More

    ತತ್ವಪದಗಳ ಅಧ್ಯಯನ ಕೇಂದ್ರ ಸ್ಥಾಪಿಸಿ

    ಯಡ್ರಾಮಿ: ತತ್ವಪದಗಳಲ್ಲಿರುವ ಆಂತರಿಕ ಸಂಸ್ಕೃತಿ ಹುಡುಕುವ ಕೆಲಸ ಆಗಬೇಕಾದರೆ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ಅಥವಾ ಅಧ್ಯಯನ, ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

    ಕಡಕೋಳದಲ್ಲಿ ಶ್ರೀ ಮಡಿವಾಳೇಶ್ವರರ ೨೦೧ನೇ ಜಾತ್ರೋತ್ಸವ ನಿಮಿತ್ತ ಬುಧವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಲೋಕ ಸಂಚಾರಿ ಮಡಿವಾಳಪ್ಪನವರು ಶ್ರೇಷ್ಠ ಕೃಷಿಕರಾಗಿದ್ದರು. ಅವರು ಮಾಡಿದ ಕೃಷಿಯೇ ಇಂದಿಗೂ ಕಡಕೋಳ ಮಠದ ಪರಂಪರೆಯೊಂದಿಗೆ ಬೆಸೆದುಕೊಂಡಿದೆ ಎಂದು ಹೇಳಿದರು.
    ಸಮಾಜದ ಸಾಕಷ್ಟು ಸಮಸ್ಯೆಗಳಿಗೆ ತತ್ವಪದಗಳಲ್ಲಿ ಪರಿಹಾರವಿದೆ. ಶರಣ ಚಳುವಳಿಯಂತೆ, ತತ್ವಪದಗಳದ್ದು ಬಹುದೊಡ್ಡ ಚಳವಳಿಯಾಗಿದೆ. ಹೀಗಾಗಿ ಪುರಾತನ ಪದಗಳ ರಕ್ಷಣೆಗಾಗಿ ತತ್ವಪದ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಶಾಸಕರು ಹಾಗೂ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಚಿಣಮಗೇರಿಯ ಶ್ರೀ ಸಿದ್ಧರಾಮ ಶಿವಾಚಾರ್ಯರು, ಕಡಕೋಳದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಹೋತಪೇಟದ ಶ್ರೀ ಶಿವಲಿಂಗ ಶರಣರು, ಇಟಗಿಯ ಶ್ರೀ ಚಂದ್ರಶೇಖರ ದೇವರು, ಚಬನೂರಿನ ಶ್ರೀ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಹಿರೇಮಠ, ಪ್ರಮುಖರಾದ ಶಿವಲಾಲಸಿಂಗ್, ರಾಜಶೇಖರ ಸಿರಿ, ಚಂದ್ರಶೇಖರ ಪುರಾಣಿಕ, ಕಾಶಿರಾಯಗೌಡ ಪಾಟೀಲ್, ದೇವಿಂದ್ರಪ್ಪಗೌಡ ಪೊಲೀಸ್‌ಪಾಟೀಲ್, ಶರಣಪ್ಪ ಕೋಣಸಿರಸಗಿ, ಹಣಮಂತ್ರಾಯ ಚೌದ್ರಿ, ಬಸನಗೌಡ ಬಿರಾದಾರ, ಸಿದ್ರಾಮಪ್ಪಗೌಡ ಮಾಲಿಪಾಟೀಲ್, ಮಲ್ಹಾರಾವ ಕುಲಕರ್ಣಿ, ಬಸಲಿಂಗಪ್ಪ ಸಾಹು ಅಂಕಲಕೋಟಿ ಇತರರಿದ್ದರು.

    ಅದ್ದೂರಿ ರಥೋತ್ಸವ: ಕಡಕೋಳದಲ್ಲಿ ಗುರುವಾರ ಸಂಜೆ ಅಪಾರ ಭಕ್ತರ ಜೈ ಘೋಷದ ಮಧ್ಯೆ ಸಂಭ್ರಮದಿAದ ರಥೋತ್ಸವ ನಡೆಯಿತು. ಮಹಾಮಠದಲ್ಲಿ ಬೆಳಗ್ಗೆ ಶ್ರೀ ಮಡಿವಾಳೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು. ಸಂಜೆ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ವೈಭವದ ರಥೋತ್ಸವಕ್ಕೆ ಚಾಲನೆ ನೀಡಿದರು. ಅಸಂಖ್ಯಾತ ಭಕ್ತರು ಭಕ್ತಿಯಿಂದ ಥೇರನೆಳೆದು ಕೃತಾರ್ಥರಾದರು. ಶ್ರೀ ಕಡಿಕೋಳ ಮಡಿವಾಳೇಶ್ವರ ಮಹಾರಾಜ್ ಕಿ ಜೈ.. ಮಡಿವಾಳಪ್ಪನವರಿಗೆ ಜೈ ಸೇರಿ ಇನ್ನಿತರ ಘೋಷಣೆಗಳು ಮೊಳಗಿದವು. ಜನರು ಥೇರಿಗೆ ಬಾಳೆ ಹಣ್ಣು, ಉತ್ತತ್ತಿ, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts