More

    ದ.ಕ.ಕ್ಕೆ 3 ಖಾಸಗಿ ಕೊವಿಡ್ ಲ್ಯಾಬ್, ಇನ್ನಷ್ಟು ಚುರುಕಾಗಿ ಕೋವಿಡ್-19 ಟೆಸ್ಟ್‌ಗೆ ಜಿಲ್ಲಾಡಳಿತ ಚಿಂತನೆ

    – ವೇಣುವಿನೋದ್ ಕೆ.ಎಸ್.ಮಂಗಳೂರು
    ದೇಶದೆಲ್ಲೆಡೆ ಕೋವಿಡ್-19 ಟೆಸ್ಟಿಂಗ್ ಇನ್ನಷ್ಟು ಚುರುಕಾಗಬೇಕು, ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂಬ ಸರ್ಕಾರದ ಆಕಾಂಕ್ಷೆಗೆ ಪೂರಕವಾಗಿ ದ.ಕ.ಜಿಲ್ಲೆಯಲ್ಲೂ ಹೊಸದಾಗಿ ಮೂರು ಖಾಸಗಿ ಕೊವಿಡ್ ಲ್ಯಾಬ್‌ಗಳು ಶೀಘ್ರ ಕಾರ್ಯಾರಂಭಿಸುವ ಸಾಧ್ಯತೆ ಇದೆ.

    ಸರ್ಕಾರಿ ಜಿಲ್ಲಾ ಲ್ಯಾಬನ್ನೇ ನೆಚ್ಚಿಕೊಳ್ಳುವ ಬದಲು ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಯೆನಪೋಯ, ಫಾದರ್ ಮುಲ್ಲರ್ಸ್‌ ಹಾಗೂ ಕೆಎಂಸಿಯಲ್ಲಿ ಕೂಡ ಲ್ಯಾಬ್ ಪ್ರಾರಂಭಗೊಂಡರೆ ಖಾಸಗಿ ಆಸ್ಪತ್ರೆಗಳಿಂದ ಬರುವ ಪ್ರಕರಣಗಳನ್ನು ಅಲ್ಲಿಗೆ ಕಳುಹಿಸಬಹುದು ಎನ್ನುವ ಆಲೋಚನೆ ಆಡಳಿತಕ್ಕಿದೆ.

    ಈಗಾಗಲೇ ಈ ಮೂರೂ ಆಸ್ಪತ್ರೆಯ ಮೈಕ್ರೋಬಯಾಲಜಿಸ್ಟ್‌ಗಳು ಹಾಗೂ ಟೆಕ್ನೀಶಿಯನ್‌ಗಳು ಐಸಿಎಂಆರ್ ನಿಯೋಜಿತ ಕೊವಿಡ್ ಟೆಸ್ಟ್ ಮೆಂಟರ್ ಸೆಂಟರ್(ತರಬೇತಿ ಕೇಂದ್ರ)ವಾದ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಮೂರೂ ಖಾಸಗಿ ಆಸ್ಪತ್ರೆಗಳಲ್ಲೂ ಕೊವಿಡ್ ಟೆಸ್ಟ್(ಪಿಸಿಆರ್ ಟೆಸ್ಟ್) ಮಾಡುವುದಕ್ಕೆ ಬೇಕಾದ ಮೂಲಸೌಕರ್ಯಗಳು ಈಗಾಗಲೇ ಇವೆ. ಸಿಬ್ಬಂದಿಗಳ ಲಭ್ಯತೆ ಗೂ ಸಮಸ್ಯೆಯಿಲ್ಲ.

    ಟ್ರಯಲ್ ಟೆಸ್ಟ್ ಆಗಬೇಕು: ತರಬೇತಿ ಪಡೆದ ಬಂದಿರುವ ಸಿಬ್ಬಂದಿಗಳು ತಮ್ಮ ತಮ್ಮ ಆಸ್ಪತ್ರೆಯ ಲ್ಯಾಬ್‌ಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲು ಅವರಿಗೆ ಸ್ಯಾಂಪಲ್‌ಗಳನ್ನೂ ಒದಗಿಸಲಾಗಿದೆ. ಅವರು ಪರೀಕ್ಷೆ ನಡೆಸಿ, ಅದನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಬೇಕು. ಅಲ್ಲಿ ಅದು ಸರಿಯಿದ್ದರೆ ಬಳಿಕ ನ್ಯಾಷನಲ್ ಅಕ್ರೆಡಿಟೇಶನ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್-ಎನ್‌ಎಬಿಎಲ್‌ನಿಂದ ಅನುಮತಿ ಸಿಗಬೇಕು, ಆ ಬಳಿಕ ಅಂತಿಮವಾಗಿ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಅನುಮೋದನೆ ಸಿಕ್ಕಿದ ಬಳಿಕ ಲ್ಯಾಬ್‌ಗಳು ಕಾರ್ಯಾರಂಭಗೊಳ್ಳಲಿವೆ.

    ಪ್ರಸ್ತುತ ಫಾದರ್ ಮುಲ್ಲರ್ಸ್‌ ಲ್ಯಾಬ್‌ಗೆ ಈಗಾಗಲೇ ಎನ್‌ಎಬಿಎಲ್ ಮಾನ್ಯತೆ ಸಿಕ್ಕಿದೆ, ಆದರೆ ಕೊವಿಡ್ ಟೆಸ್ಟ್ ಮಾಡುವುದಕ್ಕೆ ಪ್ರತ್ಯೇಕ ಮಾನ್ಯತೆ ಬೇಕಾಗುತ್ತದೆ. ಅದನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ. ಈಗಾಗಲೇ ಕಿಟ್‌ಗಳನ್ನು ಆರ್ಡರ್ ಮಾಡಿದ್ದೇವೆ, ಬಂದ ಕೂಡಲೇ ಟೆಸ್ಟ್ ಮಾಡಿ, ನಿಮ್ಹಾನ್ಸ್‌ಗೆ ವರದಿ ಕಳುಹಿಸುತ್ತೇವೆ, ಈಗಿನ ಸನ್ನಿವೇಶ ತುರ್ತು ಇರುವುದರಿಂದ ಈ ಅನುಮೋದನೆ ಪ್ರಕ್ರಿಯೆಯನ್ನು ಐಸಿಎಂಆರ್ ಚುರುಕಾಗಿ ಮಾಡುವುದಾಗಿ ತಿಳಿಸಿದೆ ಎನ್ನುತ್ತಾರೆ ಫಾದರ್ ಮುಲ್ಲರ್ಸ್‌ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ಪ್ರೊಫೆಸರ್ ಡಾ.ಅನೂಪ್ ಶೆಟ್ಟಿ.

    ಜಿಲ್ಲಾ ಲ್ಯಾಬ್ ಸ್ಥಿತಿ: ಸದ್ಯ ಜಿಲ್ಲಾ ಪ್ರಯೋಗಾಲಯದಲ್ಲಿ ದೊಡ್ಡ ಒತ್ತಡವಿಲ್ಲ. ಆದರೆ ಕೆಲವೊಮ್ಮೆ ಪ್ರಕರಣಗಳು ವರದಿಯಾಗುವಾಗ ದಿಢೀರ್ ಆಗಿ ಒತ್ತಡ ಹೆಚ್ಚುತ್ತದೆ. ಉದಾಹರಣೆಗೆ ಫಸ್ಟ್ ನ್ಯೂರೊದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ನಿರಂತರ ಬರತೊಡಗಿದಾಗ ಅವರ ಪ್ರಾಥಮಿಕ, ಎರಡನೇ ಸಂಪರ್ಕಗಳ ಪರೀಕ್ಷೆ ನಡೆಸಬೇಕಾಗುತ್ತದೆ, ಅಂತಹ ವೇಳೆ ಸ್ಯಾಂಪಲ್ ಸಂಖ್ಯೆ ಕೂಡಾ ಹೆಚ್ಚುತ್ತದೆ. ಅದರ ನಡುವೆ ತುರ್ತು ಪ್ರಕರಣಗಳ ಪರೀಕ್ಷೆಯನ್ನೂ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕಾಗುತ್ತದೆ.

    ಅಧಿಕೃತವಾಗಿ ನಮಗೆ ಇನ್ನೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಲ್ಯಾಬ್ ಸ್ಥಾಪನೆ ಬಗ್ಗೆ ನಿರ್ದಿಷ್ಟ ಸೂಚನೆ, ನಿರ್ದೇಶನ ಬಂದಿಲ್ಲ. ಈ ವಿಚಾರವಾಗಿ ಐಸಿಎಂಆರ್ ನಿರ್ಧಾರ ತೆಗೆದುಕೊಳ್ಳುತ್ತದೆ.
    -ಸಿಂಧೂ ಬಿ.ರೂಪೇಶ್, ದ.ಕ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts