More

    ಹಿಟಾಚಿ ದುರಸ್ತಿಗೆ 19.5 ಲಕ್ಷ ರೂ. !

    ಉಡುಪಿ: ಅಲೆವೂರು ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿರುವ ಹಿಟಾಚಿ ವಾಹನ ಹಾಳಾಗಿದ್ದು, ಬಿಡಿಭಾಗ ದುರಸ್ತಿಗೆ 19.5 ಲಕ್ಷ ರೂ. ನಗರಸಭಾ ನಿಧಿಯಿಂದ ಪಾವತಿಸಲು ಮಂಗಳವಾರ ಉಡುಪಿ ನಗರಸಭಾ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಕೋರಿ ಮಂಡಿಸಿದ ಅಂದಾಜು ಪಟ್ಟಿ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯ ಕೊಡವೂರು, ನಗರಸಭೆಯ ವಾಹನಗಳು ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಉತ್ತರಿಸಿದ ಪರಿಸರ ಇಂಜಿನಿಯರ್ ಸ್ನೇಹಾ, 69 ವಾಹನಗಳನ್ನು ಹೊಂದಿದ್ದು, ಕಸ ಸಂಗ್ರಹಿಸುವ 29 ವಾಹನಗಳನ್ನು ಸ್ವಸಹಾಯ ಸಂಘದವರು ನಿರ್ವಹಿಸುತ್ತಿದ್ದಾರೆ. ಉಳಿದವುಗಳನ್ನು ನಗರಸಭೆ ನಿರ್ವಹಿಸುತ್ತಿದೆ. 2014ರಲ್ಲಿ ಖರೀದಿಸಿದ ಹಿಟಾಚಿ ವಾಹನ ಹಾಳಾಗಿದ್ದು, ದುರಸ್ತಿಗೆ 16.5 ಲಕ್ಷ ರೂ. ಹಾಗೂ 2016ರಲ್ಲಿ ಖರೀದಿಸಿದ ಹಿಟಾಚಿ ದುರಸ್ತಿಗೆ 19.5 ಲಕ್ಷ ರೂ. ವೆಚ್ಚ ತಗಲುವ ಬಗ್ಗೆ ಅಂದಾಜು ಪಟ್ಟಿ ನೀಡಿದ್ದಾರೆ ಎಂದರು.

    ಪ್ರತಿಕ್ರಿಯಿಸಿದ ಸದಸ್ಯ ವಿಜಯ ಕೊಡವೂರು, ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಬಂದರೂ ತಿಂಗಳುಗಟ್ಟಲೆ ವಾಹನ ಮೂಲೆ ಸೇರುತ್ತದೆ. 4 ವರ್ಷ ಹಿಂದಿನ ಹಿಟಾಚಿಗೆ ಈಗಾಗಲೇ ನಿರ್ವಹಣೆಗೆ 6 ಲಕ್ಷ ರೂ. ವೆಚ್ಚ ಮಾಡಿದ್ದು, ಹೊಸ ವಾಹನ ಬೆಲೆ 35 ಲಕ್ಷ ರೂ. ಆಗಿದೆ. ಈಗ ಮತ್ತೆ 19 ಲಕ್ಷ ಕೇಳುತ್ತಿದ್ದಾರೆ. ಇವರು ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನಿರ್ವಹಣೆ ವಿಧಾನವೇ ಸರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ, ಸ್ಥಳೀಯ ಮಟ್ಟದಲ್ಲೇ ದುರಸ್ತಿಯಾಗುವ ವಾಹನಗಳನ್ನು ಖರೀದಿಸಬೇಕು. ಇದು ಸಾಧ್ಯವಾಗದಿದ್ದರೆ ಹೊರಗುತ್ತಿಗೆಯಲ್ಲಿ ವಾಹನ ಪಡೆದು ಸೇವೆಗೆ ಬಳಸಿಕೊಳ್ಳಬಹುದು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಪ್ರಾಣಿಹಿಂಸೆ ಪ್ರತಿಬಂಧಕ ಕಾಯ್ದೆ ಜಾರಿಯಾಗುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿರುವ ಗೋಮಾಳ ಗೋವುಗಳಿಗೆ ಮೀಸಲಿಡಬೇಕು. ಬೇಲಿ ಹಾಕಿ ಬೋರ್ಡ್ ಅಳವಡಿಸಬೇಕು ಎಂದು ವಿಜಯ ಕೊಡವೂರು ಆಗ್ರಹಿಸಿದರು.

    ಸದಸ್ಯ ಗಿರೀಶ್ ಅಂಚನ್ ಮಾತನಾಡಿ, ಬಜೆ ಡ್ಯಾಂನಲ್ಲಿ ಸಾಕಷ್ಟು ನೀರು ಇದೆ. ಆದರೆ ರೆನ್ ಮೂಲಕ ನೀಡುತ್ತಿರುವ ನೀರು ಕೂಡ ಸರಿಯಾಗಿ ತಲುಪುತ್ತಿಲ್ಲ. ಡಿಸೆಂಬರ್‌ನಲ್ಲೇ ಸಮಸ್ಯೆ ಈ ರೀತಿಯಾದರೆ ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷೆ, ಡಿ. 31ಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಶೇಷ ಸಭೆ ನಡೆಸಲಾಗುವುದು ಎಂದರು.

    ಶಾಸಕ ರಘುಪತಿ ಭಟ್ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ವಾರಾಹಿ ನೀರು ಸರಬರಾಜು ಯೋಜನೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ವಾರ್ಡ್ ಪ್ರಕಾರ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಸ್ಥಾಯಿ ಸಮಿತಿ ಸದಸ್ಯರು ಪೈಪ್ ಹಾಗೂ ಮೀಟರ್ ಗುಣಮಟ್ಟವನ್ನು ತಪಾಸಣೆ ಮಾಡಬೇಕು. ಟೆಂಡರ್ ಪ್ರಕಾರ ಇದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.
    ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಪೈಪ್ ಅಳವಡಿಸಲು 52 ಲಕ್ಷ ರೂ. ನಿಖರ ಠೇವಣಿ ಇಡುವಂತೆ ಕೊಂಕಣ ರೈಲ್ವೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಕುಡ್ಸೆಂಪ್ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ನಗರಸಭೆಯಿಂದ ರೈಲ್ವೆ ಇಲಾಖೆಗೆ ಪತ್ರ ಬರೆಯುವಂತೆ ಶಾಸಕ ಭಟ್ ಸೂಚನೆ ನೀಡಿದರು.

    ಇ- ಖಾತೆ ಸಿಗದ ಬಗ್ಗೆ ಗಮನ ಸೆಳೆದ ಸದಸ್ಯ ಪ್ರಭಾಕರ ಪೂಜಾರಿ, ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಕೋರಿದರು. ಪ್ರತಿದಿನ 3 ರಿಂದ 5.30ರವರೆಗೆ ಸಾರ್ವಜನಿಕರ ಭೇಟಿಗೆ ಕಡ್ಡಾಯವಾಗಿ ಕಚೇರಿಯಲ್ಲಿರುವಂತೆ ಅಧ್ಯಕ್ಷೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts