More

    21ನೇ ಚಿತ್ರಸಂತೆಗೆ ಭಾನುವಾರ ಚಾಲನೆ

    ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಭಾನುವಾರ ಕುಮಾರಕೃಪ ರಸ್ತೆಯಲ್ಲಿ ಆಯೋಜಿಸಿರುವ 21ನೇ ಚಿತ್ರಸಂತೆಯ ಮೆರುಗು ಹೆಚ್ಚಿಸಲು ದೇಶದ ವಿವಿಧ ಭಾಗಗಳಿಂದ 40 ಸಾವಿರಕ್ಕೂ ಅಧಿಕ ಕಲಾಕೃತಿಗಳು ಆಗಮಿಸಿದ್ದು, ಇಡೀ ದಿನ ಪ್ರದರ್ಶನಗೊಳ್ಳಲಿವೆ.

    ಈ ವರ್ಷದ ಚಿತ್ರಸಂತೆಯನ್ನು ‘ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ’ ಸಮರ್ಪಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಸ್ಥಾಪಿಸಲಾಗಿರುವ ಬಾಹ್ಯಾಕಾಶಯಾನದ ಚಂದ್ರಯಾನ-3ರ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ.

    ಚಿತ್ರಸಂತೆಯಲ್ಲಿ ಈ ಬಾರಿ 22 ರಾಜ್ಯಗಳ 1,500 ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಪ್ರದರ್ಶನಗೊಳ್ಳಲಿರುವ ಸಾವಿರಾರು ಕಲಾಕೃತಿಗಳನ್ನು ಸ್ಥಳದಲ್ಲಿಯೇ ಖರೀದಿಸಲೂ ಅವಕಾಶ ಕಲ್ಪಿಸಲಾಗಿದೆ. ಕಲಾಕೃತಿಗಳ ಪ್ರದರ್ಶನಕ್ಕಾಗಿ 1,500ಮಳಿಗೆಗಳನ್ನು ತೆರೆಯಲಾಗಿದೆ. ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕೆಳಗಿನ ಸ್ಥಳದಲ್ಲಿ ವಿಶೇಷಚೇತನರು, ಹಿರಿಯ ನಾಗರಿಕರಿಗೆ ಕಲಾಕೃತಿಗಳ ಮಾರಾಟ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

    ಚಿತ್ರಸಂತೆ ಹಿನ್ನೆಲೆಯಲ್ಲಿ ಭಾನುವಾರ ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳಿಗೆ ಕುಮಾರ ಕೃಪಾ ರಸ್ತೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಬದಲಿಗೆ ಈ ವಾಹನಗಳು ಬಾಲಬ್ರೂಯಿ ಅತಿಥಿ ಗೃಹ ರಸ್ತೆ ಮೂಲಕ ಚಾಲುಕ್ಯ ವೃತ್ತದ ಮಾರ್ಗವಾಗಿ ಬಂದು ಅರಮನೆ ರಸ್ತೆ ಮಾರ್ಗವಾಗಿ ತೆರಳಲು ಅವಕಾಶ ಕಲ್ಪಿಸಲಾಗಿದೆ.

    ಚಿತ್ರಸಂತೆಗೆ ಸಿಎಂ ಚಾಲನೆ: ಭಾನುವಾರ (ಜ.7)ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಸಂತೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕಲಾ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದು, ಸಚಿವರಾದ ಕೆ.ಎನ್. ರಾಜಣ್ಣ, ಡಾ.ಎಂ.ಸಿ. ಸುಧಾಕರ್, ಶಿವರಾಜ್ ತಂಗಡಗಿ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್.ಟಿ. ಸೋಮಶೇಖರ್, ರಿಜ್ವಾನ್ ಅರ್ಷದ್ ಮೊದಲಾದವರು ಭಾಗವಹಿಸಲಿದ್ದಾರೆ.

    ಫೀಡರ್ ಸೇವೆ: ಚಿತ್ರಸಂತೆ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾನುವಾರ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ 15 ರೂ. ವಿಶೇಷ ದರದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಆನಂದರಾವ್ ಸರ್ಕಲ್, ಶಿವಾನಂದ ಸ್ಟೋರ್ ಮಾರ್ಗವಾಗಿ ವಿಧಾನಸೌಧಕ್ಕೆ. ಹಾಗೂ ಮಂತ್ರಿಮಾಲ್ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ, ಶಿವಾನಂದ ಸ್ಟೋರ್ ಮಾರ್ಗವಾಗಿ ವಿಧಾನಸೌಧಕ್ಕೆ ಮೆಟ್ರೋ ಫೀಡರ್ ಸಾರಿಗೆ ಸೇವೆ ಒದಗಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts