More

    2ಎ ಮೀಸಲಾತಿಗಾಗಿ ಒಗ್ಗಟ್ಟು ಪ್ರದರ್ಶಿಸಿ

    ಘಟಪ್ರಭಾ, ಬೆಳಗಾವಿ: ಪಂಚಮಸಾಲಿ ಸಮುದಾಯ ಸರ್ಕಾರದ ಸೌಲಭ್ಯದಿಂದ ವಂಚಿತರಾಗಲು ಅತಿಯಾದ ವಿನಯವೇ ಕಾರಣ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಸಿಗಬೇಕಾದರೆ ಮೀಸಲಾತಿ ಅವಶ್ಯವಾಗಿ ಬೇಕು. ಮೀಸಲಾತಿ ಇರದ ಕಾರಣ ಮಕ್ಕಳು ಅನೇಕ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ಧ್ವನಿಗೆ ಓಗೊಟ್ಟು ಕೂಡಲೇ 2ಎ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು.

    ನಮ್ಮ ಸಮುದಾಯದ ಯಾವುದೇ ವ್ಯಕ್ತಿ ಯಾವುದೇ ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿರಲಿ, ಆದರೆ, ಪಂಚಮಸಾಲಿ ವಿಷಯ ಬಂದಾಗ ಅವರೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಆದರೆ, ಇನ್ನೂ ಸಹ ನಮಗೆ ಮೀಸಲಾತಿ ಸಿಕ್ಕಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ. ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಹೋರಾಟ ಯಶಸ್ವಿಯಾಗಿದ್ದು, 2ಎ ಮೀಸಲಾತಿ ಸಿಗುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದರು. ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಸರ್ಕಾರ ಕೂಡಲೇ 2ಎ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಮೃತ್ಯುಂಜಯ ವೃತ್ತದಿಂದ ಮಲ್ಲಾಪುರ ಪಿಜಿಯ ಬಸವೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯ ಮೂಲಕ ಶ್ರೀಗಳನ್ನು ಸ್ವಾಗತಿಸಲಾಯಿತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಸಮಾಜದ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಫಿರೋಜಿ, ಶಂಕರ ಗಿಡ್ಡನ್ನವರ, ಆರ್.ಕೆ.ಪಾಟೀಲ, ರೋಹಿಣಿ ಪಾಟೀಲ, ಗಂಗಾಧರ ಬಡಕುಂದ್ರಿ, ಮಡಿವಾಳಪ್ಪ ಮುಚಳಂಬಿ, ಈಶ್ವರ ಮಟಗಾರ, ರಾಮಣ್ಣ ಹುಕ್ಕೇರಿ, ಅರವಿಂದ ಬಡಕುಂದ್ರಿ, ಮಾರುತಿ ಇಂಗಳಗಿ, ಅಪ್ಪಾಜಿ ಹುದ್ದಾರ ಇತರರು ಇದ್ದರು.

    ಗೋಕಾಕದಲ್ಲಿ ಬೃಹತ್ ಸಮಾವೇಶ ನಾಳೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಹಾಗೂ ಗೋಕಾಕ ತಾಲೂಕು ಘಟಕದ ವತಿಯಿಂದ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ನ.13ರಂದು ಮಧ್ಯಾಹ್ನ 3 ಗಂಟೆಗೆ ಲಿಂಗಾಯತ ಪಂಚಮಸಾಲಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಅಂತಿಮ ಹೋರಾಟವನ್ನು ಡಿಸೆಂಬರ್ 12 ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಕೈಗೊಳ್ಳಲಾಗುತ್ತಿದೆ. ಈ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಗೋಕಾಕನಲ್ಲಿ ನ.13 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗೋಕಾಕ ಸಮಾವೇಶ ಸೆಮಿಫೈನಲ್ ಇದ್ದಂತೆ. ಸರ್ಕಾರ ಎಚ್ಚರಗೊಳ್ಳದಿದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಜನ ಪಂಚಮಸಾಲಿಗರನ್ನು ಸೇರಿಸಿ ಫೈನಲ್ ಸಮಾವೇಶ ನಡೆಸಿ ಸರ್ಕಾರಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದರು.
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದಾಗ ನಮ್ಮ ಬೇಡಿಕೆ ಈಡೇರಬಹುದು ಎಂದು ಬಲವಾಗಿ ನಂಬಿದ್ದೆವು. ಅವರು ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಆಶೀರ್ವಾದ ಅವರ ಮೇಲಿದೆ. ಆದರೆ, ಮುಖ್ಯಮಂತ್ರಿಗಳು ಮಾತಿಗೆ ತಪ್ಪುತ್ತಿರುವುದು ಬೇಸರ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಜನ ಸೇರಿ ’ಮೀಸಲಾತಿ ಪಡೆದೇ ಮಡಿವೆವು’ ಎಂಬ ಘೋಷಣೆಯೊಂದಿಗೆ ಅಂತಿಮ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.

    ಎಸ್.ಟಿ , ಎಸ್.ಸಿ ಸೇರಿ ಇತರ ಸಮುದಾಯಕ್ಕೆ ಮೀಸಲಾತಿ ಕೊಟ್ಟಂತೆ ನಮ್ಮ ಸಮಾಜಕ್ಕೂ ಮೀಸಲಾತಿ ಕೊಡಬೇಕು. ಸರ್ಕಾರ ಅದಕ್ಕೆ ತಪ್ಪಿದ್ದರಿಂದಲೇ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ
    ಹೋರಾಟಗಳನ್ನು ಸಂಘಟಿಸುತ್ತಿದ್ದೇವೆ. ಹೋರಾಟಗಳ ಮುಖಾಂತರ ಸಮು ದಾಯ ಜಾಗತಿ ಮೂಡಿದ್ದು, ಸಮಾಜಕ್ಕೆ 2ಎ ಮೀಸಲಾತಿ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು. ಗೋಕಾಕ ನಗರದಲ್ಲಿ ಜರುಗಲಿರುವ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ಈರಣ್ಣಕಡಾಡಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದು, ಸಮಾವೇಶದಲ್ಲಿ 25 ಸಾವಿರ ಜನ ಸೇರಲ್ಲಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.

    ನನ್ನ ಗಮನಕ್ಕೆ ಇಲ್ಲ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸತೀಶ ಜಾರಕಿಹೊಳಿ ಹೇಳಿಕೆಗೆ ಗೋಕಾಕಗೆ ಬಂದು ಉತ್ತರ ನೀಡುತ್ತೇನೆ ಎಂದಿದ್ದಾರೆ. ಯತ್ನಾಳ್ ಅವರು ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸಲು ಬರುತ್ತಿದ್ದಾರೋ ಅಥವಾ ಸತೀಶ ಜಾರಕಿಹೊಳಿ ಅವರಿಗೆ ಉತ್ತರ ನೀಡಲು ಬಂದಿದ್ದಾರೋ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಯತ್ನಾಳ್ ಅವರು ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ಸತೀಶ ಅವರು ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಹೇಳಿಕೆ ಹಿಂದೆ ಪಡೆದಿದ್ದಾರೆ. ಹಾಗಾಗಿ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.

    ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರಾದ ಎಂ.ಸಿ ಮಾಸ್ತಿಹೊಳಿ, ಡಾ. ರಮೇಶ ಪಟಗುಂಡಿ, ಸೋಮಶೇಖರ್ ಮಗದುಮ್ಮ, ಶಿವಲಿಂಗಪ್ಪ ಸವದಿ, ಶಂಕರ ಗಿಡನ್ನವರ, ಬಸವರಾಜ ಹುಳ್ಳೇರ, ಆನಂದ ಮೂಡಲಗಿ, ಈಶ್ವರ ಬಾಗೋಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts