More

    21ಕ್ಕೇರಿದ ಕರೊನಾ ಪಾಸಿಟಿವ್ ಸಂಖ್ಯೆ

    ವಿಜಯವಾಣಿ ಸುದ್ದಿಜಾಲ ಗುತ್ತಲ

    ಮಂಡ್ಯದಿಂದ ಆಗಮಿಸಿದ್ದ ಮಹಿಳೆಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಕಲಾಲರ ಪ್ಲಾಟ್ ಅನ್ನು ಶನಿವಾರ ಸೀಲ್​ಡೌನ್ ಮಾಡಲಾಯಿತು.

    ಕರೊನಾ ಸೋಂಕು ತಗುಲಿರುವ ಮಹಿಳೆಯ ವಾಸವಿದ್ದ 2ನೇ ವಾರ್ಡ್ ವ್ಯಾಪ್ತಿಯ ಮನೆಯ ಪ್ರದೇಶಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಎಂ. ಯೋಗೀಶ್ವರ, ಹೆಚ್ಚುವರಿ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ. ದಿಲೀಪ ಶಸಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ತಹಸೀಲ್ದಾರ್ ಶಂಕರ ಜಿ.ಎಸ್, ತಾಲೂಕು ವೈದ್ಯಾಧಿಕಾರಿ ಡಾ. ಪಿ.ಎಸ್ ಕುಂದೂರ ಅವರ ತಂಡ ಜನರಿಂದ ಮಾಹಿತಿ ಸಂಗ್ರಹಿಸಿತು.

    ನಂತರ 65 ಕುಟುಂಬಗಳ ಸುಮಾರು 200 ಜನ ವಾಸವಿರುವ ಕಲಾಲರ ಪ್ಲಾಟ್​ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ನಿವಾಸಿಗಳಿಗೆ ಓಡಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

    ಕಂಟೈನ್ಮೆಂಟ್ ಜೋನ್ ಪ್ರದೇಶದ ಪಕ್ಕದ ನೂರಾರು ರೈತರು ತಮ್ಮ ಜಮೀನಿಗಳಿಗೆ ತೆರಳಲು ಯಾವುದೇ ತೊಂದರೆಯಾಗದಂತೆ ಬ್ಯಾರಿಕೇಡ್​ಗಳನ್ನು ಅಳವಡಿಸುವಂತೆ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಎಂ. ಯೋಗೀಶ್ವರ, ರೈತರಿಗೆ ತಮ್ಮ ಜಮೀನಿಗೆ ಹೋಗಿ- ಬರಲು ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

    ಪ್ಲಾಟ್​ನ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದರು. ನಂತರ ಬಸಾಪುರ ಗ್ರಾಮದ ಹೊರವಲಯದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕರೊನಾ ಸೋಂಕಿತ ಮಹಿಳೆಯ ಸಂಪರ್ಕ ಇದ್ದ ಗುತ್ತಲ ಹಾಗೂ ಭರಡಿ ಗ್ರಾಮದ ಸುಮಾರು 25 ಜನರನ್ನು ಕ್ವಾರಂಟೈನ್​ನಲ್ಲಿಡುವ ಬಗ್ಗೆ ರ್ಚಚಿಸಲಾಯಿತು.

    ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಅಭಿನಂದನಕುಮಾರ ಸಾಹುಕಾರ, ಡಾ. ಮಹೇಶ ಹಾವನೂರ, ಡಾ. ಬಸವರಾಜ ಪಟ್ಟಣಶೆಟ್ಟಿ, ಪಿಎಸ್​ಐ ಶಂಕರಗೌಡ ಪಾಟೀಲ, ಪ.ಪಂ ಮುಖ್ಯಾಧಿಕಾರಿ ಏಸು ಬೆಂಗಳೂರ, ಉಪತಹಸೀಲ್ದಾರ್ ಎಂ.ಡಿ ಕಿಚಡೇರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಗ್ರಾಮಲೆಕ್ಕಿಗ ಫಕ್ಕಿರೇಶ ರ್ಬಾ ಇದ್ದರು.

    ಮನೆ ತೊರೆದ ಕೆಲ ಕುಟುಂಬ: ಕರೊನಾ ಸೋಂಕು ತಗುಲಿದ ಮಹಿಳೆ ತಮ್ಮ ಪ್ರದೇಶದಲ್ಲಿ ಇರುವ ಬಗ್ಗೆ ಗೊತ್ತಗಾದ ತಕ್ಷಣ ಕೆಲ ಕುಟುಂಬಸ್ಥರು ಮನೆ ಖಾಲಿ ಮಾಡಿ ಬೇರೆಡೆ ತೆರಳಿರುವುದನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು.

    ಕಲಾಲರ ಪ್ಲಾಟ್ ಸೀಲ್​ಡೌನ್ ಮಾಡಿದ ವಿಷಯ ತಿಳಿದ ಜನರು ಆತಂಕಕ್ಕೆ ಒಳಗಾಗಿದ್ದು, ಪಟ್ಟಣದಲ್ಲಿ ಶನಿವಾರ ಜನಜಂಗುಳಿ ಕಡಿಮೆ ಯಾಗಿತ್ತು. ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಕಲಾಲರ ಪ್ಲಾಟ್​ನ ಮನೆಗಳಲ್ಲಿನ ಸಣ್ಣ ಮಕ್ಕಳು, ವೃದ್ಧರ ಬಗ್ಗೆ ಆತಂಕ ಪ್ರಾರಂಭವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts