More

    4 ಶತಮಾನದ ರಥಕ್ಕೆ ಗತ ವೈಭವ ಸಂಭ್ರಮ

    ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಸುಮಾರು 400 ವರ್ಷಗಳ ಹಿಂದೆ ಕಟ್ಟಿಗೆಯಿಂದ ಕೆತ್ತನೆ ಮಾಡಿದ ರಥವೊಂದು 80 ವರ್ಷಗಳ ನಂತರ ತನ್ನ ಗತ ವೈಭವಕ್ಕೆ ಮರಳಲು ಸಜ್ಜಾಗಿದೆ.

    ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ರಥ ಇದಾಗಿದ್ದು, ಸುಮಾರು 80 ವರ್ಷಗಳಿಂದ ನಿಂತಲ್ಲೇ ನಿಂತಿತ್ತು. ರಥಕ್ಕೊಂದು ತಗಡಿನ ಮನೆ ನಿರ್ಮಾಣ ಮಾಡಿ ಅದನ್ನು ಅಲ್ಲಿ ನಿಲ್ಲಿಸಲಾಗಿತ್ತು. ಹಿಂದೆ ರಾಮಲಿಂಗೇಶ್ವರ ಜಾತ್ರೆ ಮಾಡುವ ಮುನ್ನ ರಾತ್ರಿ ಪೂರ್ತಿ ದಾಸರ ಪದ, ಲಾವಣಿ ಪದ, ಗೀಗೀ ಪದಗಳನ್ನು ಹಾಡಿ ಮೋಜು ಮಾಡುತ್ತ ತೇರು ಎಳೆಯಲು ಸುತ್ತ-ಮುತ್ತಲಿನ ಹಳ್ಳಿಗಳ ಜನರನ್ನು ಸೇರಿಸಲಾಗುತ್ತಿತ್ತು. ಜನರು ಸೇರಿದ ನಂತರ ಬೆಳಗ್ಗೆ 7-8ಗಂಟೆಗೆ ತೇರು ಎಳೆಯುತ್ತಿದ್ದರು.

    ಕಾಲ ಕ್ರಮೇಣ ಈ ರಥ ಎಳೆಯುವ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ. ಇಷ್ಟು ವರ್ಷ ತೇರನ್ನು ಎಳೆಯದೇ ಹಾಗೇಯೇ ಇಟ್ಟರೂ ರಥದ ಮೇಲ್ಭಾಗದ ಕಟ್ಟಿಗೆಯಾಗಲೀ ಅಥವಾ ಕುಸುರಿ ಕೆಲಸವಾಗಲಿ ಮಾಸದಿರುವುದು ಅಚ್ಚರಿಯನ್ನುಂಟು ಮಾಡಿದೆ. ಆದರೆ, ರಥದ ಗಾಲಿಗಳು ಮತ್ತು ಅಚ್ಚು ಬದಲಾವಣೆಯಾಗಬೇಕಷ್ಟೆ. ವಿಧಿ-ವಿಜ್ಞಾನಿಗಳನ್ನು ಕರೆಯಿಸಿ ಪರೀಕ್ಷೆ ಮಾಡಿಸಿದಾಗ ರಥ ತೀರಾ ಹಳೆಯದಾಗಿದ್ದು ಪಾಲಿಷ್ ಮಾಡಿಸಿದರೆ ರಥದ ಕಟ್ಟಿಗೆಯ ಮೇಲ್ಪದರಿನ ಪುಡಿ ಉದುರಬಹುದು ಎಂದಿದ್ದಾರೆ.

    ಪ್ರತಿ ವರ್ಷ ಏಪ್ರಿಲ್​ನಲ್ಲಿ ನಡೆಯುವ ವೀರಭದ್ರೇಶ್ವರ ಜಾತ್ರೆಯ ರಥೋತ್ಸವದಲ್ಲಿ ವೀರಭದ್ರೇಶ್ವರ ಮೂರ್ತಿಯೊಂದಿಗೆ ರಾಮಲಿಂಗೇಶ್ವರ ಮೂರ್ತಿಯ ಉತ್ಸವವನ್ನೂ ಮಾಡುತ್ತಾ ಬಂದಿದ್ದಾರೆ. ಗ್ರಾಮದ ಹಿರಿಯರ ಸಲಹೆ ಪಡೆದು ಈ ಬಾರಿಯ ಜಾತ್ರೆಯಲ್ಲಿ ಈ ಪುರಾತನ ರಥವನ್ನೂ ಜೀಣೋದ್ಧಾರ ಮಾಡಿ ಎರಡೂ ತೇರುಗಳನ್ನು ಎಳೆಯುವ ಸಂಕಲ್ಪವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.

    ಈಗಾಗಲೇ ದುರಸ್ತಿ ಮಾಡುವ ನಿಟ್ಟಿನಲ್ಲಿ ಕಲ್ಲಿನ ಗಾಲಿ ಮತ್ತು ಅಚ್ಚುಗಳನ್ನು ಬದಲಾವಣೆ ಮಾಡುವ ಕಾಯಕಕ್ಕೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಜತೆಗೆ ಹಳೆಯ ರಾಮಲಿಂಗೇಶ್ವರ ದೇವಸ್ಥಾನವನ್ನೂ ಪುನರುಜ್ಜೀವನಗೊಳಿಸಲಾಗಿದೆ.

    ನನಗೀಗ 88 ವರ್ಷ. ನನ್ನ 7ನೇ ವಯಸ್ಸಿನಲ್ಲಿ ಕೊನೆಯ ಬಾರಿ ಈ ಹಳೆಯ ರಾಮ ಲಿಂಗೇಶ್ವರ ತೇರನ್ನು ಎಳೆದದ್ದು ನೆನಪಿದೆ. ನಂತರ ಕಾರಣಾಂತರ ಗಳಿಂದ ಈ ತೇರು ಎಳೆಯುವುದನ್ನು ನಿಲ್ಲಿಸಿದ್ದರು. ತೇರನ್ನು ದುರಸ್ತಿ ಮಾಡಿಸಿ ಮತ್ತೆ ಈ ವರ್ಷದ ವೀರಭದ್ರೇಶ್ವರ ಜಾತ್ರೆಯಲ್ಲಿ ಹಳೆಯ ತೇರನ್ನು ಎಳೆಯಬೇಕೆಂದು ಗ್ರಾಮಸ್ಥರೆಲ್ಲರೂ ನಿಶ್ಚಯ ಮಾಡಿದ್ದೇವೆ.

    | ಮಹದೇವಪ್ಪ ಹಡಪದ , ಹುನಗುಂದ ಗ್ರಾಮದ ಹಿರಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts