More

    36ನೇ ಉಪಕಾಲುವೆ ವ್ಯಾಪ್ತಿಯ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ವಿವಿಧ ಗ್ರಾಮಗಳ ರೈತರ ಒತ್ತಾಯ

    ಸಿಂಧನೂರು: ತಾಲೂಕಿನ 36ನೇ ಉಪಕಾಲುವೆ ವ್ಯಾಪ್ತಿಯ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ಕಾಲುವೆ ನೀರು ಹರಿಸುವುದನ್ನು ನಿಲುಗಡೆಗೊಳಿಸಬಾರದು ಎಂದು ಒತ್ತಾಯಿಸಿ ರೈತರು ಮುಖ್ಯನಾಲೆ ಬಳಿ ಗುರುವಾರ ಧರಣಿ ನಡೆಸಿದರು.

    ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅತಿ ಹೆಚ್ಚು ಭೂಮಿಗೆ ನೀರುಣಿಸುವುದು 36ನೇ ಉಪಕಾಲುವೆಯಾಗಿದ್ದು ಕೆಳ ಭಾಗಕ್ಕೆ ಸಮರ್ಪಕ ನೀರು ಹರಿದು ಬರುತ್ತಿಲ್ಲ. ಮೇಲ್ಭಾಗದಲ್ಲಿ ಅಕ್ರಮ ನೀರು ಪಡೆಯುವುದೇ ಇದಕ್ಕೆ ಕಾರಣವಾಗಿದೆ. ವಾರ ಬಂದಿ ಇರುವುದು ಕೂಡ ಸಮಸ್ಯೆಯಾಗಲಿದೆ. ಈ ಬಗ್ಗೆ ಅಧಿಕಾರಿಗಳು ಆಲೋಚಿಸುತ್ತಿಲ್ಲ ಎಂದು ರೈತರು ಆರೋಪಿಸಿದರು.

    ಧರಣಿ ಸ್ಥಳಕ್ಕೆ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮ್ಮೀ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ , ಜಿಪಂ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಅಮರೇಗೌಡ ವಿರೂಪಾಪುರ, ಮುಖಂಡರಾದ ರಾಜುಗೌಡ ಬಾದರ್ಲಿ, ಆರ್.ಸಿದ್ದನಗೌಡ ತುರ್ವಿಹಾಳ, ಪ್ರಸನ್ನ ಪಾಟೀಲ್ ಭೇಟಿ ನೀಡಿ, ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಈಗ ಬೆಳೆ ಒಣಗುತ್ತಿದ್ದು ನೀರು ಬಂದ್ ಮಾಡಬಾರದು ಎಂದರು.

    ನೀರಾವರಿ ಇಲಾಖೆ ಅಧಿಕಾರಿಗಳಾದ ಬಸವರಾಜ ಗೊರೇಬಾಳ, ಈರಣ್ಣ ಮಾತನಾಡಿ, ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು. ತೊಂದರೆ ಆಗದಂತೆ ಇನ್ನು ಮುಂದೆ ಎಚ್ಚರವಹಿಸಲಾಗುವುದು. ಮೇಲ್ಭಾಗ ಮತ್ತು ಕೆಳ ಭಾಗ ಎನ್ನುವ ಭೇದ-ಭಾವ ಇಲ್ಲ ಎಂದರು.

    ವಿವಿಧ ಗ್ರಾಮಗಳ ರೈತರಾದ ಶಿವರಡ್ಡಿ ವಟಗಲ್, ಮಲ್ಲಯ್ಯ ಹಟ್ಟಿ, ಶೇಖರಗೌಡ ಅಮರಾಪುರ, ಬಸವರಾಜ ಮಲ್ಕಾಪುರ, ವೆಂಕೋಬ ಹೊಸಳ್ಳಿ(ಇಜೆ), ಮುದಕನಗೌಡ, ಶರಣೇಗೌಡ ಪೊಪಾ. ಸೇರಿದಂತೆ ನೂರಾರು ರೈತರಿದ್ದರು.

    ವಿಷದ ಬಾಟಲಿ ಪ್ರದರ್ಶನ
    ಕೆಳ ಭಾಗದಲ್ಲಿ ಭತ್ತ ನಾಟಿ ಮಾಡಿ ತಿಂಗಳು ಕಳೆದಿದ್ದು ಇದುವರೆಗೆ ಭತ್ತಕ್ಕೆ ಸಮರ್ಪಕ ನೀರು ಹರಿಸಲಾಗುತ್ತಿಲ್ಲ. ಮೂರು ದಿನಗಳವರೆಗೆ ಕಾಲುವೆ ನೀರು ಬಂದ್ ಮಾಡಿದರೆ ಬೆಳೆ ಒಣಗಿ ಹೋಗುತ್ತವೆ. ನೀರಿನ ಕೊರತೆ ನೀಗಿಸದಿದ್ದರೆ ಇಲ್ಲಿಯೇ ವಿಷ ಕುಡಿಯಬೇಕಾಗುತ್ತದೆಂದು ಕೆಲ ರೈತರು ವಿಷದ ಬಾಟಲಿ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts