More

    ಶೆಟ್ಟಿಕೆರೆಯಂಚಿನಲ್ಲಿ 20 ಸಾವಿರ ಬಿದಿರು ಸಸಿ

    ಲಕ್ಷ್ಮೇಶ್ವರ: ಕೆರೆಯಲ್ಲಿನ ಮಣ್ಣು ಸಾಗಣೆ ಮತ್ತು ಒತ್ತುವರಿ ತಡೆಗಟ್ಟುವುದು, ವಿದೇಶಿ ಬಾನಾಡಿಗಳ ಸ್ವಚ್ಛಂದ ವಿಹಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ತಾಲೂಕಿನ ಶೆಟ್ಟಿಕೆರೆಯಂಚಿನಲ್ಲಿ 20 ಸಾವಿರ ಬಿದಿರು ಸಸಿಗಳನ್ನು ನೆಟ್ಟು ಗಮನ ಸೆಳೆದಿದೆ.

    ಕೆರೆ ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ಧಿಗೆ ಇಲಾಖೆ ಮುಂದಾಗಿದ್ದು, ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಒಟ್ಟು 50 ಹೆಕ್ಟೇರ್ ಪೈಕಿ 20 ಹೆಕ್ಟೇರ್​ನಲ್ಲಿ 20 ಸಾವಿರ ಸಸಿ ನೆಡಲಾಗಿದೆ. ಕೆರೆಯಂಚಿನ ಪ್ರದೇಶದ ಹಸಿರೀಕರಣಕ್ಕೆ ಮುಂದಾಗಿರುವ ಕ್ರಮ ಸ್ವಾಗತಾರ್ಹವಾದರೂ ಸಸಿಗಳ ಸಂರಕ್ಷಣೆಯೇ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಲಿದೆ.

    ವಿದೇಶಿ ಪಕ್ಷಿಗಳ ತಾಣ: ತಾಲೂಕಿನ ಮಾಗಡಿ ಕೆರೆ ವಿದೇಶಿ ಪಕ್ಷಿಗಳ ತಾಣವಾಗಿದ್ದು ಗದಗ ಜಿಲ್ಲೆಯ ರಂಗನತಿಟ್ಟು ಎಂದೇ ಕರೆಯಲಾಗುತ್ತದೆ. ಆದರೆ ಮಾಗಡಿ ಕೆರೆಗಿಂತಲೂ ದೊಡ್ಡದಾದ ಶೆಟ್ಟಿಕೆರೆಯಲ್ಲೂ ಪ್ರತಿವರ್ಷ ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತಿವೆ. ಅರಣ್ಯ ಅಭಿವೃದ್ಧಿಯಿಂದ ಪಕ್ಷಿಗಳಿಗೂ ಅನುಕೂಲವಾಗಲಿದೆ. ಅಂದಾಜು 234 ಎಕರೆ ವಿಸ್ತೀರ್ಣದ ಕೆರೆ ನಯನ ಮನೋಹರವಾಗಿದೆ. ಸದ್ಯ ನೆಟ್ಟ ಸಾವಿರಾರು ಬಿದಿರು ಸಸಿಗಳು ಬೆಳೆದು ನಿಂತರೆ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುವ ವಾತಾವರಣ ನಿರ್ವಣವಾಗಲಿದೆ.

    ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ 20 ಸಾವಿರ ಬಿದಿರು ಸಸಿ ನೆಡಲಾಗಿದೆ. ಸಸಿಗಳ ಸಂರಕ್ಷಣೆಗಾಗಿ ನಿತ್ಯ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಭಾಗದ ಜನ, ರೈತರು, ಕುರಿಗಾರರೂ ಸಹ ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು. ಸಂರಕ್ಷಣೆಯನ್ನು ಸವಾಲಾಗಿ ಸ್ವೀಕರಿಸಿ 3 ವರ್ಷದಲ್ಲಿ ಬಿದಿರು ಬೆಳೆಸಲಾಗುವುದು. ಸಸಿಗಳಿಗೆ ಹಾನಿ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

    | ಎ.ಎಚ್.ಮುಲ್ಲಾ, ವಲಯ ಅರಣ್ಯಾಧಿಕಾರಿ

    ಮುಖ್ಯವಾಗಿ ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. 140 ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಜತೆಗೆ ಕೆರೆ ಹೂಳೆತ್ತಲು ಈ ಭಾಗದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ವಿಶೇಷ ಅಸಕ್ತಿ ವಹಿಸಿ ಅನುದಾನ ಮಂಜೂರು ಮಾಡಿಸಬೇಕು.

    | ದೀಪಕ ಲಮಾಣಿ, ಜಿಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts