More

    ಹೊಳೆಯಲ್ಲಿ ಮುಳುಗಿ ನಾಲ್ವರ ಸಾವು

    ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಗ್ರಾಮದ ಸಂಬಂಧಿಕರ ಮನೆಗೆ ಮದುವೆಗೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳ ಸಹಿತ ನಾಲ್ವರು ಮಂಗಳವಾರ ಸಾಯಂಕಾಲ ಮನೆ ಹತ್ತಿರ ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
    ಕಡಂದಲೆ ಬರಿಯಡ್ಕದ ಶ್ರೀಧರ ಆಚಾರ್ಯ ಅವರ ಪುತ್ರನ ಮದುವೆ ಭಾನುವಾರ ಹಾಗೂ ಔತಣಕೂಟ ಸೋಮವಾರ ಜರುಗಿತ್ತು. ಈ ಸಮಾರಂಭಕ್ಕೆ ಬಂದು ಮದುವೆ ಮನೆಯಲ್ಲಿ ಉಳಿದುಕೊಂಡಿದ್ದ ಸಂಬಂಧಿಕರ ಪೈಕಿ 9 ಮಂದಿ ಮನೆ ಹತ್ತಿರದ ಶಾಂಭವಿ ನದಿಯ ಉಪನದಿ ಹರಿಯುವ ಪಟ್ಲಗುಂಡಿ ತುಲೆಮುಗೇರ್ ಎಂಬಲ್ಲಿ ನೀರಿಗೆ ಇಳಿದಿದ್ದಾರೆ. ಆದರೆ ಈ ಭಾಗದಲ್ಲಿ ಇಳಿಜಾರು ಆಳವಿರುವುದು ಅವರ ಗಮನದಲ್ಲಿರದ ಕಾರಣ ಈ ದುರ್ಘಟನೆ ಸಂಭವಿಸಿದೆ.

    ಮೂಡುಶೆಡ್ಡೆಯ ಹರ್ಷಿತಾ(20), ಆಕೆಯ ಸಹೋದರ ನಿಖಿಲ್(18), ವೇಣೂರಿನ ಸುಭಾಸ್(19) ಹಾಗೂ ಬಜ್ಪೆ ಪೆರಾರಿನ ರವಿ ಆಚಾರ್ಯ(29) ಮೃತಪಟ್ಟವರು. ನೀರಿಗಿಳಿದು ಅಪಾಯದಲ್ಲಿರುವವರನ್ನು ಗಮನಿಸಿದ ರವಿ ಆಚಾರ್ಯ ರಕ್ಷಣೆಗೆ ನೀರಿಗಿಳಿದಿದ್ದು, ಯುವತಿಯೊಬ್ಬಳನ್ನು ರಕ್ಷಿಸಿದ್ದಾರೆ. ಆದರೆ ಇತರ ಮೂವರನ್ನು ರಕ್ಷಿಸುವ ಸಂದರ್ಭದಲ್ಲಿ ಅವರೂ ಮುಳುಗಿ ಮೃತಪಟ್ಟಿದ್ದಾರೆ.
    ಹರ್ಷಿತಾ ಅಂತಿಮ ಪದವಿ ವಿದ್ಯಾರ್ಥಿನಿ, ನಿಖಿಲ್ ವಾಮಂಜೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಾಗೂ ಸುಭಾಸ್ ಮಂಗಳೂರಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾರೆ. ರವಿ ಆಚಾರ್ಯ ಮರದ ಕೆಲಸಗಾರರಾಗಿದ್ದಾರೆ.

    ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ವಿಭಾಗದ ಡಿಸಿಪಿ ವಿನಯ್ ಎ.ಗಾಂವ್ಕರ್, ಮಂಗಳೂರು ಉತ್ತರ ಎಸಿಪಿ ಬೆಳ್ಳಿಯಪ್ಪ, ಅಗ್ನಿಶಾಮಕ ದಳದ ಅಧಿಕಾರಿ ತಿಪ್ಪೇಗೌಡ ತಹಸೀಲ್ದಾರ್ ಗುರುಪ್ರಸಾದ್, ತಾಪಂ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಜಿಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಮೂಡುಬಿದಿರೆ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.

    ಇಬ್ಬರ ಮೃತದೇಹ ಪತ್ತೆ: ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಹರ್ಷಿತಾ ಮತ್ತು ಸುಭಾಸ್ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಿಬ್ಬರ ಮೃತದೇಹದ ಶೋಧ ನಡೆದಿದ್ದು, ಕತ್ತಲಾವರಿಸಿದ್ದರಿಂದ ಶೋಧ ಕಾರ್ಯ ಬುಧವಾರ ಮುಂದುವರಿಸಲಾಗುತ್ತದೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts