More

    60 ಲಕ್ಷ ರೂ. ಪಡೆದು ಧೋಖಾ! 4 ಎಕರೆ ಗೋಮಾಳ ಮಂಜೂರು ಆಮಿಷ, ನಿವೃತ್ತ ಎ.ಸಿ. ಸೋಗಿನಲ್ಲಿ ಕೃತ್ಯ

    ಬೆಂಗಳೂರು: ಕಂದಾಯ ಇಲಾಖೆ ನಿವೃತ್ತ ಉಪವಿಭಾಗಾಧಿಕಾರಿ ಸೋಗಿನಲ್ಲಿ ಉದ್ಯಮಿಯನ್ನು ಪರಿಚಯಿಸಿಕೊಂಡ ವ್ಯಕ್ತಿ ಗೋಮಾಳ ಮಂಜೂರು ಮಾಡಿಸುವ ಆಮಿಷವೊಡ್ಡಿ 60 ಲಕ್ಷ ರೂ. ಪಡೆದು ವಂಚಿಸಿದ್ದಾನೆ.

    ಚಿಕ್ಕಮಗಳೂರಿನ ನಿವಾಸಿ ರಂಗನಾಥ್ (64) ವಂಚನೆಗೆ ಒಳಗಾದವರು. ಪ್ರಕರಣ ಕುರಿತು ಉಲ್ಲಾಳ ಮುಖ್ಯರಸ್ತೆಯ ಜ್ಞಾನಜ್ಯೋತಿನಗರದ ನಿವಾಸಿ ಲಕ್ಷ್ಮಣ ನಾಯಕ್, ಚಿಕ್ಕಮಗಳೂರು ಮೂಲದ ಲಕ್ಷ್ಮಣ ಮೂರ್ತಿ ಹಾಗೂ ದಿನೇಶ್ ಎಂಬುವರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ರಂಗನಾಥ್ ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಸ್ಟೋರ್ ಮತ್ತು ಕ್ರಷರ್ ವ್ಯವಹಾರ ನಡೆಸುತ್ತಿದ್ದು, ಇತ್ತೀಚೆಗೆ ತಮ್ಮ ವ್ಯವಹಾರ ಸ್ಥಗಿತಗೊಳಿಸಿದ್ದರು. ತಮಗೆ ಕಂದಾಯ ಇಲಾಖೆಯ ನಿವೃತ್ತ ಉಪ ವಿಭಾಗಾಧಿಕಾರಿ ಪರಿಚಯವಿದೆ. ಅವರು ಪ್ರಭಾವಿ ಯಾಗಿದ್ದು, ಹಿರಿಯ ಅಧಿಕಾರಿಗಳ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಹಣ ಖರ್ಚು ಮಾಡುವುದಾದರೆ ಕಡಿಮೆ ಬೆಲೆಗೆ ಗೋಮಾಳ ಭೂಮಿ ಮಂಜೂರು ಮಾಡಿಸಿಕೊಡುತ್ತಾರೆ’ ಎಂದು ರಂಗನಾಥ್​ಗೆ ಸ್ನೇಹಿತರಾಗಿದ್ದ ಲಕ್ಷ್ಮಣಮೂರ್ತಿ ಹಾಗೂ ದಿನೇಶ್ ನಂಬಿಸಿದ್ದರು.

    ದುಪ್ಪಟ್ಟು ಲಾಭದ ಆಮಿಷ: 2016ರ ಏಪ್ರಿಲ್​ನಲ್ಲಿ ರಂಗನಾಥ್ ಅವರನ್ನು ವಿಜಯನಗರಕ್ಕೆ ಕರೆದುಕೊಂಡು ಹೋಗಿ ಲಕ್ಮಣ ನಾಯಕ್​ನನ್ನು ಪರಿಚಯಿಸಿದ್ದರು. ಈ ವೇಳೆ ಲಕ್ಷ್ಮಣ ನಾಯಕ್, ತುಮಕೂರು ರಸ್ತೆಯ ಬೂದಾಳು ಬಳಿ ನಾಲ್ಕು ಎಕರೆ ಗೋಮಾಳ ಜಮೀನು ಇದೆ. ಅದನ್ನು ಮಂಜೂರು ಮಾಡಿಸಿ ಕೊಡುತ್ತೇನೆ. 1 ಎಕರೆಗೆ 30 ಲಕ್ಷ ರೂ. ಖರ್ಚಾಗುತ್ತದೆ. ಅದನ್ನು ಕೆಲ ವರ್ಷಗಳ ಬಳಿಕ ಮಾರಾಟ ಮಾಡಿದರೆ, ಖರ್ಚು ಮಾಡಿದ ಹಣಕ್ಕಿಂತ ದುಪ್ಪಟ್ಟು ಲಾಭ ಪಡೆಯಬಹುದು ಎಂದು ನಂಬಿಸಿದ್ದ. ಮುಂಗಡವಾಗಿ ಮೊದಲ ಕಂತಿನಲ್ಲಿ ಅರ್ಧ ಹಣ ಕೊಡಬೇಕು. ಬಾಕಿ ಮೊತ್ತವನ್ನು ಜಮೀನು ಮಂಜೂರಾದ ಬಳಿಕ ನೀಡುವಂತೆ ಹೇಳಿದ್ದ. ಅದಕ್ಕೆ ರಂಗನಾಥ್ ಒಪ್ಪಿಗೆ ಸೂಚಿಸಿದ್ದರು.

    ರಂಗನಾಥ್ ಮತ್ತೊಬ್ಬ ಸ್ನೇಹಿತನ ಜತೆಗೂಡಿ ಹಂತಹಂತವಾಗಿ 60 ಲಕ್ಷ ರೂ.ಗಳನ್ನು ಹೊಂದಿಸಿ ಲಕ್ಷ್ಮಣ ನಾಯಕ್​ಗೆ ಕೊಟ್ಟಿದ್ದಾರೆ. ಆದರೆ, ಹಲವು ತಿಂಗಳು ಕಳೆದರೂ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ ಸಬೂಬು ಹೇಳಿದ್ದಾರೆ. ಬಳಿಕ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ ಲಕ್ಷ್ಮಣ ನಾಯಕ್ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ರಂಗನಾಥ್ ದೂರು ಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts