More

    4 ದಿನಕ್ಕೆ ಗೋವಿನಜೋಳ ಖರೀದಿ ಅಂತ್ಯ

    ನವಲಗುಂದ : ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿಗೆ ಏಜೆನ್ಸಿಯಾಗಿದ್ದ ಕೆಎಂಎಫ್ ನಾಲ್ಕು ದಿನದಲ್ಲಿ ಗೋವಿನ ಜೋಳ ಖರೀದಿ ಪ್ರಕ್ರಿಯೆ ಅಂತ್ಯಗೊಳಿಸಿದ್ದು, ಇದರಿಂದ ಸಾವಿರಾರು ರೈತರು ಬೆಂಬಲ ಬೆಲೆ ಯೋಜನೆಯಿಂದ ವಂಚಿತರಾಗಿದ್ದಾರೆ.

    ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಗೋವಿನಜೋಳ ಖರೀದಿಸುವುದಾಗಿ ಘೊಷಿಸಿದ್ದರಿಂದ ಸಾವಿರಾರು ರೈತರು ಗೋವಿನಜೋಳ ಮಾರಾಟ ಮಾಡಲು ಮುಂದಾಗಿದ್ದರು. ಆದರೆ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಗೋವಿನಜೋಳ ಖರೀದಿಸಿಬೇಕಿದ್ದ ಕೆಎಂಎಫ್ 4 ದಿನದಲ್ಲೇ ಪ್ರಕ್ರಿಯೆ ಸ್ಥಗಿತಗೊಳಿಸಿದೆ.

    ನವಲಗುಂದ ತಾಲೂಕಿನಲ್ಲಿಯೇ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಗೋವಿನಜೋಳ ಬೆಳೆದಿದ್ದಾರೆ. ಅದರಂತೆ ಅಣ್ಣಿಗೇರಿ, ಕಲಘಟಗಿ, ಕುಂದಗೋಳ ತಾಲೂಕು ಸೇರಿ ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ರೈತರು ಗೋವಿನಜೋಳ ಬೆಳೆದಿದ್ದಾರೆ. ಕರೊನಾ ಲಾಕ್​ಡೌನ್​ನಿಂದಾಗಿ ಗೋವಿನಜೋಳ ಕೊಳ್ಳುವವರಿಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದರು. ದಲ್ಲಾಳಿಗಳು ಗೋವಿನಜೋಳ ಖರೀದಿಗೆ ಬರುತ್ತಿಲ್ಲ. ಇದರಿಂದ ಬೆಂಬಲ ಬೆಲೆಯನ್ನೇ ನೆಚ್ಚಿಕೊಂಡಿದ್ದ ರೈತರಿಗೆ ಸರ್ಕಾರ ನಿರಾಸೆ ಮೂಡಿಸಿದೆ.

    ಈಗಾಗಲೇ ಸರ್ಕಾರ ನಿಗದಿಪಡಿಸಿದಂತೆ ಕೆಎಂಎಫ್ ಸ್ಥಳೀಯ ಮಟ್ಟದ ಹಾಲಿನ ಡೈರಿಗಳ ಮೂಲಕ ರೈತರಿಂದ ಗೋವಿನಜೋಳ ಸ್ಯಾಂಪಲ್ ತರಿಸಿಕೊಂಡು ಸೂಟ್ ಆಪ್​ನಿಂದ ಆನ್​ಲೈನ್ ಅರ್ಜಿ ಹಾಕಿಸಿಕೊಂಡು ಗೋವಿನಜೋಳ ಖರೀದಿಸಿದೆ. ಮೇ 9ರಿಂದ ಪ್ರಾರಂಭಗೊಂಡ ಗೋವಿನಜೋಳ ಖರೀದಿ ಮೇ 12ಕ್ಕೆ ಅಂತ್ಯಗೊಂಡಿದೆ.

    ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 534 ರೈತರಿಂದ ಅರ್ಜಿಗಳನ್ನು ಕೆಎಂಎಫ್ ಸ್ವೀಕರಿಸಿದೆ. ಪ್ರತಿ ರೈತರಿಂದ ಕನಿಷ್ಠ 20 ಹಾಗೂ ಗರಿಷ್ಠ 50 ಕ್ವಿಂಟಾಲ್​ನಂತೆ ಪ್ರತಿ ಕ್ವಿಂಟಾಲ್​ಗೆ 1,760 ರೂ. ದರ ನಿಗದಿಪಡಿಸಿ ಗೋವಿನಜೋಳ ಖರೀದಿಸಿದೆ. ಕೆಎಂಎಫ್ ತನ್ನ ಗುರಿ ಪ್ರಕಾರ 7 ಸಾವಿರ ಟನ್ ಗೋವಿನಜೋಳ ಖರೀದಿಸಿದೆ.

    ಬೆಂಬಲ ಬೆಲೆಯಡಿ ಖರೀದಿ ಸುದ್ದಿ ತಿಳಿಯುವ ಮೊದಲೆ ಪ್ರಕ್ರಿಯೆ ಮುಗಿದಿದೆ. ರೈತರಿಗೆ ಬೆಂಬಲ ಬೆಲೆ ಲಾಭ ಪಡೆಯಲು ಸಾಧ್ಯವಾಗಿಲ್ಲ. ಬೆಂಬಲ ಬೆಲೆಯಡಿ ಮಾರಾಟ ಮಾಡಲಾಗದ ರೈತರು, ಖರೀದಿ ಪ್ರಕ್ರಿಯೆ ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

    ಸರ್ಕಾರದ ನಿಬಂಧನೆಗೊಳಪಟ್ಟು ಕೆಎಂಎಫ್​ಗೆ ನಿಗದಿಪಡಿಸಿದ ಆದೇಶದಂತೆ ಸಾಧ್ಯವಿರುವಷ್ಟು ಗೋವಿನಜೋಳ ಖರೀದಿಸಿದ್ದೇವೆ. ಸರ್ಕಾರ ರೈತರ ಹೆಚ್ಚಿನ ಗೋವಿಜೋಳ ಖರೀದಿಸಲು ಮುಂದಾಗಬೇಕು. ಆಗ ರೈತರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುವುದಿಲ್ಲ. ಕೆಎಂಎಫ್​ಗೆ ಸಾಧ್ಯವಿರುವಷ್ಟು ಗೋವಿನಜೋಳ ಮಾತ್ರ ಖರೀದಿ ಮಾಡಿದ್ದೇವೆ. ಹೆಚ್ಚು ಖರೀದಿ ಮಾಡುವುದರಿಂದ ನಮಗೆ ಆಗುವ ನಷ್ಟ ಭರಿಸುವವರ್ಯಾರು.

    | ಬಸವರಾಜ ಅರಬಗೊಂಡ, ಧಾರವಾಡ ಕೆಎಂಎಫ್ ಅಧ್ಯಕ್ಷ

    ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರಾರಂಭಿಸಿದ ಗೋವಿನಜೋಳ ಖರೀದಿ ಮುಂದುವರಿಸಬೇಕು. ರೈತರಿಗೆ ಸರ್ಕಾರದ ಸೌಲಭ್ಯ ಗೊತ್ತಾಗುವ ಮುನ್ನವೇ ಬೆರಳಣಿಕೆಯಷ್ಟು ರೈತರಿಂದ ಖರೀದಿ ಮಾಡಿ, ಅನ್ಯಾಯ ಮಾಡಲಾಗಿದೆ. ಕೂಡಲೇ ಸರ್ಕಾರ ರೈತರ ಸಂಕಷ್ಟಕ್ಕವನ್ನರಿತು ಗೋವಿನಜೋಳ ಖರೀದಿ ಪ್ರಕ್ರಿಯೆ ಪುನಾರಂಭಿಸಬೇಕು.

    | ಕುಮಾರ ಬ್ಯಾಹೆಟ್ಟಿ, ರೈತ ಕಾಲವಾಡ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts