More

    31 ಕೋಟಿ ರೂ. ಬಾಕಿ

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ 2019-20ನೇ ಸಾಲಿನ(ಜನವರಿ 7ರವರೆಗೆ)ಲ್ಲಿ ನಾಲ್ಕು ಪ್ರಮುಖ ಆದಾಯ ಮೂಲಗಳಿಂದ 53.68 ಕೋ.ರೂ. ತೆರಿಗೆ ಸಂಗ್ರಹಿಸಿದೆ. ಆದರೆ, ಬೇಡಿಕೆ ಗುರಿ ಮುಟ್ಟಲು ಮಾರ್ಚ್ ಅಂತ್ಯದವರೆಗೆ ಇನ್ನು 31.37 ಕೋ. ರೂ. ವಸೂಲಾಗಬೇಕಿದೆ.

    ಪಾಲಿಕೆಗೆ ಬಹು ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆ. ಅವಳಿ ನಗರದಲ್ಲಿ 2.65 ಲಕ್ಷ ಮೇಲ್ಪಟ್ಟು ಆಸ್ತಿಗಳಿವೆ. ಹಿಂದಿನ ಬಾಕಿ 16.54 ಕೋ. ರೂ. ಸೇರಿ ಪ್ರಸಕ್ತ ಸಾಲಿನಲ್ಲಿ 72.97 ಕೋ. ರೂ. ಆಸ್ತಿ ತೆರಿಗೆ ವಸೂಲಾಗಬೇಕಿತ್ತು. ಆದರೆ, 48.99 ಕೋ. ರೂ. ಸಂದಾಯವಾಗಿದೆ. ಇದರಿಂದ ಆಸ್ತಿ ತೆರಿಗೆ ವಸೂಲಿಯಲ್ಲಿ ಪಾಲಿಕೆ ಶೇ. 67.14 ರಷ್ಟು ಪ್ರಗತಿ ಸಾಧಿಸಿದಂತಾಗಿದೆ. ತೆರಿಗೆ ವರ್ಷದ ಮೊದಲ ತಿಂಗಳ (ಏಪ್ರಿಲ್)ಲ್ಲಿ ಪಾವತಿಸಿದರೆ ಶೇ. 5ರಷ್ಟು ರಿಯಾಯಿತಿ ಇರುವುದರಿಂದ ಆಗಲೇ ದೊಡ್ಡ ಪ್ರಮಾಣದಲ್ಲಿ ಪಾಲಿಕೆಗೆ ಆಸ್ತಿ ತೆರಿಗೆ ಬಂದು ಸೇರಿರುತ್ತದೆ.

    ವಾಣಿಜ್ಯ ವಹಿವಾಟು, ಉದ್ಯಮಗಳನ್ನು ನಡೆಸಲು ನೀಡಲಾಗುವ ಟ್ರೇಡ್ ಲೈಸನ್ಸ್​ನಿಂದ 1.23 ಕೋ. ರೂ. ವಸೂಲಿ ಮಾಡಿದೆ. ಆದರೆ, ಇಲ್ಲಿ 3 ಕೋ. ರೂ. ಬೇಡಿಕೆ ಇತ್ತು.

    ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳಿಂದ 2.99 ಕೋ.ರೂ. ಬಾಡಿಗೆ ಬಂದಿದೆ. ಆದರೆ, ಹಿಂದಿನ ಬಾಕಿ 2.18 ಕೋ.ರೂ. ಸೇರಿ 5.87 ಕೋ.ರೂ. ಬೇಡಿಕೆ ಇತ್ತು. ಇದರಲ್ಲಿ ಕೋರ್ಟ್​ನಲ್ಲಿ ವ್ಯಾಜ್ಯವಿರುವ ಮಳಿಗೆಗಳ 1.46 ಕೋ. ರೂ. ಸೇರಿದೆ. ಬಾಡಿಗೆ ಹೆಚ್ಚಳ ಸೇರಿ ವಿವಿಧ ಕಾರಣಗಳಿಂದ ಕೆಲ ವಾಣಿಜ್ಯ ಮಳಿಗೆ ಬಾಡಿಗೆದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅವು ಇನ್ನೂ ಇತ್ಯರ್ಥವಾಗಬೇಕಿದೆ.

    ಜಾಹೀರಾತು ಕರಕ್ಕೆ ಜಿಎಸ್​ಟಿ ಹೊಡೆತ

    ಕೇಂದ್ರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯು ಪಾಲಿಕೆಯ ಜಾಹೀರಾತು ಕರಕ್ಕೆ ಕತ್ತರಿ ಹಾಕಿದೆ. ತಾವು ಜಿಎಸ್​ಟಿ ಪಾವತಿಸುತ್ತಿರುವುದರಿಂದ ಪಾಲಿಕೆಗೆ ಪ್ರತ್ಯೇಕವಾಗಿ ಜಾಹೀರಾತು ಕರ ಪಾವತಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಜಾಹೀರಾತು ಏಜೆನ್ಸಿಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ದಾವೆ ವಿಚಾರಣೆಯಲ್ಲಿದೆ. ಹಾಗಾಗಿ 2019-20ನೇ ಸಾಲಿನಲ್ಲಿ ಪಾಲಿಕೆಗೆ ಸಂದಾಯವಾಗಬೇಕಿದ್ದ ಜಾಹೀರಾತು ಕರ ನಿಂತಿದೆ.

    ಜಿಎಸ್​ಟಿ ಪೂರ್ವ ಬಾಕಿ ಇದ್ದ ಜಾಹೀರಾತು ಕರವನ್ನಷ್ಟೇ ಪಾಲಿಕೆ ವಸೂಲಿ ಮಾಡುತ್ತಿದೆ. ಹಿಂದಿನ ಬಾಕಿ 1.75 ಕೋ. ರೂ. ಹಾಗೂ 2019-20ನೇ ಸಾಲಿನ ಬೇಡಿಕೆ 1.45 ಕೋ. ರೂ. ಸೇರಿ ಜಾಹೀರಾತು ಕರ ರೂಪದಲ್ಲಿ ಪಾಲಿಕೆ ಬೊಕ್ಕಸಕ್ಕೆ 3.20 ಕೋ. ರೂ. ಸಂದಾಯವಾಗಬೇಕಿತ್ತು. ಆದರೆ, ಬಂದಿದ್ದು 46.60 ಲಕ್ಷ ರೂ. ಮಾತ್ರ. ಹಿಂದಿನ ಬಾಕಿಯಲ್ಲೇ ಇನ್ನೂ 1.30 ಕೋ. ರೂ. ವಸೂಲಾಗಬೇಕು. ಜಾಹೀರಾತು ಏಜೆನ್ಸಿಗಳಿಗೆ ನೋಟಿಸ್ ನೀಡಿ ವಸೂಲಿ ಮಾಡಲು ಕ್ರಮ ಕೈಗೊಂಡಿದೆ.

    ಮಾರ್ಚ್ 15ರೊಳಗೆ ಪೂರ್ಣ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡಲು ಕ್ರಮ ಜರುಗಿಸುತ್ತೇವೆ. ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡಲಾಗುವುದು. ಅಧಿಕಾರಿ ಹಾಗೂ ಸಿಬ್ಬಂದಿಗೆ ವಾರದ ಗುರಿ ನಿಗದಿಪಡಿಸಿ ವಸೂಲಿ ಮಾಡಲಾಗುವುದು.

    ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts