More

    ಮಾದಪ್ಪನಿಗೆ 15 ಕೋಟಿ ರೂ. ಖೋತಾ!

    ಹನೂರು: ಕಳೆದ 2 ತಿಂಗಳಿನಿಂದ ಕರೊನಾ ಲಾಕ್‌ಡೌನ್ ಜಾರಿ ಪರಿಣಾಮ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಿರುವುದರಿಂದ ಸುಮಾರು 15 ಕೋಟಿ ರೂ. ಆದಾಯ ಕೈತಪ್ಪಿದಂತಾಗಿದೆ.

    ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವ ಮ.ಬೆಟ್ಟದ ಮಾದಪ್ಪನ ಸನ್ನಿಧಿಗೆ ಪ್ರತಿ ತಿಂಗಳು ತಮಿಳುನಾಡು, ಕರ್ನಾಟಕ ಹಾಗೂ ಇನ್ನಿತರ ಕಡೆಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಕಳೆದ 3 ವರ್ಷದಿಂದೀಚೆಗೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಜಾತ್ರಾ ಸಂದರ್ಭದಲ್ಲೂ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುತ್ತಿದ್ದರು. ಇದರಿಂದ ಪ್ರತಿ ವರ್ಷ ಆದಾಯದಲ್ಲಿ ಏರಿಕೆ ಕಂಡಿತ್ತು. ಈ ಪೈಕಿ 2017-18ನೇ ಸಾಲಿನಲ್ಲಿ 60.79 ಕೋಟಿ ರೂ., 2018-19ರಲ್ಲಿ 60.15 ಕೋಟಿ ರೂ. ಹಾಗೂ 2019-20ನೇ ಸಾಲಿನಲ್ಲಿ 73.75 ಕೋಟಿ ರೂ. ಗಳಿಸುವ ಮೂಲಕ ರಾಜ್ಯದಲ್ಲಿ ಆದಾಯ ಗಳಿಸುವ ದೇಗುಲದಲ್ಲಿ ಮಾದಪ್ಪನ ಸನ್ನಿಧಿ 2ನೇ ಸ್ಥಾನವನ್ನು ಪಡೆದುಕೊಂಡಿತ್ತು.

    ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 20ರಿಂದ ಮ.ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಯಿತು. ಇದರಿಂದ ಮ.ಬೆಟ್ಟಕ್ಕೆ ಭಕ್ತರ ಆಗಮನ ಸಂಪೂರ್ಣ ನಿಂತುಹೋಗಿದ್ದು,ಪ್ರಾಧಿಕಾರಕ್ಕೆ ಬರುತ್ತಿದ್ದ ಆದಾಯ ಖೋತಾ ಆಗಿದೆ.

    84 ಕೋಟಿ ರೂ. ಆದಾಯ ನಿರೀಕ್ಷೆಗೆ ಪೆಟ್ಟು: ಈ ವರ್ಷ ಹುಂಡಿ ಹಣ, ವಿವಿಧ ಸೇವಾ ಉತ್ಸವಗಳು, ಕೊಠಡಿ ಬಾಡಿಗೆ, ವಾಹನಗಳ ಶುಲ್ಕ, ಮಳಿಗೆಗಳ ಬಾಡಿಗೆ ಇನ್ನಿತರ ಮೂಲಗಳಿಂದ 84 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ 2 ತಿಂಗಳ ಲಾಕ್‌ಡೌನ್‌ನಿಂದ ಸುಮಾರು 15 ಕೋಟಿ ರೂ. ಆದಾಯ ಶೂನ್ಯವಾಗಿದೆ.

    ತಿಂಗಳ ಆದಾಯ: ಮಾದಪ್ಪನ ಸನ್ನಿಧಿಯ ಹುಂಡಿಗಳಲ್ಲಿ ್ರತಿ ತಿಂಗಳು 1.25 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಹಣ ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ಹುಲಿ, ಬಸವ ಮತ್ತು ರುದ್ರಾಕ್ಷಿ ವಾಹನದ ಸೇವೆ, ಲಾಡು ಪ್ರಸಾದ ಮಾರಾಟ, ವಸತಿಗೃಹ, ದೇವರ ದರ್ಶನ ಶುಲ್ಕ, ವಾಹನ ಶುಲ್ಕ ನ್ನಿತರ ಮೂಲಗಳಿಂದ ಸುಮಾರು 6 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಇದೆಲ್ಲಕ್ಕೂ ಪೆಟ್ಟುಬಿದ್ದಿದೆ.

    ವೇತನ ಪಾವತಿ: ಪ್ರಾಧಿಕಾರದಲ್ಲಿ 200 ಕಾಯಂ ನೌಕರರು ಹಾಗೂ 250 ಜನರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತಿಂಗಳು 1.70 ಕೋಟಿ ರೂ.ಗೂ ಹೆಚ್ಚು ಸಂಬಳ ಅಗತ್ಯವಿದೆ. ಕಳೆದ 2 ತಿಂಗಳು ಸಹ ನೌಕರರಿಗೆ ಸಂಬಳ ಪಾವತಿಸಲಾಗಿದೆ. ಅಲ್ಲದೆ, ವಿದ್ಯುತ್ ಬಿಲ್, ನೀರು ಸರಬರಾಜಿನ ವೆಚ್ಚವನ್ನೂ ಪಾವತಿಸಲಾಗಿದೆ. ಜತೆಗೆ ಪ್ರಾಧಿಕಾರದ ಸಾಮಾನ್ಯ ಖಾತೆಯಿಂದ ಇನ್ನಿತರೆ ಕಾರ್ಯಗಳಿಗೆ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ.

    ಭಕ್ತರ ಪ್ರವೇಶವನ್ನು ನಿಷೇಧಿಸಿರುವ ಪರಿಣಾಮ ಆದಾಯ ಶೂನ್ಯವಾಗಿದೆ. ಈ ವರ್ಷ 84 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. ಈ ಬಾರಿ ಆದಾಯದಲ್ಲಿ ಕೊಂಚ ಏರುಪೇರಾಗುವ ಸಂಭವವಿದೆ. ಆದರೂ ಅಭಿವೃದ್ಧಿ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ.
    ಜಯ ವಿಭವಸ್ವಾಮಿ, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts