More

    3 ಸಾವಿರ ಕಾರ್ಮಿಕರು ತವರಿನತ್ತ!

    ಬೆಳಗಾವಿ: ಜಿಲ್ಲೆಗೆ ಕಾರ್ಮಿಕರ ಕೊರತೆಯಾಗುವ ಅಳಕು ಎದುರಾಗುತ್ತಿದೆ! ನಗರದಲ್ಲಿರುವ ಹೊರ ರಾಜ್ಯ ಕಾರ್ಮಿಕರು ಜಿಲ್ಲೆಯಿಂದ ಒಬ್ಬೊಬ್ಬರಾಗಿ ಕಾಲು ಕೀಳುತ್ತಿದ್ದಾರೆ.

    ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ, ಕೈಗಾರಿಕೆ ಸೇರಿ ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೊರ ರಾಜ್ಯದ ಕಾರ್ಮಿಕರು, ಕರೊನಾ ಪರಿಣಾಮದಿಂದ ತಮ್ಮ ರಾಜ್ಯಗಳಿಗೆ ಮರಳಿ ಹೋಗುತ್ತಿದ್ದಾರೆ. ಇದರಿಂದ ಜಿಲ್ಲೆಗೆ ಭವಿಷ್ಯದಲ್ಲಿ ಕಾರ್ಮಿಕರ ಅಭಾವವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಪ್ರಮುಖವಾಗಿ ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

    ಸುಮಾರು 3 ಸಾವಿರಕ್ಕೂ ಅಧಿಕ ಕಾರ್ಮಿಕರು ಬೆಳಗಾವಿ ಜಿಲ್ಲೆಯಿಂದ ತವರಿಗೆ ಹೋಗುವುದಕ್ಕೆ ಸರ್ಕಾರದ ಸೇವಾ ಸಿಂಧು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕ ಇಲಾಖೆ ಸಹಾಯದಿಂದ ಅರ್ಜಿ ಸಲ್ಲಿಸಿರುವ ಕಾರ್ಮಿಕರಿಗೆ ಇದೀಗ ಒಪ್ಪಿಗೆಯೂ ದೊರೆತಿದೆ. ಇವರೆಲ್ಲರೂ ಹುಬ್ಬಳ್ಳಿಯಿಂದ ಹೊರಡುತ್ತಿರುವ ಶ್ರಮಿಕ ರೈಲಿನ ಮೂಲಕ ತಮ್ಮ ರಾಜ್ಯ ತಲುಪಲಿದ್ದಾರೆ.

    ತೆರಳಲಿರುವ ಕಾರ್ಮಿಕರ ಮಾಹಿತಿ: ಮಂಗಳವಾರ ಬೆಳಗಾವಿಯಿಂದ 167 ಕಾರ್ಮಿಕರು ಜಾರ್ಖಂಡ್‌ಗೆ ತೆರಳಿದರು. ಬುಧವಾರ (ಮೇ 20) ಜಿಲ್ಲೆಯಿಂದ 430 ಕಾರ್ಮಿಕರು ಬಿಹಾರಕ್ಕೆ ತೆರಳಲಿದ್ದಾರೆ. ಗುರುವಾರ (ಮೇ 21) 554 ಕಾರ್ಮಿಕರು ಉತ್ತರ ಪ್ರದೇಶಕ್ಕೆ ಹೋಗಲಿದ್ದಾರೆ. ಈ ಎಲ್ಲ ಕಾರ್ಮಿಕರನ್ನು ಬೆಳಗಾವಿಯಿಂದ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಹುಬ್ಬಳಿಗೆ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಶ್ರಮಿಕ ರೈಲಿನ ಮೂಲಕ ಅವರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ.

    1,800 ಕಾರ್ಮಿಕರು ನೋಂದಣಿ: ಬೆಳಗಾವಿಯಲ್ಲಿರುವ ಹೊರ ರಾಜ್ಯದ 1,800 ಅಸಂಘಟಿತ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗುವುದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕ ಇಲಾಖೆ ಇವರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಬಿಹಾರದ 394, ಜಾರ್ಖಂಡ್‌ನ 363 ಹಾಗೂ ಉತ್ತರ ಪ್ರದೇಶದ 1,043 ಕಾರ್ಮಿಕರು ತವರಿಗೆ ಹೋಗುವುದಕ್ಕೆ ಸೇವಾ ಸಿಂಧು ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ.

    ಕರೊನಾದಿಂದ ಊರಿನತ್ತ ಹೆಜ್ಜೆ: ಜಿಲ್ಲೆಯಿಂದ ತೆರಳುತ್ತಿರುವ ಹೊರ ರಾಜ್ಯದ ಕಾರ್ಮಿಕರು ಮತ್ತೆ ವಾಪಸ್ ಬರಬೇಕೆಂದರೆ ಅರ್ಧ ವರ್ಷ ಹಿಡಿಯಬಹುದು. ಕೆಲ ಕಾರ್ಮಿಕರು ಬರದೇ ಇರಬಹುದು. ಹೀಗಾಗಿ ಬೆಳಗಾವಿಗೆ ಕಾರ್ಮಿಕರ ಅಭಾವದ ಪರಿಣಾಮ ಎದುರಿಸುವ ಸಾಧ್ಯತೆ ಇದೆ.

    ಬೆಳಗಾವಿ ಜಿಲ್ಲೆಯಲ್ಲಿರುವ ಅನ್ಯ ರಾಜ್ಯದ ಕಾರ್ಮಿಕರನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿದೆ. ನಗರದ ಸಿಪಿಇಡಿ ಮೈದಾನದಿಂದ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
    | ವೆಂಕಟೇಶ ಶಿಂಧಿಹಟ್ಟಿ, ಕಾರ್ಮಿಕ ಇಲಾಖೆ ಉಪ ಆಯುಕ್ತ, ಬೆಳಗಾವಿ ಪ್ರಾದೇಶಿಕ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts