More

    211 ವಾಹನ ಮುಟ್ಟುಗೋಲು

    ಮಂಗಳೂರು: ಲಾಕ್‌ಡೌನ್ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ 211 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಶನಿವಾರ ಮುಟ್ಟುಗೋಲು ಹಾಕಿದ್ದಾರೆ. ಗ್ರಾಮಾಂತರ ಭಾಗದಲ್ಲೂ ಹಲವು ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಯಾವುದೇ ಖಾಸಗಿ ವಾಹನಗಳು ಇಳಿಯುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘಿಸಿ ನಗರದೊಳಗೆ ಹಾಗೂ ಗ್ರಾಮಾಂತರ ಭಾಗದಲ್ಲಿ ವಾಹನಗಳು ಸಂಚಾರ ಮಾಡಿವೆ. ಪೊಲೀಸರು ತಪಾಸಣೆ ಬಿಗುಗೊಳಿಸಿದ್ದು, ನಿಯಮ ಉಲ್ಲಂಘಿಸಿದ ಕಾರು, ಆಟೋ ರಿಕ್ಷಾ, ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮಂಗಳೂರು ನಗರದಲ್ಲಿ ಕ್ಲಾಕ್‌ಟವರ್, ಲಾಲ್‌ಭಾಗ್, ಅಂಬೇಡ್ಕರ್ ವೃತ್ತ ಮೊದಲಾದ ಕಡೆ ಪೊಲೀಸರು ತಪಾಸಣೆ ನಡೆಸಿದರು. ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದರು. ಪೊಲೀಸರು ಅಂತವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಮಧ್ಯಾಹ್ನದ ಬಳಿಕ ರಸ್ತೆಯಲ್ಲಿ ವಾಹನಗಳ ಓಡಾಟ ಕಂಡುಬಂದಿಲ್ಲ. ಬೆಳಗ್ಗೆ 7ರಿಂದ 12 ಗಂಟೆವರೆಗೆ ತರಕಾರಿ ಹಾಗೂ ದಿನಸಿ ಅಂಗಡಿಗಳು ತೆರೆದಿದ್ದು, ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಮೆಡಿಕಲ್ ಸ್ಟೋರ್‌ಗಳಲ್ಲೂ ಜನಸಂದಣಿ ಕಂಡುಬಂದಿಲ್ಲ. ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ ಹಾಗೂ ಇತರ ಕಡೆಗಳಲ್ಲಿ ಬೀದಿಬದಿಯಲ್ಲಿ ತರಕಾರಿ, ಹಣ್ಣು ವ್ಯಾಪಾರ ಜೋರಾಗಿ ನಡೆಯಿತು. ಸೂಪರ್, ಹೈಪರ್ ಮಾರುಕಟ್ಟೆಗಳಲ್ಲೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಸೆಂಟ್ರಲ್ ಮಾರುಕಟ್ಟೆ ಸ್ತಬ್ಧವಾಗಿತ್ತು. ಮೀನು ಮಾರಾಟಗಾರರು ಇದ್ದರೂ ಖರೀದಿಗೆ ಗ್ರಾಹಕರು ಇರಲಿಲ್ಲ.

    ಬೋಟ್ ಮೂಲಕ ಬೆಂಗ್ರೆಗೆ ಸಾಮಗ್ರಿ ಸಾಗಾಟ: ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ ಕಾರಣ ಬಂದರ್‌ನಿಂದ ಬೆಂಗ್ರೆಗೆ ಬೋಟ್ ಮೂಲಕ ತರಕಾರಿ ಹಾಗೂ ದಿನಸಿ ಸಾಮಗ್ರಿ ಸಾಗಾಟ ಮಾಡಿದರು. ಬೆಳಗ್ಗೆ ಸ್ಟೇಟ್‌ಬ್ಯಾಂಕ್ ಹಾಗೂ ಬಂದರು ಪ್ರದೇಶಕ್ಕೆ ಆಗಮಿಸಿದ ಬೆಂಗ್ರೆಯ ನಿವಾಸಿಗಳು ಬೇಕಾದ ಅವಶ್ಯ ಸಾಮಗ್ರಿ ಖರೀದಿಸಿ ಒಟ್ಟಾಗಿ ಬೋಟ್‌ನಲ್ಲಿ ಪ್ರಯಾಣ ಮಾಡಿದರು. ಸಣ್ಣ ಬೋಟ್‌ನಲ್ಲಿ ಅಕ್ಕಿ, ಉಪ್ಪು, ಬೇಳೆ, ಸಕ್ಕರೆ ಇತ್ಯಾದಿಗಳನ್ನು ಸಾಗಾಟ ಮಾಡಿದರು. ಬೆಂಗ್ರೆಯಿಂದ ನಗರ ಸಂಪರ್ಕಿಸಲು ಬೋಟ್ ಮಾತ್ರ ಮಧ್ಯಾಹ್ನದ ತನಕ ಲಭ್ಯವಿದೆ. ಬೆಂಗ್ರೆಯ ಜನರಿಗೆ ಈಗ ಬೋಟ್ ವ್ಯವಸ್ಥೆ ಮಾತ್ರ ಇದೆ. ಯಾವುದೇ ಅವಶ್ಯ ಸಾಮಗ್ರಿ ಬೇಕಾದರೆ ನಗರಕ್ಕೆ ಬರಲು ಇದನ್ನೇ ಅವಲಂಬಿಸುವಂತಾಗಿದೆ. ಸ್ಟೇಟ್‌ಬ್ಯಾಂಕ್‌ನಿಂದ ಬಂದರ್ ತನಕ ತರಕಾರಿ, ದಿನಸಿ ಸಾಮಗ್ರಿ ಹೊತ್ತುಕೊಂಡೇ ಬರಬೇಕಾದ ಅನಿವಾರ್ಯತೆ. ಕರೊನಾ ಸೋಂಕು ಆದಷ್ಟು ಬೇಗ ಕಡಿಮೆಯಾಗಿ ಮೊದಲಿನ ಸ್ಥಿತಿಗೆ ಮರಳಲಿ ಎಂದು ಬೆಂಗ್ರೆಯ ನಾಸಿರ್ ಹೇಳಿದರು.

    37 ವಾಹನಗಳ ಜಪ್ತಿ: ಪುತ್ತೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಅನಗತ್ಯವಾದ ಓಡಾಟಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪುತ್ತೂರು ನಗರ ಹಾಗೂ ಸಂಚಾರಿ ಠಾಣೆಯಲ್ಲಿ ಸುಮಾರು 37ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

    ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ದಿನಸಿ, ಮೆಡಿಕಲ್, ಹಾಲು ಮತ್ತಿತರ ಮೂಲ ಅವಶ್ಯಕತೆಗಳ ಖರೀದಿಗೆ ಅವಕಾಶ ಕಲ್ಪಿಸಲಾಯಿತು. ಈ ಅವಕಾಶವನ್ನು ಬಹಳಷ್ಟು ಮಂದಿ ದುರುಪಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಓಡಾಟ ನಿರ್ಬಂಧಿಸಲಾಯಿತು. ಶುಕ್ರವಾರ ಪುತ್ತೂರು ನಗರ ಠಾಣೆಯಲ್ಲಿ 13 ವಾಹನಗಳನ್ನು ಹಾಗೂ ಸಂಚಾರಿ ಠಾಣೆಯಲ್ಲಿ 8 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಗುರುವಾರ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts