More

    28ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ

    ಇಂಡಿ: ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಇಂಡಿ ತಾಲೂಕಿಗೆ ನೀರಾವರಿ ಯೋಜನೆಗಳ ಅವಶ್ಯವಿದ್ದು ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಮೂಲಕ ಇಂಡಿ ಹಾಗೂ ನಾಗಠಾಣ ಕ್ಷೇತ್ರಗಳ 28 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

    ಸೋಮವಾರ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಹೊರ್ತಿ-ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಕಾರ್ಯನಿರ್ವಹಿಸುವ ಕಚೇರಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು ಸಾವಳಸಂಗ ಗುಡ್ಡಕ್ಕೆ ಭೇಟಿ ನೀಡಿದಾಗ ಈ ಎತ್ತರದ ಪ್ರದೇಶಕ್ಕೆ ನೀರು ಹಾಯಿಸಬೇಕು. ಇದರಿಂದ ಈ ಭಾಗದ ರೈತರಿಗೆ ಒಳಿತಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಅವರ ಆಶಯದಂತೆ ರೇವಣಸಿದ್ಧೇಶ್ವರ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತದೆ ಎಂದರು.

    ಇಂಡಿ ಕ್ಷೇತ್ರದ 32 ಹಳ್ಳಿಗಳ 21,500 ಹೆಕ್ಟೇರ್, ನಾಗಠಾಣ ಕ್ಷೇತ್ರದ 10 ಹಳ್ಳಿಗಳ 6,500 ಹೆಕ್ಟೇರ್ ಪ್ರದೇಶ ಈ ಯೋಜನೆಯಿಂದ ನೀರಾವರಿಯಾಗಲಿದೆ. ಇಲ್ಲಿ ಕೆಬಿಜೆಎನ್‌ಎಲ್ ಕಚೇರಿ ತೆರೆಯುವ ಉದ್ದೇಶ ನೀರಾವರಿ ಯಾವ ಹಂತದಲ್ಲಿದೆ ? ಯಾವ ವಿಧದಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ರೈತಾಪಿ ವರ್ಗ ತಿಳಿದುಕೊಳ್ಳಲು ಕಚೇರಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮುರಾರ್ಜಿ ವಸತಿ ಶಾಲೆಯ ಸಮೀಪ 2 ಎಕರೆ ಸರ್ಕಾರದ ಭೂಮಿಯಿರುವುದರಿಂದ ಕೆಬಿಜೆಎನ್‌ಎಲ್ ಕಚೇರಿ ಹಾಗೂ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಆಲಮಟ್ಟಿ ಹಿನ್ನೀರಿನ ಕೃಷ್ಣಾ ನದಿಯ ಮೂಲಕ ಜಲಧಾರೆ ಯೋಜನೆಯಿಂದ ಕುಡಿಯುವ ನೀರಿನ ಶಾಶ್ವತ ಪರಿಹಾರ ಆಗಲಿದೆ ಎಂದರು.

    371(ಜೆ) ಮಾಡುವಾಗ ಜಿಲ್ಲೆಯ ರಾಜಕಾರಣಿಗಳು ಇಚ್ಛಾಶಕ್ತಿಯಿಂದ ಧ್ವನಿಗೂಡಿಸಿದ್ದರೆ ಜಿಲ್ಲೆಯೂ ಸಹ ಹೈದರಾಬಾದ್ ಕರ್ನಾಟಕದಲ್ಲಿ ಸೇರಿ ಇಲ್ಲಿನವರಿಗೆ ಉದ್ಯೋಗ, ಶಿಕ್ಷಣ, ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಾವು ಕಲ್ಯಾಣ ಕರ್ನಾಟಕಕ್ಕೆ ಸೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಕಾಯಂ ಬರಗಾಲಕ್ಕೆ ತುತ್ತಾಗುತ್ತಿರುವ ನಮ್ಮ ಪ್ರದೇಶಕ್ಕೆ ನೀರು ಹರಿಸುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ. ದಕ್ಷಿಣ ಭಾಗದಲ್ಲಿರುವ ಕಾವೇರಿ ನದಿ, ಉತ್ತರ ಭಾಗದಲ್ಲಿರುವ ಕೃಷ್ಣಾ ನದಿಗೆ ಹೋಲಿಕೆ ಮಾಡಿದರೆ ಕೃಷ್ಣಾ ನದಿಗೆ ಮಲತಾಯಿ ಧೋರಣೆ ಮಾಡಲಾಗಿದೆ ಎಂದರು.

    ಎಂ.ಆರ್. ಪಾಟೀಲ(ಬಳ್ಳೊಳ್ಳಿ) ಪ್ರಾಸ್ತಾವಿಕ ಮಾತನಾಡಿದರು. ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಸಿ.ಎಚ್. ಶ್ರೀನಿವಾಸ, ಅಧೀಕ್ಷಕ ಇಂಜಿನಿಯರ್ ಗೋವಿಂದ ರಾಠೋಡ, ಕಾರ್ಯಪಾಲಕ ಇಂಜಿನಿಯರ್ ಸಂಗಮೇಶ ಮುಂಡಾಸ, ಸಹಾಯಕ ಇಂಜಿನಿಯರ್ ಹಣಮಂತಪ್ಪ ಗುಡಗುಂಟ, ಮನೋಜಕುಮಾರ ಗಡಬಳ್ಳಿ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಬೋಸಗಿ, ಉಪಾಧ್ಯಕ್ಷೆ ಚಂದ್ರಕಲಾ ಮಸಳಿಕೇರಿ, ಎಚ್.ಎನ್. ಶ್ರೀನಿವಾಸ, ಮಹಾದೇವ ಪೂಜಾರಿ, ಬಿ.ಬಿ. ಗುಡ್ಡದ, ಮಲ್ಲು ಬೋಸಗಿ, ಶ್ರೀಮಂತ ಇಂಡಿ, ಸಂಬಾಜಿ ಮಿಸಾಳೆ, ಸುರೇಶಗೌಡ ಪಾಟೀಲ, ಮೈಬೂಬ ಅರಬ, ಗುರಣ್ಣಗೌಡ ಪಾಟೀಲ, ಜಟ್ಟೆಪ್ಪ ರವಳಿ, ಜಾವೀದ ಮೋಮಿನ್, ಪ್ರಶಾಂತ ಕಾಳೆ, ಶೇಖರ ನಾಯಕ, ಎಸ್.ಆರ್. ರುದ್ರವಾಡಿ, ಸದಾಶಿವ ಪ್ಯಾಟಿ, ದಯಾನಂದ ಮಠ ಇತರರಿದ್ದರು. ಜಿ.ಆರ್. ಭೋಸಗಿ ನಿರೂಪಿಸಿದರು. ಪಿ. ಬಮ್ಮಹಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts