More

    247 ಕೆರೆ ನಿರ್ಮಾಣಕ್ಕೆ ಜಿಪಂ ಸಂಕಲ್ಪ

    ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ, ಕಂದಾಯ ಭೂಮಿ ಸಂರಕ್ಷಣೆ, ಅಂತರ್ಜಲ ಮಟ್ಟ ವೃದ್ಧಿ, ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ‘ಹೊಸ ಕೆರೆ’ಗಳ ನಿರ್ಮಾಣಕ್ಕೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

    ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಳೆಯ ಕೆರೆಗಳ ಸಮಗ್ರ ಅಭಿವೃದ್ಧಿ ಜತೆಗೆ ಅರಣ್ಯ, ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1ರಿಂದ 5 ಎಕರೆ ವರಗಿನ ಖಾಲಿ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ 247 ಹೊಸ ಕೆರೆ ನಿರ್ಮಾಣದ ಗುರಿ ಹಾಕಿಕೊಂಡಿದೆ. ಈಗಾಗಲೇ ಆಯಾ ಗ್ರಾಪಂನಲ್ಲಿ ಲಭ್ಯವಿರುವ ಜಮೀನು ಆಧಾರದ ಮೇಲೆ ಕೆರೆ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಅಲ್ಲದೆ, ಮಳೆ ನೀರು ಪೋಲಾಗದಂತೆ, ಸರಾಗವಾಗಿ ಹರಿದು ಬರಲು ಅಲ್ಲಲ್ಲಿ ಸಣ್ಣ ಪ್ರಮಾಣದ ಕಾಲುವೆಗಳನ್ನೂ ನಿರ್ಮಿಸಲಾಗುತ್ತಿದೆ.

    ಕ್ರಿಯಾಯೋಜನೆ: 2021-22ನೇ ಸಾಲಿನ ಯೋಜನೆಯಡಿ ಜಿಲ್ಲೆಯ 506 ಗ್ರಾಪಂಗಳಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿ ಅವುಗಳಿಗೆ ಅನುಮೋದನೆ ನೀಡಿದೆ. ಹಳೆಯ ಕೆರೆಗಳ ಸಮಗ್ರ ಅಭಿವೃದ್ಧಿ ಹೊರತುಪಡಿಸಿ ನರೇಗಾ ಯೋಜನೆಯಲ್ಲಿ ಕೈಗೊಳ್ಳುವ ಹೊಸ ಕೆರೆ ನಿರ್ಮಾಣಕ್ಕೆ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂನಲ್ಲಿ ಒಂದೊಂದು ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರ ಗುರಿ ನೀಡಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಅರ್ಧಕ್ಕೇ ಮೊಟಕು: ಈಗಾಗಲೇ ಸರ್ಕಾರವು ಕಳೆದ ಮೂರು ವರ್ಷದ ಅವಧಿಯಲ್ಲಿ ಕೆರೆ ಸಂಜೀವಿನಿ 1 ಮತ್ತು 2 ಯೋಜನೆ ಜಾರಿಗೊಳಿಸಿತ್ತು. ಕೆರೆ ಸಂಜೀವಿನಿ-1ನೇ ಯೋಜನೆಯಡಿ ಜಿಲ್ಲೆಯ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ಹಾಗೂ ಹೂಳೆತ್ತಲು ಪ್ರತಿ ತಾಲೂಕಿಗೆ 50 ಲಕ್ಷ ರೂ.ನಂತೆ 4.75 ಕೋಟಿ ರೂ. ಅನುದಾನ ಬಿಡುಗಡೆ
    ಮಾಡಿತ್ತು. ಆದರೆ, ಮಳೆ ಆರಂಭವಾಗಿದ್ದರಿಂದ ಕೆರೆಗಳ ಪುನಶ್ಚೇತನಗೊಳಿಸುವ ಕಾಮಗಾರಿ ಅರ್ಧದಲ್ಲಿಯೇ ಕೈಬಿಡಲಾಗಿತ್ತು.

    ಕ್ರಿಯಾಯೋಜನೆ ಕೈಬಿಟ್ಟ ಸರ್ಕಾರ: 2019-20ನೇ ಸಾಲಿನ ಜಲಾಮೃತ ಯೋಜನೆಯಡಿ ಪಂಚಾಯತ್‌ರಾಜ್ ಇಲಾಖೆಯಡಿ 145 ಮತ್ತು ಸಣ್ಣ ನೀರಾವರಿ ಇಲಾಖೆಯಡಿ 45 ಕೆರೆ ಸೇರಿ 190 ಕೆರೆಗಳ ಹೂಳೆತ್ತಲು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೋವಿಡ್-19, ಲಾಕ್‌ಡೌನ್, ಆರ್ಥಿಕ ಸಮಸ್ಯೆಯಿಂದಾಗಿ ಪಂಚಾಯತ್‌ರಾಜ್ ಮತ್ತು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಜಲಾಮೃತ ಯೋಜನೆಯಡಿ ಕೆರೆಗಳ ಹೂಳೆತ್ತಲು ಸಲ್ಲಿಸಿದ ಕ್ರಿಯಾ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಅಲ್ಲದೆ, ಎಲ್ಲ ಕೆರೆಗಳ ಸಮಗ್ರ ಅಭಿವೃದ್ಧಿ, ನಿರ್ವಹಣೆ ಜವಾಬ್ದಾರಿಯನ್ನು ಗ್ರಾಪಂಗಳಿಗೆ ವಹಿಸಿದೆ ಎಂದು ಜಿಪಂ ಇಂಜಿನಿಯರ್‌ಗಳು ತಿಳಿಸಿದ್ದಾರೆ.

    ವಿವಿಧೆಡೆ ಇನ್ನೂ ತೆರವಾಗದ ಒತ್ತುವರಿ: ನಾಲ್ಕೈದು ದಶಕಗಳ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಸುಮಾರು 240ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣ ಒತ್ತುವರಿಯಾಗಿವೆ. ಅಲ್ಲದೆ, ಕೆಲ ಕೆರೆಗಳನ್ನು ಸಂಪೂರ್ಣ ಮುಚ್ಚಿಹಾಕಿ ಕಟ್ಟಡ ನಿರ್ಮಿಸಿದ್ದಾರೆ. ಜಿಲ್ಲಾಡಳಿತ, ಜಿಪಂ ಅಧಿಕಾರಿಗಳು ನರೇಗಾ ಯೋಜನೆಯಡಿ ಹೊಸ ಕೆರೆ ನಿರ್ಮಾಣ ಮಾಡುವ ಮುನ್ನ ಹಳೆಯ ಕೆರೆಗಳ ಒತ್ತುವರಿ ತೆರವುಗೊಳಿಸುವ ಕೆಲಸ ಮಾಡಬೇಕು. ಹೊಸ ಕೆರೆ ನಿರ್ಮಾಣ ಮಾಡಿದರೆ ಸ್ಥಳೀಯ ಪ್ರತಿನಿಧಿಗಳು ತಮ್ಮ ಅಧಿಕಾರ ಚಲಾಯಿಸಿ ಕೆರೆ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ರೈತರಾದ ಶ್ರೀನಿವಾಸ ಎಸ್.ದೊಡ್ಡಮನಿ, ರಾಮಕೃಷ್ಣ ಅನಗೋಳಕರ ದೂರಿದ್ದಾರೆ.

    ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಹೊಸ ಕೆರೆ ನಿರ್ಮಾಣದ ಗುರಿ ನೀಡಲಾಗಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯ ಇರುವ ಸರ್ಕಾರಿ ಅರಣ್ಯ, ಕಂದಾಯ ಜಮೀನುಗಳಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ.
    | ಎಚ್.ವಿ. ದರ್ಶನ, ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts