚಿವ ಕೆ.ಎಸ್.ಈಶ್ವರಪ್ಪ ಅವರ ಮುಖಾಂತರ ಸಿಎಂ ಪರಿಹಾರ ನಿಧಿಗೆ 57 ಸಾವಿರ ರೂ. ಚೆಕ್​ನ್ನು ಹಸ್ತಾಂತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts