More

    2023ರಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ

    ಮೂಡಲಗಿ: ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಮತ್ತು ಸಹೋದರ ರಮೇಶ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತೇವೆ ಎಂದು ಹೇಳುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೇರೆ ಪಕ್ಷಗಳ ಸೇರ್ಪಡೆ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದರು.

    ತಾಲೂಕಿನ ರಾಜಾಪುರ ಗ್ರಾಮದಲ್ಲಿ ಅರಬಾವಿ ಮತ್ತು ಗೋಕಾಕ ಮತಕ್ಷೇತ್ರಗಳ ಹಾಲುಮತ ಕುರುಬ ಸಮುದಾಯದವರು ಗುರುವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾವು ಬಿಜೆಪಿ ಬಿಡುತ್ತವೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿದೆ. ಆದರೆ, ಯಾವುದೇ ಸಂದರ್ಭದಲ್ಲೂ ನಾವಿಬ್ಬರೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಅರಬಾವಿ ಮತಕ್ಷೇತ್ರದಿಂದ ನಾನು ಹಾಗೂ ಗೋಕಾಕ ಮತಕ್ಷೇತ್ರದಿಂದ ರಮೇಶ ಜಾರಕಿಹೊಳಿ ಅವರು ಬಿಜೆಪಿಯಿಂದಲೇ ಸ್ಪರ್ಧಿಸಿ, ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    30 ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಆಶೀರ್ವಾದದಿಂದ ಪ್ರಭಾಶುಗರ್ ಕಾರ್ಖಾನೆ ಚುಕ್ಕಾಣಿ ಹಿಡಿಯುವ ಮೂಲಕ ರಾಜಕೀಯ ಆರಂಭಿಸಿರುವ ನನಗೆ ಅರಬಾವಿ ಮತಕ್ಷೇತ್ರದಲ್ಲಿ 5 ಬಾರಿ ಶಾಸಕನಾಗಿ, 4 ಬಾರಿ ಸಚಿವನಾಗಿ ಮತ್ತು 2 ವರ್ಷಗಳಿಂದ ಕೆಎಂಎಫ್ ಅಧ್ಯಕ್ಷನಾಗಿ ರೈತರ ಸೇವೆ ಮಾಡುವ ಅವಕಾಶವನ್ನು ಕ್ಷೇತ್ರದ ಸಮಸ್ತ ಜನತೆ ಒದಗಿಸಿಕೊಟ್ಟಿದ್ದಾರೆ. ಅಂತಹ ಹೃದಯವಂತ ಜನರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

    ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಸಮುದಾಯಗಳನ್ನು ಕೂಡಿಸುತ್ತಿದ್ದೇವೆಯೇ ಹೊರತು ಯಾವ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಯಾರು ನಮ್ಮ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಿ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೋ ಅವರನ್ನು ಕಲ್ಲೋಳಿ ಮಾರುತೇಶ್ವರ ದೇವರು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
    ಮುಂದಿನ ಜನವರಿ ತಿಂಗಳಲ್ಲಿ ಗೋಕಾಕದಲ್ಲಿ ಉಭಯ ಮತಕ್ಷೇತ್ರಗಳ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಇದು ನಮ್ಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

    ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ ಅವರು ಜಂಟಿಯಾಗಿ ಕನಕ ಜಯಂತಿ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಸಾನ್ನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಡ್ಡೆಪ್ಪ ತೋಳಿನವರ, ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ್, ಭೀಮಶಿ ಮಗದುಮ್ಮ, ಗೋವಿಂದ ಕೊಪ್ಪದ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯ್ಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಅಜ್ಜಪ್ಪ ಗಿರಡ್ಡಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ಡಾ.ಎಸ್.ಎಸ್. ಪಾಟೀಲ, ಡಿ.ಎಂ. ದಳವಾಯಿ, ಲಕ್ಷ್ಮಣ ಮಸಗುಪ್ಪಿ, ಬಸವರಾಜ ಪಂಡ್ರೊಳ್ಳಿ, ಭೈರಪ್ಪ ಯಕ್ಕುಂಡಿ, ರಾಮಚಂದ್ರ ಪಾಟೀಲ, ಶಿವು ಕಮತಿ, ವಾಸಪ್ಪ ಪಂಡ್ರೊಳ್ಳಿ ಇತರರು ಇದ್ದರು.

    ಗಮನ ಸೆಳೆದ ಬೈಕ್ ರ‌್ಯಾಲಿ: ಕನಕ ಜಯಂತಿ ಅಂಗವಾಗಿ ರಾಜಾಪುರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಡಿಗವಾಡ, ಘಟಪ್ರಭಾ, ಅರಬಾವಿ, ಲೋಳಸೂರ, ಗೋಕಾಕ ಮೂಲಕ ಸಂಗನಕೇರಿ, ಕಲ್ಲೋಳಿ, ನಾಗನೂರ, ತುಕ್ಕಾನಟ್ಟಿ ಮಾರ್ಗವಾಗಿ ಕಾರ್ಯಕ್ರಮದ ಸ್ಥಳದವರೆಗೆ ಬೃಹತ್ ಪ್ರಮಾಣದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ನೇತೃತ್ವದಲ್ಲಿ ಬೈಕ್ ರ‌್ಯಾಲಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts