More

    24×7 ನೀರು ಪೂರೈಕೆಗೆ ಜ. 15 ಗಡುವು

    ಹಾವೇರಿ: ನಗರಕ್ಕೆ ನಿರಂತರ ನೀರು ಪೂರೈಸುವ(247)ಯೋಜನೆ ಮಂದಗತಿಯಲ್ಲಿ ಸಾಗಿದೆ. ಇದರಿಂದ ಜನತೆಗೆ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ತಕ್ಷಣವೇ ಗುತ್ತಿಗೆದಾರರು, ಇಂಜಿನಿಯರ್​ಗಳು ಕಾರ್ಯಪ್ರವೃತ್ತರಾಗಿ ಜನವರಿ 15ರೊಳಗೆ ಜನತೆಗೆ ನೀರು ಪೂರೈಕೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೂಚಿಸಿದರು.

    ಸ್ಥಳೀಯ ನಗರಸಭೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಗೆ ಪೌರಾಯುಕ್ತರು ಗೈರಾಗಿ ಸಭೆ ನಡೆಯದೇ ಇದ್ದಿದ್ದರಿಂದ ಸಭೆಗೆ ಬಂದಿದ್ದ ನಿರಂತರ ಕುಡಿಯುವ ನೀರು ಯೋಜನೆಯ ಇಂಜಿನಿಯರ್​ಗಳು, ಗುತ್ತಿಗೆದಾರರು ಹಾಗೂ ಸಿಬ್ಬಂದಿಯ ಸಭೆ ನಡೆಸಿ ಯೋಜನೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

    ಯೋಜನೆಯ ಇಂಜಿನಿಯರ್​ಗಳು ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಶೇ. 10ರಷ್ಟು ಬಾಕಿ ಉಳಿದಿದೆ ಎಂಬ ವರದಿ ಕೊಟ್ಟಿದ್ದಾರೆ. ಆದರೆ, ವಾಸ್ತವದಲ್ಲಿ ಅಷ್ಟು ಕೆಲಸವಾಗಿಲ್ಲ. 2014ರಲ್ಲೇ ಯೋಜನೆ ಆರಂಭವಾಗಿದ್ದರೂ ಈವರೆಗೆ ನಗರದ ಯಾವ ಭಾಗದಲ್ಲೂ 247 ನೀರು ಪೂರೈಕೆ ಸಾಧ್ಯವಾಗಿಲ್ಲ. ಹಿಂದಿನಂತೆಯೇ 15 ದಿನಕ್ಕೊಮ್ಮೆ ನೀರು ಕೊಡುತ್ತಿದ್ದೇವೆ. ಹೊಸ ಪೈಪ್​ನಲ್ಲಿ ನೀರು ಪೂರೈಸುತ್ತಿದ್ದೇವೆ ಎಂಬುದನ್ನು ಬಿಟ್ಟರೆ ಬೇರೇನೂ ಪ್ರಗತಿಯಾಗಿಲ್ಲ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಜನತೆಗೆ ನಿರಂತರ ನೀರು ಕೊಡಿಸುವ ಈ ಯೋಜನೆಗೆ ನಗರಸಭೆಯಿಂದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ರಸ್ತೆ ಅಗೆದು ಎಲ್ಲೆಲ್ಲಿ ಪೈಪ್​ಲೈನ್ ಅಳವಡಿಸಬೇಕೋ ಅಲ್ಲಲ್ಲಿ ಸಂಬಂಧಿಸಿದ ಇಲಾಖೆಯಿಂದ ಪರವಾನಗೆ ಕೊಡಿಸುತ್ತೇವೆ. ಯೋಜನೆಯ ಅನುಷ್ಟಾನಕ್ಕೆ ಸಿಬ್ಬಂದಿ ಕೊರತೆಯಿದ್ದು, ಇಲಾಖೆಯ ಅಧಿಕಾರಿಗಳು ಇರುವ ಸಿಬ್ಬಂದಿಯಲ್ಲೇ ಸಮರ್ಪಕ ಕೆಲಸ ತೆಗೆದುಕೊಂಡು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

    ನಿರಂತರ ನೀರು ಯೋಜನೆಯ ಎಇಇ ಜಗದೀಶ ಕೋಳಿಮಠ ಮಾತನಾಡಿ, ಯೋಜನೆಯ ಕಾಮಗಾರಿ 2014ರಲ್ಲಿ ಆರಂಭವಾಗಿ 2017ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಪೂರ್ಣಗೊಂಡಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ದಂಡ ವಿಧಿಸಿ 2021ರ ಫೆಬ್ರವರಿ ಅಂತ್ಯದವರೆಗೆ ಕಾಲಾವಕಾಶ ಕೊಟ್ಟು ಅವಧಿ ವಿಸ್ತರಿಸಲಾಗಿದೆ. ಶೇ. 90ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. 198 ಕಿ.ಮೀ. ಪೈಪ್​ಲೈನ್ ಅಳವಡಿಸುವ ಗುರಿಯಲ್ಲಿ 192 ಕಿ.ಮೀ. ಪೈಪ್​ಲೈನ್ ಅಳವಡಿಸಲಾಗಿದೆ. 16,325 ಮನೆಗಳಲ್ಲಿ 14,477 ಮನೆಗಳಿಗೆ ನಳ ಅಳವಡಿಸಲಾಗಿದೆ. 7,500 ಮನೆಗಳಿಗೆ ನೀರು ಕೊಟ್ಟು ಪರೀಕ್ಷೆ ನಡೆಸಲಾಗಿದೆ. ಆದರೆ, ನಗರದ ಜನತೆಗೆ ಪೂರೈಸಲು ಬೇಕಾಗುವಷ್ಟು ನೀರಿನ ಲಭ್ಯತೆಯಿಲ್ಲ. ತುಂಗಭದ್ರಾ ನದಿಯಿಂದ ನೀರು ತರುವ ಉದ್ದೇಶದಿಂದ ವಾಟರ್ ಬೋರ್ಡ್​ನವರು ಅಳವಡಿಸಿರುವ ಪೈಪ್​ಗಳು ಈಗಾಗಲೇ ಹಾಳಾಗಿವೆ. ಆಗಾಗ ಅಲ್ಲಲ್ಲಿ ಒಡೆದು ಸೋರಿಕೆಯಾಗುತ್ತಿದೆ. ಅಲ್ಲದೆ, ಅನೇಕ ಕಡೆ ಅನಧಿಕೃತವಾಗಿ ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ಹಿನ್ನಡೆಯಾಗುತ್ತಿದೆ ಎಂದರು.

    ನಗರಸಭೆ ಸದಸ್ಯ ಐ.ಯು. ಪಠಾಣ ಮಾತನಾಡಿ, ಈ ಯೋಜನೆಗೆ ಸರ್ಕಾರ 60 ಕೋಟಿ ರೂ. ಕೊಟ್ಟರೂ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಕಂಚಾರಗಟ್ಟಿಯಿಂದ ಬಸಾಪುರವರೆಗೆ ಹೊಸ ಪೈಪ್​ಲೈನ್ ಅಳವಡಿಸಿದರೆ ನಗರಕ್ಕೆ ಬೇಕಾಗುವಷ್ಟು ನೀರು ಲಭ್ಯವಾಗಲಿದೆ. ಮೊದಲು ಆ ಕೆಲಸ ಮಾಡಿ. ಕಾಮಗಾರಿಯ ಕುರಿತು ನಕ್ಷೆ ಕೊಡಿ ಎಂದರು.

    ಗುತ್ತಿಗೆದಾರ ವಿಶ್ವೇರಯ್ಯ ಮಾತನಾಡಿ, ಕೆಲ ತಾಂತ್ರಿಕ ದೋಷದಿಂದ ಕಾಮಗಾರಿ ವಿಳಂಬವಾಗಿದೆ. ಠೇವಣ ಮೊತ್ತ ಪಡೆಯದೇ ಮನೆಗೆ ನಳ ಅಳವಡಿಸಿರುವುದಿಂದ ಕೆಲವರು ಹಾಳು ಮಾಡುತ್ತಿದ್ದಾರೆ. ಪದೇಪದೆ ಹೊಸ ನಳ, ಮೀಟರ್ ಅಳವಡಿಸುವುದು ಕಷ್ಟವಾಗುತ್ತಿದೆ. ವಲಯ 1 ಹಾಗೂ 2ರ ಕಾಮಗಾರಿಯನ್ನು 15ದಿನದೊಳಗೆ ಪೂರ್ಣಗೊಳಿಸಿ ನೀರು ಪೂರೈಸಿದ ಕುರಿತು ಸಹಿ ಸಂಗ್ರಹಿಸಿಕೊಡುತ್ತೇವೆ. ಉಳಿದ ಕಾಮಗಾರಿಯನ್ನು ಜ. 15ರೊಳಗೆ ಪೂರ್ಣಗೊಳಿಸುತ್ತೇವೆ ಎಂದರು.

    ಕಾರ್ಯನಿರ್ವಾಹಕ ಇಂಜಿನಿಯರ್ ದೊಡ್ಡಮನಿ ಮಾತನಾಡಿ, ಹೊಸ ಪೈಪ್​ಲೈನ್ ಬದಲಾಯಿಸುವ ಕೆಲಸ ಮೊದಲು ಆಗಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಾಹೀದಾಬಾನು ಜಮಾದಾರ, ಎಇ ಮೃತ್ಯುಂಜಯ ಹಿರೇಮಠ, ನಗರಸಭೆಯ ಸದಸ್ಯರು, ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts