More

    3ನೇ ಅಲೆಗೆ ಸಾರ್ವಜನಿಕರಿಂದಲೇ ಆಹ್ವಾನ, ಕರೊನಾ ನಿಯಮ ಉಲ್ಲಂಘನೆ ಅವ್ಯಾಹತ, ಸದ್ದಿಲ್ಲದೆ ಏರುತ್ತಿದೆ ಮರಣ ಪ್ರಮಾಣ

    ಬೆಂಗಳೂರು ಗ್ರಾಮಾಂತರ: ಕರೊನಾ 2ನೇ ಅಲೆ ಹತೋಟಿಗೆ ಬಂದಂತೆ ಕಾಣುತ್ತಿದ್ದರೂ, ಲಾಕ್‌ಡೌನ್ ತೆರವು ಬಳಿಕ ಜಿಲ್ಲೆಯಲ್ಲಿ ಕರೊನಾ ನಿಯಮ ಸಂಪೂರ್ಣ ಉಲ್ಲಂಘನೆಯಾಗುತ್ತಿದೆ. ಇದರಿಂದಾಗಿ ಮತ್ತೆ ಕರೊನಾ ಸೋಂಕಿತ ಪ್ರಮಾಣ ಏರುಗತಿಯತ್ತ ಹೆಜ್ಜೆಹಾಕುತ್ತಿದೆ. ಇದರೊಂದಿಗೆ ಸಾವಿನ ಪ್ರಮಾಣವೂ ಸದ್ದಿಲ್ಲದೆ ಏರುತ್ತಿದೆ. ಕರೊನಾ ನಿಯಮ ಉಲ್ಲಂಘನೆ ಮೂಲಕ ಮೂರನೇ ಅಲೆಯನ್ನು ಸಾರ್ವಜನಿಕರೇ ಆಹ್ವಾನಿಸುತ್ತಿದ್ದಾರೆಯೇ ಎಂಬ ಜಿಜ್ಞಾಸೆ ವ್ಯಕ್ತವಾಗಿದೆ.

    ಜುಲೈ ಮೊದಲ ವಾರದಲ್ಲಿ 59,699 ಪಾಸಿಟಿವ್ ಪ್ರಕರಣಗಳಿದ್ದ ಸಂಖ್ಯೆ ಜು.26ರಷ್ಟೊತ್ತಿಗೆ 60,789ಕ್ಕೆ ಏರಿದೆ. ಅದೇ ರೀತಿ 815 ಸಾವಿನ ಪ್ರಕರಣಗಳಿದ್ದು, ತಿಂಗಳಾಂತ್ಯಕ್ಕೆ 847ಕ್ಕೆ ಏರಿದೆ, ಅಂದರೆ ತಿಂಗಳಲ್ಲೇ 32 ಮಂದಿ ಕರೊನಾಗೆ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪುಗೂಡುತ್ತಿರುವುದು ಶುಭಸಮಾರಂಭಗಳ ನೆಪದಲ್ಲಿ ಗುಂಪು ಸೇರುವುದು, ಅರೆಬರೆ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಕಡೆಗಣನೆ ಕಂಡುಬರುತ್ತಿದ್ದು, ಕರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಮೊದಲೇ 3ನೇ ಅಲೆಗೆ ಸಾರ್ವಜನಿಕರೇ ದಾರಿ ಮಾಡುತ್ತಿದ್ದಾರೆ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ.

    ತೆರೆಮರೆಗೆ ಸರಿದ ದಂಡ ಪ್ರಯೋಗ: ಮಾಸ್ಕ್ ಧರಿಸದವರಿಗೆ ದಂಡ ಪ್ರಯೋಗಿಸುತ್ತಿದ್ದ ಜಿಲ್ಲಾಡಳಿತ, ಲಾಕ್‌ಡೌನ್ ತೆರವು ಬಳಿಕ ಅದನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಇದರಿಂದ ಸಾರ್ವಜನಿಕರು ದಂಡದ ಭಯವಿಲ್ಲದೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಹೋಟೆಲ್ ಹಾಗೂ ಇನ್ನಿತರ ಆಹಾರ ಪದಾರ್ಥ ಸೇವಿಸುವ ಸ್ಥಳಗಳಲ್ಲಿ ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ಇದ್ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ. ಇನ್ನು ಪ್ರವಾಸಿ ತಾಣಗಳಲ್ಲಿ ಜನ ಮುಗಿಬೀಳುತ್ತಿದ್ದು, ಕರೊನಾ ನಿಯಮ ಪಾಲಿಸದಿರುವುದು 3ನೇ ಅಲೆಗೆ ಆಹ್ವಾನ ನೀಡುವಂತಾಗಿದೆ.
    ಪ್ರಸ್ತುತ ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನ ಸ್ಥಗಿತವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮತ್ತೆ ಕರೊನಾ ಸೋಂಕು ಹರಡುತ್ತಿದೆ.

    ಪರೀಕ್ಷೆಯೂ ಸ್ಟಾಪ್: ನಾಲ್ಕೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಹಲವು ಕಡೆಗಳಲ್ಲಿ ರ‌್ಯಾಪಿಡ್ ಟೆಸ್ಟ್ ಮೂಲಕ ಜಿಲ್ಲಾಡಳಿತ ಸೋಂಕಿತರನ್ನು ತಕ್ಷಣ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು. ಲಾಕ್‌ಡೌನ್ ತೆರವು ಬಳಿಕ ಇದೆಲ್ಲಕ್ಕೂ ಬ್ರೇಕ್ ಬಿದ್ದಿದೆ.

    ತಿಂಗಳ ಕಾಲ ಹಮ್ಮಿಕೊಂಡಿದ್ದ ವೈದ್ಯರ ನಡಿಗೆ ಹಳ್ಳಿ ಕಡೆಗೆ ಅಭಿಯಾನ ಪೂರ್ಣಗೊಂಡಿದೆ. ಪ್ರಸ್ತುತ ಅಭಿಯಾನ ಸ್ಥಗಿತವಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಹತೋಟಿಗೆ ಬಂದಿದೆ, 3ನೇ ಅಲೆ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿನ ನಿಯಂತ್ರಣಕ್ಕೆ ಸಹಕರಿಸಬೇಕು.
    ಡಾ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

    846 ಮಂದಿ ಸಾವು: ಜಿಲ್ಲೆಯಲ್ಲಿ ಪ್ರಸ್ತುತ 60,789 ಸೋಂಕಿತ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 1,976ಬೇರೆ ಜಿಲ್ಲೆ ಹಾಗೂ ಹೊರರಾಜ್ಯದ ಪ್ರಕರಣಗಳಾಗಿವೆ. 58,813 ಪ್ರಕರಣ ಜಿಲ್ಲೆಯ ನಿವಾಸಿಗಳದ್ದಾಗಿದೆ, 59,383 ಸೋಂಕಿತರು ಗುಣಮುಖರಾಗಿದ್ದಾರೆ. 559 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದುವರೆಗೆ 847 ಮಂದಿ ಕರೊನಾಗೆ ಬಲಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts