More

    22ನೇ ಸ್ಥಾನಕ್ಕೆ ಜಿಗಿದ ಜಿಲ್ಲೆ

    ಗದಗ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ. 63 ಅಂಕಗಳೊಂದಿಗೆ 22ನೇ ಸ್ಥಾನ ಗಳಿಸಿದೆ. ಕಳೆದ ವರ್ಷ 26ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ವರ್ಷ 4 ಸ್ಥಾನ ಮೇಲಕ್ಕೇರಿದೆ.

    ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯು ಗದಗ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವಿಶೇಷ ಕಾಳಜಿ ತೋರಿ ಟಾಪ್ 10 ಸ್ಥಾನದೊಳಗೆ ತರಲು ಪ್ರಯತ್ನಿಸಬೇಕೆಂಬ ಜನರು ನಿರೀಕ್ಷಿಸಿದ್ದರು. ಆದರೆ, ಪಿಯುಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆಯಿಂದ ಮತ್ತೊಮ್ಮೆ ನಿರಾಸೆಯಾಗಿದೆ.

    ಪ್ರಸಕ್ತ ವರ್ಷದ ಫಲಿತಾಂಶ ಉತ್ತಮವಾಗಿಲ್ಲವಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಸಮಾಧಾನ ತಂದಿದೆ. 2019ರಲ್ಲಿ 26ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯ ಫಲಿತಾಂಶ ಈ ವರ್ಷ 22ನೇ ಸ್ಥಾನಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಬಹುತೇಕ ಖಾಸಗಿ ಅನುದಾನ ರಹಿತ ಕಾಲೇಜ್​ಗಳ ಫಲಿತಾಂಶ ತೀರಾ ಕಳಪೆ ಆಗಿರುವುದರಿಂದ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಅಧಿಕಾರಿಗಳು.

    ಕಳೆದ 5 ವರ್ಷಗಳಲ್ಲಿ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಸುಧಾರಿಸಿಲ್ಲ. ಈ ಕುರಿತು ಇಲಾಖೆ ಪದವಿ ಪೂರ್ವ ಕಾಲೇಜ್​ಗಳ ಆಡಳಿತ ಮಂಡಳಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. 2014ರಲ್ಲಿ ಶೇ. 52.12 ಅಂಕಗಳೊಂದಿಗೆ 24ನೇ ಸ್ಥಾನ, 2015ರಲ್ಲಿ ಶೇ. 51.02 ಅಂಕಗಳೊಂದಿಗೆ 32ನೇ ಸ್ಥಾನ, 2016ರಲ್ಲಿ ಶೇ. 49.28 ಅಂಕಗಳೊಂದಿಗೆ 29ನೇ ಸ್ಥಾನ, 2017ರಲ್ಲಿ ಶೇ. 53.11 ಅಂಕಗಳೊಂದಿಗೆ 23ನೇ ಸ್ಥಾನ ಹಾಗೂ 2018ರಲ್ಲಿ ಶೇ. 66.83 ಅಂಕಗಳೊಂದಿಗೆ 16ನೇ ಸ್ಥಾನ ಗಳಿಸಿತ್ತು. 2019ರಲ್ಲಿ 57.73 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿತ್ತು.

    ಗದಗ-ಬೆಟಗೇರಿ ಅವಳಿ ನಗರದಲ್ಲಿ 8, ರೋಣ ತಾಲೂಕಿನಲ್ಲಿ 4, ನರಗುಂದ, ಶಿರಹಟ್ಟಿ ಹಾಗೂ ಮುಂಡರಗಿಯಲ್ಲಿ ತಲಾ 2ರಂತೆ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆಗಳು ನಡೆದಿದ್ದವು.

    ಕಲಾ ವಿಭಾಗ: 2020ನೇ ಸಾಲಿನ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ 3050 ಬಾಲಕರು, 2591 ಬಾಲಕಿಯರು ಸೇರಿ 5631 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 979 ಬಾಲಕರು, 1350 ಬಾಲಕಿಯರು ಸೇರಿ 2329 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿ 1652 ಬಾಲಕರು, 1979 ಬಾಲಕಿಯರು ಸೇರಿ 3531 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 939 ಬಾಲಕರು, 1418 ಬಾಲಕಿಯರು ಸೇರಿ 2357 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ 1260 ಬಾಲಕರು, 1500 ಬಾಲಕಿಯರು ಸೇರಿ 2760 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 810 ಬಾಲಕರು, 1067 ಬಾಲಕಿಯರು ಸೇರಿ 1877 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ನಗರ ಪ್ರದೇಶ: ನಗರದ ಪ್ರದೇಶದಲ್ಲಿ 4823 ಬಾಲಕರು, 4590 ಬಾಲಕಿಯರು ಸೇರಿ 8413 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2248 ಬಾಲಕರು, 2975 ಬಾಲಕಿಯರು ಸೇರಿ 5223 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ಗ್ರಾಮೀಣ ಪ್ರದೇಶ: ಗ್ರಾಮೀಣ ಪ್ರದೇಶದಲ್ಲಿ 1139 ಬಾಲಕರು, 1370 ಬಾಲಕಿಯರು ಸೇರಿ 2509 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 480 ಬಾಲಕರು, 860 ಬಾಲಕಿಯರು ಸೇರಿ 1340 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶ ಸುಧಾರಿಸಿದೆ. ಕಳೆದ ವರ್ಷ ರಾಜ್ಯ ಮಟ್ಟದ ರ್ಯಾಂಕಿಂಗ್​ನಲ್ಲಿ ಜಿಲ್ಲೆಯು 26ನೇ ಸ್ಥಾನದಲ್ಲಿತ್ತು. ಈ ವರ್ಷ 22ನೇ ಸ್ಥಾನಕ್ಕೆ ಏರಿಕೆಯಾಗಿದೆ.

    | ಎಚ್.ಎಸ್. ರಾಜೂರ, ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಗದಗ

    ವಿದ್ಯಾರ್ಥಿಗಳ ಪಾಲಕರಿಗೆ ಬೇಸರ: ಕಳಪೆ ಸಾಧನೆ ಮಾಡಿದ ಕಾಲೇಜ್​ಗಳ ಪ್ರಾಧ್ಯಾಪಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ತರಬೇತಿ, ಉಪನ್ಯಾಸ, ಕಲಿಕೆಯತ್ತ ಗಮನ, ವಿದ್ಯಾರ್ಥಿಗಳ ಅಧ್ಯಯನ ಪರಿಶೀಲನೆ, ಪರೀಕ್ಷೆ ಎದುರಿಸುವ ರೀತಿ, ಬರಹ ಶುದ್ಧತೆ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವ ತರಬೇತಿ ನೀಡುತ್ತ ವಿದ್ಯಾರ್ಥಿಗಳ ಕಲಿಕೆಯತ್ತ ಗಮನ ಹರಿಸಲಾಗಿತ್ತು. ಆದರೂ ಕಡಿಮೆ ಫಲಿತಾಂಶ ಪಡೆದಿರುವುದು ಪಾಲಕರಿಗೆ ಬೇಸರ ತರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts