More

    4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ

    ಬೈಲಹೊಂಗಲ, ಬೆಳಗಾವಿ: ಕಾರ್ಖಾನೆಯಿಂದ 17ನೇ ಹಂಗಾಮಿನಲ್ಲಿ ಶೇ.11.50 ಇಳುವರಿ ಪ್ರಮಾಣದಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಮಲ್ಲೂರ ಹೇಳಿದರು.

    ತಾಲೂಕಿನ ಬೆಳವಡಿ ಸಮೀಪದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಅವರು, ಮಾಜಿ ಶಾಸಕ ದಿ. ರಮೇಶ ಬಾಳೇಕುಂದರಗಿ ಅವರು ಕಾರ್ಖಾನೆ ಆರಂಭಿಸಲು ಪಟ್ಟ ಶ್ರಮ ಅವಿಸ್ಮರಣೀಯ ಎಂದರು. 129 ಕೋಟಿ ರೂ. ವೆಚ್ಚದ 98 ಕೆಎಲ್‌ಪಿಡಿ ಸಾಮರ್ಥ್ಯದ ಇಥೆನಾಲ್ ಘಟಕ ಸ್ಥಾಪನೆ ಅನುಮೋದನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಪೆಕ್ಸ್ ಬ್ಯಾಂಕ್ ನೇತೃತ್ವದಲ್ಲಿ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕಬ್ಬು ನುರಿಸುವ ಸಾಮರ್ಥ್ಯವನ್ನು 2,500ದಿಂದ 4,000 ಟಿಸಿಡಿಗೆ ಹೆಚ್ಚಿಸಲು ಕ್ರಮವಹಿಸಲಾಗಿದೆ. 40 ಕೋಟಿ ರೂ. ಸಾಲ ಒಂದೇ ಕಂತಿನಲ್ಲಿ ಅಪೆಕ್ಸ್ ಬ್ಯಾಂಕ್‌ಗೆ ಪಾವತಿಸಿ, ಅಭಿವೃದ್ಧಿಗಾಗಿ ಸಾಲ ಪಡೆಯಲಾಗುತ್ತಿದೆ. ನೂತನವಾಗಿ 20 ಸಾವಿರ ರೂ. ಷೇರು ಬೆಲೆ ನಿಗದಿಪಡಿಸಿ, 10 ಸಾವಿರ ಸದಸ್ಯರನ್ನು ನೋಂದಾಯಿಸಲು ಕಾರ್ಖಾನೆ ಮುಂದಾಗಿದೆ.

    ಕೆಐಡಿಬಿ ಸಂಸ್ಥೆಯಿಂದ ಕಾರ್ಖಾನೆಗೆ ಲೀಜ್ ಪಡೆದ 34 ಎಕರೆ ಜಮೀನು ಅವಧಿ ವಿಸ್ತರಿಸಲು, ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಖಾನೆಯ ಇನ್ನುಳಿದ 108 ಎಕರೆ ಜಮೀನನ್ನು ಕೈಗಾರಿಕಾ ಭೂ ಪರಿವರ್ತನೆಗಾಗಿ ಡಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಕಳೆದ ಸಾಲಿನಲ್ಲಿ 3,38,306 ಮೆ.ಟನ್ ಕಬ್ಬು ನುರಿಯಲಾಗಿದೆ. ಶೇ.11.38 ಸಕ್ಕರೆ ಇಳುವರಿ ಪ್ರಮಾಣದಂತೆ 3,83,083 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಲಾಗಿದೆ. ಪ್ರತಿ ಮೆ.ಟನ್ ಕಬ್ಬಿಗೆ 2,500 ರೂ.ರಂತೆ ಬಿಲ್ ಪಾವತಿಸಲಾಗಿದೆ.

    ವಿಜಯದಶಮಿ ದಿನ ಬಾಯ್ಲರ್ ಪ್ರದೀಪನಾ ಕಾರ್ಯ ನಡೆಯಲಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಕಬ್ಬು ನುರಿಸಲು ತಯಾರಿ ನಡೆಸಲಾಗಿದೆ. ಕಬ್ಬು ಕಟಾವಿಗೆ ಮಹಾರಾಷ್ಟ್ರ, ಕರ್ನಾಟಕದ 250 ಗ್ಯಾಂಗ್ ಪಡೆಯಲು ಕ್ರಮ ಜರುಗಿಸಲಾಗಿದೆ ಎಂದರು. ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ನಿರ್ದೇಶಕರಾದ ಬಸವರಾಜ ಬಾಳೇಕುಂದರಗಿ, ಗುರುಪುತ್ರಪ್ಪ ಹೊಸಮನಿ, ಪಾರಿಸಪ್ಪ ಭಾವಿ, ಅಶೋಕ ಬಾಳೇಕುಂದರಗಿ, ಬಸವರಾಜ ಮೊಖಾಶಿ, ಮಡಿವಾಳಪ್ಪ ಅಂಗಡಿ, ಮಲ್ಲಪ್ಪ ಮುರಗೋಡ, ಶ್ರೀಕರ ಕುಲಕರ್ಣಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಅದೃಶ್ಯಪ್ಪ ಕೊಟಬಾಗಿ, ಕಮಲಾ ಅವ್ವಕ್ಕನವರ, ಕಸ್ತೂರಿ ಸೋಮನಟ್ಟಿ, ಪ್ರದೀಪ ವನ್ನೂರ, ಮಲ್ಲಯ್ಯ ರುದ್ರಾಪುರ, ಗಂಗಪ್ಪ ಭರಮಣ್ಣವರ, ನಿಂಗಪ್ಪ ಚೌಡನ್ನವರ, ಮಂಜುನಾಥ ದಿಂಡಲಕೊಪ್ಪ, ಪ್ರಕಾಶ ಮೂಗಬಸವ, ಬಸವರಾಜ ಇಂಗಳಗಿ, ಕಾರ್ಯದರ್ಶಿ ಅಶೋಕ ಬೊಮ್ಮನ್ನವರ, ಬಾಬು ಸಂಗೋಜಿ ಇತರರು ಇದ್ದರು. ವರದಿ ಮಂಡನೆ ವೇಳೆ ಆಡಳಿತ ಮಂಡಳಿ ಸದಸ್ಯರು ಹಾಗೂ ರೈತರ ನಡುವೆ ವಾದವಿವಾದ ನಡೆಯಿತು. ಪೊಲೀಸರು, ಹಿರಿಯರು ಪರಿಸ್ಥಿತಿ ಶಾಂತಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts