More

    32 ಕುಟುಂಬಗಳಿಗೆ ರಕ್ಷಣೆ ನೀಡಿ

    ಕಾರವಾರ: ಕುಮಟಾ ತಾಲೂಕಿನ ಹುಬ್ಬಣಗೇರಿ ಗ್ರಾಮದ ಸರ್ವೆ ನಂಬರ್ 91/1 ರಲ್ಲಿ ವಾಸ್ತವ್ಯವಿರುವ 32 ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಎಸ್​ಪಿಗೆ ಮನವಿ ಮಾಡಿದ್ದಾರೆ.

    ಒಕ್ಕಲಿಗ ಸಮಾಜದ 32 ಕುಟುಂಬಗಳು ಹಲವು ವರ್ಷದಿಂದ ಅಲ್ಲಿ ವಾಸ್ತವ್ಯ ಮಾಡಿಕೊಂಡಿವೆ. ಊಳುವವನೇ ಹೊಲದೊಡೆಯ ಕಾಯ್ದೆಯಂತೆ ಭೂಮಿಯನ್ನು ಅವರವರ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, 1981 ರಲ್ಲಿ ಭೂ ನ್ಯಾಯ ಮಂಡಳಿ ಆ ಕುಟುಂಬಗಳು ಸಾಗುವಳಿದಾರರಲ್ಲ ಎಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯ ನ್ಯಾಯ ಮಂಡಳಿ ಆದೇಶಕ್ಕೆ ತಡೆ ನೀಡಿ, ಅರ್ಜಿಗಳನ್ನು ಮರು ಪರಿಶೀಲನೆ ಮಾಡುವಂತೆ 1982 ರಲ್ಲಿ ಆದೇಶ ನೀಡಿದೆ. ನಂತರ ಭೂ ನ್ಯಾಯ ಮಂಡಳಿಯಲ್ಲಿ ಪ್ರಕರಣಗಳು ಪರಿಶೀಲಿಸಿ ಇತ್ಯರ್ಥವಾದ ಬಗ್ಗೆ ಯಾವುದೇ ದಾಖಲೆ ಇಲ್ಲ. ಆರ್​ಟಿಸಿಯಲ್ಲಿ ಇದುವರೆಗೆ ಹೈಕೋರ್ಟ್ ತಡೆಯಾಜ್ಞೆ ಇರುವ ಬಗ್ಗೆ ದಾಖಲೆ ಇದೆ. ಆದರೆ, ವಿವಾದಿತ ಈ ಜಮೀನನ್ನು ಬೇರೆಯವರಿಗೆ ಮೂಲ ಮಾಲೀಕರು ಮಾರಾಟ ಮಾಡಿದ್ದಾರೆ.

    ಖರೀದಿ ಮಾಡಿದ ವ್ಯಕ್ತಿ ಪ್ರತಿ ದಿನ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ನಮಗೆ ವಾಸ್ತವ್ಯಕ್ಕೆ ಬೇರೆ ಜಾಗವಿಲ್ಲ. ನ್ಯಾಯ ಮಂಡಳಿಯಲ್ಲಿ ಪ್ರಕರಣ ಇತ್ಯರ್ಥವಾಗಿಲ್ಲ. ಇದರಿಂದ ನಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.,ಎಸ್​ಪಿ ಶಿವ ಪ್ರಕಾಶ ದೇವರಾಜು ಮನವಿ ಸ್ವೀಕರಿಸಿ ಈ ಕುರಿತು ಪರಿಶೀಲಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಲಕ್ಷ್ಮಣ ನಾಗು ಗೌಡ, ಮಾಸ್ತಿ ಗೌಡ, ಶಂಕರ ಎಂ.ಗೌಡ ಹಾಗೂ ಇತರರು ಇದ್ದರು.

    …..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts