More

    ಹೊರರಾಜ್ಯದಿಂದ ತುಮಕೂರು ಜಿಲ್ಲೆಗೆ 289 ಜನ ವಾಪಸ್

    ತುಮಕೂರು: ಕರೊನಾ ಲಾಕ್‌ಡೌನ್ ಜಾರಿಯಾದಾಗಿನಿಂದ ದೇಶದ ವಿವಿಧ ರಾಜ್ಯಗಳಲ್ಲೇ ಉಳಿದುಹೋಗಿದ್ದ ಮೂಲತಃ ತುಮಕೂರಿನ ನಿವಾಸಿಗಳು ತವರಿಗೆ ಹಿಂದಿರುಗುತ್ತಿದ್ದು, ಈವರೆಗೆ 289 ಜನ ಮರಳಿದ್ದಾರೆ.

    ಮೇ 1 ರಿಂದ ಹೊರರಾಜ್ಯಗಳಿಂದ ತುಮಕೂರು ನಗರಕ್ಕೆ ಬರುವ ಪ್ರಕ್ರಿಯೆ ಆರಂಭವಾಗಿದ್ದು, ಅಂದಿನಿಂದ ಮೇ 14ರವರೆಗೆ 289 ಜನರು ಹಿಂತಿರುಗಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ವಿವಿಧ ಕಾರಣಗಳಿಂದ ಗುಜರಾತ್, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ತೆರಳಿದ್ದು, ಲಾಕ್‌ಡೌನ್ ಆದಾಗಿನಿಂದಲೂ ಅಲ್ಲೇ ಉಳಿದುಕೊಂಡಿದ್ದರು.

    ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ತುಮಕೂರು ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದ್ದು, ಈವರೆಗೆ ಹೊರ ಜಿಲ್ಲೆಯಿಂದ 2711 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ, ಬಂದಿರುವ ಎಲ್ಲರನ್ನ ಪ್ರತ್ಯೇಕವಾಗಿ ವಸತಿ ಶಾಲೆ, ಶಾಲೆಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಿ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬರುವವರಿಗೆ ಪಾವಗಡದಲ್ಲಿ ತಪಾಸಣಾ ಕೇಂದ್ರ ಮಾಡಿದ್ದು, ಮಧುಗಿರಿಯಲ್ಲಿ ಸ್ವೀಕರಣಾ ಕೇಂದ್ರ ತೆರೆಯಲಾಗಿದೆ. ಅದೇ ರೀತಿ ಉತ್ತರ ಕರ್ನಾಟಕದಿಂದ ಬರುವವರಿಗೆ ಶಿರಾದಲ್ಲಿ ಹಾಗೂ ಹೊರ ರಾಜ್ಯಗಳಿಂದ ಬೆಂಗಳೂರು ಕಡೆಯಿಂದ ಬರುವವರಿಗೆ ತುಮಕೂರು ನಗರದ ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ ಎಂದು ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

    ತುಮಕೂರು ನಗರಕ್ಕೆ 2 ಕಡೆ ಪ್ರವೇಶ ದ್ವಾರಗಳನ್ನು ಕಲ್ಪಿಸಿದ್ದು, ಇಲ್ಲಿ ಆರೋಗ್ಯ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಿಬ್ಬಂದಿ ವಾಹನ, ವ್ಯಕ್ತಿಗಳ ತಪಾಸಣೆ ನಡೆಸಿ ತುಮಕೂರು ನಗರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಯಾರೂ ಕಣ್ತಪ್ಪಿಸಿ ಒಳಪ್ರವೇಶಿಸದಂತೆ ಕ್ರಮವಹಿಸಲಾಗಿದೆ. ಜಿಲ್ಲೆಗೆ ಹೊರರಾಜ್ಯಗಳಿಂದ ಕೆಲವರು ಅನುಮತಿ ಪಡೆದು ಬರುತ್ತಿದ್ದರೆ, ಕೆಲವರು ಅನುಮತಿಯಿಲ್ಲದೆ ಬರುತ್ತಿದ್ದಾರೆ. ಆದ್ದರಿಂದ ಯಾರೇ ಬಂದರೂ ಅಂತಹವರ ಮಾಹಿತಿಯನ್ನು ತುರ್ತಾಗಿ ಜಿಲ್ಲಾಡಳಿತಕ್ಕೆ ನೀಡುವಂತೆ ಸಾರ್ವಜನಿಕರಲ್ಲಿ ಡಿಸಿ ಮನವಿ ಮಾಡಿದ್ದಾರೆ.

    ಪ್ರತಿ ದಿನ 2 ಗ್ರಾಂ ಸ್ಪಿರುಲಿನಾ ಮಾತ್ರೆ ಸೇವಿಸಲು ಸಲಹೆ: ಕರೊನಾ ಸೋಂಕು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕರೊನಾ ಸೋಂಕಿತರು, ಶಂಕಿತರು, ವೈದ್ಯರು, ದಾದಿಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರತಿ ದಿನ 2 ಗ್ರಾಂ ಸ್ಪಿರುಲಿನಾ ಮಾತ್ರೆ ಸೇವಿಸುವಂತೆ ತುಮಕೂರು ಸ್ಪಿರುಲಿನಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಆರ್.ವಿ.ಮಹೇಶ್ ಸಲಹೆ ನೀಡಿದರು. ಸ್ಪಿರುಲಿನಾ ಫೌಂಡೇಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ 350 ಚಿಕ್ಕಿ ಪ್ಯಾಕೆಟ್ ಹಾಗೂ 150 ಬಾಕ್ಸ್ ಸ್ಪಿರುಲಿನಾ ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಅವರು, ಸ್ಪಿರುಲಿನಾ ಒಂದು ಸೂಕ್ಷ್ಮಾಣು ಜೀವಿಯಾಗಿದೆ. ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು ಬೇರೆಲ್ಲಾ ಆಹಾರಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೀರಲ್ಪಟ್ಟು, ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಯಾವುದೇ ವೈರಾಣು ಸೋಂಕನ್ನು ಪ್ರತಿರೋಧಿಸುವಲ್ಲಿ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts