More

    17ರಂದು ಬೃಹತ್ ಆರೋಗ್ಯ ತಪಾಸಣೆ ಶಿಬಿರ, ಕೆಎಲ್​ಇ ಹುಬ್ಬಳ್ಳಿ ಕೋಆಪ್ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ

    ಹುಬ್ಬಳ್ಳಿ: ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸ್ಮರಣೆಗಾಗಿ ನಗರದ ಕೋಯಿನ್ ರಸ್ತೆಯಲ್ಲಿರುವ ಕೆಎಲ್​ಇ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆಯಲ್ಲಿ ಜ. 17ರಂದು ಬೆಳಗ್ಗೆ 9 ಗಂಟೆಗೆ ಬಡವರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ತಿಳಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡ ಅವಳಿನಗರ ಹಾಗೂ ಜಿಲ್ಲೆಯ ಎಲ್ಲ ಗ್ರಾಮಗಳ ಜನರು ಶಿಬಿರದ ಪ್ರಯೋಜನ ಪಡೆಯಬಹುದು. ಬೆಳಗಾವಿ ಹಾಗೂ ಹುಬ್ಬಳ್ಳಿ ಆಸ್ಪತ್ರೆಯ ಸುಮಾರು 250ಕ್ಕೂ ಹೆಚ್ಚು ತಜ್ಞ ವೈದ್ಯರು ತಪಾಸಣೆ ನಡೆಸುವರು. ಜಿಲ್ಲೆಯ ವಿವಿಧೆಡೆಯಿಂದ 2 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಪ್ರಚಾರ ವಾಹನ ಹಳ್ಳಿಗಳಲ್ಲಿ ಸಂಚರಿಸುತ್ತಿದೆ ಎಂದರು.

    ಬೆಳಗಾವಿಯ ಕೆಎಲ್​ಇ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ಮಹಾವಿದ್ಯಾಲಯ, ಜಗದ್ಗುರು ಗಂಗಾಧರ ಸ್ವಾಮೀಜಿ ಮೂರುಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಶಿಬಿರ ನಡೆಯಲಿದೆ.

    ವೈದ್ಯಕೀಯ, ಶಸ್ತ್ರ ಚಿಕಿತ್ಸೆ, ಎಲುಬು ಕೀಲು ಮರುಜೋಡಣೆ, ಸ್ತ್ರೀರೋಗ, ಚಿಕ್ಕಮಕ್ಕಳ ಚಿಕಿತ್ಸೆ, ನೇತ್ರ, ಕಿವಿ-ಮೂಗು- ಗಂಟಲು, ಚರ್ಮ, ಶ್ವಾಸ, ಹೃದಯ, ನರ, ಕ್ಯಾನ್ಸರ್, ಗ್ಯಾಸ್ಟ್ರೋ, ಯೂರಾಲಜಿ ಮುಂತಾದ ಕಾಯಿಲೆಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಲಾಗುತ್ತದೆ ಎಂದರು.

    ಮೂರುಸಾವಿರ ಮಠ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ ಮಾತನಾಡಿ, ಕೋಆಪರೇಟಿವ್ ಆಸ್ಪತ್ರೆಯಲ್ಲಿ ಕೆಎಲ್​ಇ ಸಂಸ್ಥೆಯ ಸಹಕಾರದೊಂದಿಗೆ ಎಲ್ಲ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಡವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಉಪಚಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜ. 22ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ಕೋಆಪರೇಟಿವ್ ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, 100 ವರ್ಷದ ಇತಿಹಾಸ ಹೊಂದಿರುವ ಆಸ್ಪತ್ರೆಯ ಶತಮಾನೋತ್ಸವ ವರ್ಷ ಇದಾಗಿದೆ ಎಂದು ಹೇಳಿದರು.

    ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ, ಡಾ. ಈ.ಎಸ್. ತಾನವಾಡೆ, ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts