More

    17ನೇ ಶತಮಾನದ ಮಣ್ಣಿನ ಮಡಕೆ ಪತ್ತೆ

    ಶಿರಸಿ: 17ನೇ ಶತಮಾನಕ್ಕೆ ಸಂಬಂಧಿಸಿದ ಮಣ್ಣಿನ ಮಡಕೆ, ಪಾತ್ರೆಗಳು ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರ್ಲವಳ್ಳಿ ಗ್ರಾಮದಲ್ಲಿ ಬುಧವಾರ ಪತ್ತೆಯಾಗಿದೆ. ಜೈನರ ಅವಧಿಯಲ್ಲಿ ಇದು ಬಳಕೆ ಆಗಿರಬಹುದು ಎಂದು ಅಂದಾಜಿಸಲಾಗಿದೆ.

    ಇಲ್ಲಿಯ ದೇವಿಕೈ ಮಜರೆಯಲ್ಲಿ ಈ ಕುರುಹುಗಳು ಪತ್ತೆಯಾಗಿವೆ. ಇಲ್ಲಿಯ ಅರಣ್ಯ ಪ್ರದೇಶದಲ್ಲಿ ಇಲಾಖೆ ಗಿಡಗಳನ್ನು ನೆಡುವ ಸಲುವಾಗಿ ಗುಂಡಿಗಳನ್ನು ನಿರ್ವಿುಸುತ್ತಿದೆ. ಗುಂಡಿ ತೋಡುವಾಗ ಪತ್ತೆಯಾಗಿವೆ. ಸನಿಹದಲ್ಲಿಯೇ ಜೀರ್ಣಾವಸ್ಥೆಯಲ್ಲಿರುವ ಸಾವಿರಾರು ವರ್ಷಗಳ ಹಿಂದಿನ ಕಲ್ಲೇಶ್ವರ ದೇವಾಲಯವಿದೆ. ದೇವಾಲಯಕ್ಕೂ ಈ ಮಡಕೆಗಳಿಗೂ ಒಂದಕ್ಕೊಂದು ಕೊಂಡಿ ಇರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯ ಚಿತ್ರ ಇರುವ ಮಡಕೆಗಳು, ಕಿರೀಟ ಹೊತ್ತ 3 ಮಡಕೆಗಳು ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಜಾಗದಲ್ಲಿ ಉತ್ಖನನ ನಡೆಸಿದರೆ ಇನ್ನಷ್ಟು ಸಿಗಬಹುದು ಎಂಬುದು ಸ್ಥಳೀಯರ ಮಾತಾಗಿದೆ.

    ಇತಿಹಾಸ ತಜ್ಞ ಲಕ್ಷ್ಮೀಶ ಸೋಂದಾ, 17ನೇ ಶತಮಾನಕ್ಕೆ ಇವು ಸೇರಿದ್ದಾಗಿರಬಹುದಾಗಿದೆ. ಜೈನ ಸಮುದಾಯದಲ್ಲಿ ಬಂಡಿ ಹಬ್ಬ ಆಚರಣೆ ನಡೆಯುತ್ತದೆ. ಈ ಹಬ್ಬದಲ್ಲಿ ಈ ರೀತಿಯ ಆಕೃತಿಗಳನ್ನು ರಚಿಸಿ ರಾತ್ರಿಯ ವೇಳೆ ಬೆಂಕಿ ಹಾಕಿಕೊಂಡು ನರ್ತಿಸುತ್ತ ಅವುಗಳನ್ನು ಹೊರ ಪ್ರದೇಶದಲ್ಲಿ ಇಡುವ ಸಂಪ್ರದಾಯ ಸ್ಥಳೀಯವಾಗಿ ನಡೆಯುತ್ತಿತ್ತು. ಇತಿಹಾಸ ತಜ್ಞ ಡಾ. ಅ.ಸುಂದರ ಅವರೂ ಜೈನರ ಈ ಸಂಪ್ರದಾಯದ ಬಗ್ಗೆ ಇಟಲಿಯ ಸೆಮಿನಾರ್​ನಲ್ಲಿ ಪ್ರಬಂಧ ಮಂಡನೆ ಮಾಡಿದ್ದರು. ಅವರು ಪ್ರತಿಪಾದಿಸಿದ್ದ ಸಂಗತಿಗಳಿಗೆ ಈ ಅವಶೇಷಗಳ ಹೋಲಿಕೆ ಕಂಡುಬರುತ್ತಿದೆ. ಕೆಲ ಕಲಾಕೃತಿಗಳು ಇತಿಹಾಸ ಪೂರ್ವ ಯುಗದ್ದಾಗಿಯೂ ಕಂಡುಬರುತ್ತಿದೆ. ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕಾಗಿದೆ. ಇಲ್ಲಿ ದೊರೆತ ಕುರುಹುಗಳನ್ನು ಜೋಪಾನ ಮಾಡಬೇಕಾದ ಅಗತ್ಯ ಇದೆ ಎಂದಿದ್ದಾರೆ. ಜಾನ್ಮನೆ ಆರ್​ಎಫ್​ಒ ಪವಿತ್ರ ಸಿ.ಜೆ., ಈ ಕುರುಹುಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts