More

    18 ಜನರಿಗೆ ಕೆಎಫ್​ಡಿ ಸೋಂಕು!

    ತೀರ್ಥಹಳ್ಳಿ: ತಾಲೂಕಿನ ಬೆಜ್ಜವಳ್ಳಿ ಗ್ರಾಪಂ ವ್ಯಾಪ್ತಿಯ ಅಪ್ಪು ಎಂಬುವವರಿಗೆ ಕೆಎಫ್​ಡಿ ಸೋಂಕು ತಗುಲಿರುವುದು ಗುರುವಾರ ಧೃಡಪಟ್ಟಿದೆ. ಇದರಿಂದ ತಾಲೂಕಿನಲ್ಲಿ ಈ ವರ್ಷ 18 ಜನರಿಗೆ ಈ ರೋಗ ತಗುಲಿರುವುದು ಖಚಿತವಾಗಿದೆ.

    ಬೆಜ್ಜವಳ್ಳಿ ನಿವಾಸಿ ಅಪ್ಪು ಮೀನು ಮಾರಾಟ ಮಾಡುವವರು. ಕಳೆದ ಎರಡು ದಿನಗಳಿಂದ ಜ್ವರದಿಂದ ನರಳುತ್ತಿದ್ದು ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಣಿಪಾಲದಲ್ಲಿ ನಡೆಸಿದ ರಕ್ತದ ತಪಾಸಣೆಯಲ್ಲಿ ಅವರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.

    ಕನ್ನಂಗಿ ಸಮೀಪದ ಕುಡುವಳ್ಳಿಯ ಹೈಸ್ಕೂಲ್ ವಿದ್ಯಾರ್ಥಿ ಭರತ್ ಎಂಬಾತನಿಗೆ ಜ್ವರ ಮತ್ತು ತಲೆ ನೋವು ಮರುಕಳಿಸಿರುವ ಹಿನ್ನೆಲೆಯಲ್ಲಿ ಆತನನ್ನು ಎರಡನೇ ಬಾರಿ ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲ ದಿನಗಳ ಹಿಂದೆ ಈ ಸೋಂಕಿನಿಂದ ನರಳುತ್ತಿದ್ದ ಭರತನನ್ನು ವೆನ್​ಲಾಕ್ ಆಸ್ಪತ್ರೆಗೆ ಸೇರಿಸಿದ್ದು ಗುಣಮುಖನಾಗಿ ಮನೆಗೆ ಮರಳಿದ್ದ. ಇದೀಗ ಬುಧವಾರದಿಂದ ಮತ್ತೆ ಜ್ವರತಲೆನೋವು ಉಲ್ಬಣಿಸಿದ್ದು ಬುಧವಾರ ಆತನನ್ನು ವೆನ್​ಲಾಕ್​ಗೆ ದಾಖಲಿಸಲಾಗಿದೆ.

    ಈವರೆಗೆ ತಾಲೂಕಿನಲ್ಲಿ 18 ಪ್ರಕರಣು ದಾಖಲಾಗಿದ್ದು, ಕಳೆದ ಸಾಲಿನಂತೆ ಈ ವರ್ಷ ಕೂಡ ಮಂಡಗದ್ದೆ ಹೋಬಳಿಯಲ್ಲೇ ಹೆಚ್ಚಿನ ಪ್ರಕರಣಗಳು ಕಂಡುಬಂದಿದೆ. 18ರಲ್ಲಿ 15 ಪ್ರಕರಣಗಳು ಅದೇ ಹೋಬಳಿಯಲ್ಲಿ ಕಂಡು ಬಂದಿವೆ. ಮಂಡಗದ್ದೆ ಗ್ರಾಪಂಯಲ್ಲಿ 8, ಕನ್ನಂಗಿ 5, ಮಾಳೂರು ಮತ್ತು ಬೆಟ್ಟಬಸವಾನಿಯಲ್ಲಿ ತಲಾ 2, ಕೋಣಂದೂರು ಮತ್ತು ಕಟಗಾರಿನಲ್ಲಿ ಒಂದೊಂದು ಪ್ರಕರಣ ಕಂಡು ಬಂದಿದೆ.

    ಬಿಸಿಲಿನ ಝುಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ರೋಗ ಭೀಕರವಾಗಿ ಹರಡುವ ಆತಂಕವಿದೆ. ಅದರಲ್ಲೂ ಮುಂಜಾಗ್ರತಾ ಚುಚ್ಚು ಮದ್ದು ತೆಗೆದುಕೊಂಡವರಲ್ಲೂ ಈ ಬಾರಿ ಕೆಎಫ್​ಡಿ ಸೋಂಕು ಕಾಣಿಸಿಕೊಂಡಿರುವುದು ರೋಗ ವ್ಯಾಪಿಸುವ ಬಗೆಗಿನ ಆತಂಕವಾಗಿದೆ.

    ಈ ರೋಗದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮತ್ತು ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿವಳಿಕೆ ಹಾಗೂ ಮಾಹಿತಿ ನೀಡುವ ಸಲುವಾಗಿ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಪ್ರಿವೆಂಟಿವ್ ಹಾಗೂ ಸೋಶಿಯಲ್ ವಿಭಾಗ, ಕಮ್ಯುನಿಟಿ ಮೆಡಿಸಿನ್ ವಿಭಾಗದವರು ಸೋಂಕು ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಸಂಚರಿಸಿ ನೆರವು ನೀಡುವ ಅಗತ್ಯವಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂಬುದು ಹಿರಿಯ ಅಧಿಕಾರಿಯೊಬ್ಬರ ಸಲಹೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts