More

    ಕೃಷಿ ಮೇಳದಲ್ಲಿ ಮಿಂದೆದ್ದ 15.67 ಲಕ್ಷ ಮಂದಿ: ಅದ್ದೂರಿ ತೆರೆ

    ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ನಾಲ್ಕು ದಿನ ಆಯೋಜಿಸಲಾಗಿದ್ದ ‘ಕೃಷಿ ಮೇಳ’ಕ್ಕೆ ಸೋಮವಾರ ಅದ್ದೂರಿ ತೆರೆಬಿದ್ದಿದೆ. ನಾಲ್ಕ ದಿನಗಳಲ್ಲಿ ಒಟ್ಟು 15.67 ಲಕ್ಷ ಮಂದಿ ಮೇಳಕ್ಕೆ ಭೇಟಿ ನೀಡಿದ್ದಾರೆ.

    ಮೊದಲ ದಿನ 1.31 ಲಕ್ಷ, ಎರಡನೇ ದಿನ 5.48 ಲಕ್ಷ, ಮೂರನೇ ದಿನ 5.10 ಲಕ್ಷ ಹಾಗೂ ನಾಲ್ಕನೇ ದಿನ 3.78 ಲಕ್ಷ ಸೇರಿ ಒಟ್ಟಾರೆ 15.67 ಲಕ್ಷ ಮಂದಿ ಮೇಳಕ್ಕೆ ಭೇಟಿ ಕೊಟ್ಟರು. 5.28 ಕೋಟಿ ರೂ. ವಹಿವಾಟು ನಡೆದಿದೆ. 35 ಸಾವಿರಕ್ಕೂ ಅಧಿಕ ಮಂದಿ ರಿಯಾಯಿತಿ ದರದಲ್ಲಿ ಭೋಜನ ಸೇವಿಸಿದ್ದಾರೆ. ಈ ಬಾರಿ ‘ಆಹಾರ,ಆರೋಗ್ಯ,ಆದಾಯಕ್ಕಾಗಿ ಸಿರಿಧಾನ್ಯಗಳು’ ಘೋಷ ವ್ಯಾಕ್ಯದಡಿ ನಡೆದ ಮೇಳದಲ್ಲಿ 650ಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಈ ಬಾರಿ ಮೇಳದಲ್ಲಿ ಸಿರಿಧಾನ್ಯ ಉತ್ಪನ್ನಗಳಿಗೆ ಆದ್ಯತೆ ನೀಡಲಾಯಿತು. ಕೃಷಿ, ತೋಟಗಾರಿಕೆ, ಜಲಾಯನ ಅಭಿವೃದ್ಧಿ, ಮೀನುಗಾರಿಕೆ, ಪಶುಸಂಗೋಪನೆ, ಮಾರುಕಟ್ಟೆ, ಅರಣ್ಯ ಸೇರಿ ಇತ್ಯಾದಿ ಮಾಹಿತಿಗಳನ್ನು ಒಂದೇ ಸೂರಿನಡಿ ಒದಗಿಸಲಾಯಿತು. ಹೊಸ ತಳಿಗಳು,ಯಂತ್ರೋಪಕರಣಗಳ ಆವಿಷ್ಕಾರ, ಕೃಷಿ ನವೋದ್ಯಮಿಗಳ ನವೀನ ಶೋಧ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು. ರೈತರ ಕೃಷಿ ಸಮಸ್ಯೆಗಳಿಗೆ ಕೃಷಿ ವಿಜ್ಞಾನಿಗಳು,ತಜ್ಞರು, ಪ್ರಾಧ್ಯಾಪಕರು,ಸಂಶೋಧನಾ ವಿದ್ಯಾರ್ಥಿಗಳು ಪರಿಹಾರ ಒದಗಿಸಿದರು.

    ಮೇಳದಲ್ಲಿ ಪ್ರತಿಷ್ಠಾಪಿಸಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳಿಗೆಗಳು ಹೆಚ್ಚು ಗಮನ ಸೆಳೆದವು. ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ನೀರು ನಿರ್ವಹಣಾ ತಂತ್ರಜ್ಞಾನ ಕೇಂದ್ರ, ಜೋಳ, ಮಣ್ಣು, ಜಲಾಶಯನ, ಭತ್ತ, ಸಸ್ಯ ಸಂರಕ್ಷಣೆ, ರೇಷ್ಮೆ, ಎಣ್ಣೆಕಾಳು, ದ್ವಿದಳ ಧಾನ್ಯ, ಕೀಟಶಾಸ, ವಾಣಿಜ್ಯ ಬೆಳೆ, ಕಳೆ ನಿರ್ವಹಣೆ, ಜೈವಿಕ ಗೊಬ್ಬರ, ಜೀಜ ತಾಂತ್ರಿಕತೆ, ಜೈವಿಕ ಇಂಧನ, ಕಬ್ಬು ಪ್ರಾತ್ಯಕ್ಷಿಕ ಕೇಂದ್ರಗಳಿಗೆ ಲಕ್ಷಾಂತರ ಮಂದಿ ಭೇಟಿ ನೀಡಿದರು. ಆಯಾ ಪ್ರಾತ್ಯಕ್ಷಿಕ ಕೇಂದ್ರಗಳಲ್ಲಿ ಬೆಳೆಗಳ ಕುರಿತು ಮಾಹಿತಿ ಲಕ ಹಾಕಲಾಯಿತು. ತಳಿಯ ಹೆಸರು, ಬೆಳೆಯುವ ದಿನಗಳ ಅವಧಿ, ಇಳುವರಿ, ಯಾವ ತಿಂಗಳಲ್ಲಿ ಬೀಜ ಬಿತ್ತನೆ ಮಾಡಬೇಕು, ಹಿಂಗಾರು, ಮುಂಗಾರು ಸಂದರ್ಭದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು, ಹವಾಮಾನ ವೈಪರಿತ್ಯ ಸಮಸ್ಯೆಯಿಂದ ಬೆಳೆ ರಕ್ಷಿಸಿಕೊಳ್ಳುವುದು ಹೇಗೆ, ಕಳೆಯಿಂದ ಬೆಳೆ ರಕ್ಷಿಸಿಕೊಳ್ಳುವ ಬಗ್ಗೆ ತಜ್ಞರು ಮಾಹಿತಿ ನೀಡಿದರು.

    ಇದನ್ನೂ ಓದಿ: ‘ಎಲೆಕ್ಟ್ರಾನಿಕ್ ಸಿಟಿ’ ಇದು ಬೆಂಗಳೂರಿನ ಕಥೆ!

    ಖುಷಿಪಟ್ಟ ರೈತರು:
    ಲಕ್ಷಾಂತರ ಮಂದಿ ರೈತರು ಮತ್ತು ರೈತರೇತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ರೈತ ಜಾತ್ರೆ ಇದಾಗಿತ್ತು. ಮೇಳಕ್ಕೆ ಆಗಮಿಸಿದ್ದ ರೈತರು, ಯುವ ರೈತರು, ಸಾವರ್ಜನಿಕರು ಉಪಯುಕ್ತ ಮಾಹಿತಿ ಪಡೆದು ಖುಷಿಪಟ್ಟರು. ಪ್ರತಿ ನಿತ್ಯ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಶಾಲಾ ಮಕ್ಕಳು ಮೇಳವನ್ನು ನೋಡಿ ಪುಳಕಿತಗೊಂಡರು.ಭೌತಿಕ,ಆನ್‌ಲೈನ್‌ನಲ್ಲಿ ಮೇಳ ಪ್ರಸಾರವಾಯಿತು. ಪ್ರತಿ ನಿತ್ಯ ವಿವಿಧ ಚರ್ಚಾಗೋಷ್ಠಿಗಳು ನಡೆದವು. ಮೇಳ ವೀಕ್ಷಿಸಲು ಬರುವವರಿಗೆ ಪ್ರತಿ ನಿತ್ಯ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ರೈತರನ್ನು ಬೇರೆ ಬೇರೆ ದಿನಗಳಂದು ಮೇಳಕ್ಕೆ ಆಹ್ವಾನಿಸಲಾಯಿತು. ಭೌತಿಕವಾಗಿ ಮೇಳಕ್ಕೆ ಬರಲಾಗದವರು ಆನ್‌ಲೈನ್‌ನಲ್ಲೇ ವೀಕ್ಷಿಸಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ರಾಜ್ಯ ಮಟ್ಟದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಪ್ರಶಸ್ತಿ, ಡಾ.ಎಂ.ಎಚ್. ಮರಿಗೌಡ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಗತಿಪರ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ನೀಡಲಾಯಿತು.

    2 ಸಾವಿರ ಮಂದಿ ಸದ್ಬಳಕೆ:
    ಮೇಳದಲ್ಲಿ ಸ್ಥಾಪಿಸಿರುವ ಸಲಹಾ ಸೇವಾಗಳ ಕೇಂದ್ರವನ್ನು ಎರಡು ಸಾವಿರಕ್ಕೂ ಅಧಿಕ ಮಂದಿ ಸದ್ಬಳಕೆ ಮಾಡಿಕೊಂಡರು. ‘ಬೇಸಾಯಶಾಸ’, ‘ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಶಾಸ’, ‘ತೋಟಗಾರಿಕೆ’, ‘ಅನುವಂಶಿಯತೆ ಮತ್ತು ಸಸ್ಯಗಳಶಾಸ’, ‘ಪರಿಸರ ವಿಜ್ಞಾನ ವಿಭಾಗ’, ‘ಬೆಳೆ ಶರೀರ ಕ್ರಿಯಾಶಾಸ’, ‘ಕೃಷಿ ಕೀಟಶಾಸ’, ‘ಸಸ್ಯ ರೋಗಶಾಸ’, ‘ಜೇನು ಕೃಷಿ’, ‘ರೇಷ್ಮೆ ಕೃಷಿ’, ‘ಪ್ರಾಣಿ ವಿಜ್ಞಾನ ವಿಭಾಗ’, ‘ಆಹಾರ ವಿಜ್ಞಾನ ಮತ್ತು ಮಣ್ಣು’, ‘ಕೃಷಿ ಅರ್ಥಶಾಸ ವಿಭಾಗ’ ಸ್ಟಾಲ್‌ಗಳಿಗೆ ರೈತರು ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದರು. ಸಲಹಾ ಸೇವಾಗಳ ಕೂಟದಲ್ಲಿ ಪ್ರತಿಷ್ಠಾಪಿಸಿರುವ ಒಂದೊಂದು ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲಿ ಕೃಷಿ ವಿಜ್ಞಾನಿಗಳು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು. ಹೆಚ್ಚಿನ ರೈತರು ಸಸ್ಯ ತಂತ್ರಜ್ಞಾನ, ಪ್ರಾಣಿ ವಿಜ್ಞಾನ, ಬೇಸಾಯಶಾಸ, ತೋಟಗಾರಿಕೆ, ಕೃಷಿ ವಿಜ್ಞಾನ ಸಂಬಂಧಿಸಿದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದು ಗಮನಾರ್ಹ.

    ಜಾನುವಾರುಗಳಿಗೂ ಬಂದಿವೆ ಹಾಸಿಗೆಗಳು!
    ಗರ್ಭ ಧರಿಸಿದ ಹಸು, ಎಮ್ಮೆಗಳು ನಿಲ್ಲುವಾಗ, ಮಲಗುವಾಗ ತುಂಬ ಕಷ್ಟಪಡುತ್ತವೆ. ಕಲ್ಲಿನ ಮೇಲೆ ಕಟ್ಟಿದ್ದರೆ ಅಥವಾ ಆ ಕಲ್ಲು ನುಣುಪಾಗಿದರೆ ಜಾನುವಾರುಗಳು ಜಾರಿ ಬೀಳುತ್ತವೆ. ಹೀಗಾಗಿ,ಇದನ್ನು ತಡೆಯಲು ಪಶುಗಳಿಗೂ ಬಂದಿವೆ ಹಾಸಿಗೆಗಳು. ಶಿಡ್ಲಘಟ್ಟ ತಾಲೂಕಿನ ಪಬ್ಲಿಕ್ಸ್ ಆಗ್ರೊ ಮಳಿಗೆಯಲ್ಲಿ ರಬ್ಬರ್ ಹಾಸಿಗೆಗಳ ಮಾಹಿತಿ ಪಡೆಯಲು ರೈತರು ಮುಗಿಬಿದ್ದಿದ್ದರು. 3,200 ರೂ.ಗೆ ಹಾಸಿಗೆ ದೊರೆಯಲಿದೆ.ಡೇರಿಯಿಂದ ಹಸು ಹಾಸಿಗೆಗಳಿಗೆ ಸಬ್ಸಿಡಿಯೂ ಸಿಗುತ್ತದೆ. ಇವುಗಳ ಬಗ್ಗೆ ರೈತರು ಮಾಹಿತಿ ಪಡೆಯುತ್ತಿದ್ದರು. ಒಂದು ಹಾಸಿಗೆ ಅಂದಾಜು 5 ವರ್ಷ ಬಾಳಿಕೆ ಬರುತ್ತದೆ. ಗಂಜಲ, ಸಗಣಿ ಬಿದ್ದರೆ ಸುಲಭವಾಗಿ ಸ್ವಚ್ಛಗೊಳಿಸಬಹುದು.

    ಮಾತ್ರೆಗಳಿಗೆ ಗುಡ್‌ಬೈ:
    ಇತ್ತೀಚಿನ ದಿನಗಳಲ್ಲಿ ಬಿ ಕಾಂಪ್ಲೆಕ್ಸ್, ರಕ್ತದೊತ್ತಡ, ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ, ರೋಗ ನಿರೋಧಕ ಶಕ್ತಿ ಕುಂಠಿತ-ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಜನರು ನಿತ್ಯ ಮಾತ್ರೆಗಳ ಸೇವನೆ ಸಾಮಾನ್ಯವಾಗಿದೆ. ಆದರೆ,ಮಾತ್ರೆಗಳನ್ನು ತ್ಯಜಿಸಿ, ವಿದೇಶಿ ತೊಪ್ಪು-ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಮಾತ್ರೆಗಳಿಗೆ ಗುಡ್‌ಬೈ ಕೂಡ ಹೇಳಬಹುದು. ಮೇಳದಲ್ಲಿ ಇದರ ಬಗ್ಗೆ ಹೆಚ್ಚಿನವರು ಮಾಹಿತಿ ಪಡೆಯುತ್ತಿದ್ದರು.

    ರೈತರಿಗೆ ಕನ್ಯೆ ಸಿಗದಿರುವುದು ದುರದೃಷ್ಟಕರ:
    ಹಿಂದೆ ಯುವ ರೈತರನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದೆ ಬರುತ್ತಿದ್ದರು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಕುಟುಂಬದ ರೈತರಿಗೆ ಕನ್ಯೆ ಸಿಗದಿರುವುದು ದುರದೃಷ್ಟಕರ ಎಂದು ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್ ಬೇಸರ ವ್ಯಕ್ತಪಡಿಸಿದರು. ಜಿಕೆವಿಕೆಯ ಮುಖ್ಯ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆಹಾರದ ಮೂಲ ರೈತ, ರೈತನಿಲ್ಲದೇ ಬದುಕು ಅಸಾಧ್ಯ. ನಾವೆಲ್ಲರೂ ಆಹಾರ ಇಲ್ಲದೆ ಜೀವಿಸುವುದು ಅಸಾಧ್ಯ. ಕಷ್ಟಪಟ್ಟ ಆಹಾರ ಬೆಳೆಯುವ ರೈತರ ಸ್ಥಾನ-ಮಾನ ಬದಲಾಗಬೇಕು ಎಂದರು. ಇಂದಿನ ಪೀಳಿಗೆಯ ವಿದ್ಯಾವಂತ ಯುವ ಜನರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ರೈತರ ಬೆಳೆದ ಬೆಳೆಗೆ ಮಾರುಕಟ್ಟೆಗೆ ಉತ್ತಮ ಬೆಲೆ ಸಿಗುವಂತಾಗಲಿ ಎಂದು ಆಶಿಸಿದರು.ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಗತಿ ಪರ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಸ್ತು ಪ್ರದರ್ಶನದ ಅತ್ಯುತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಲಾಯಿತು. ಕೃಷಿ ವಿವಿಯ ಅಧಿಕಾರಿಗಳು, ವ್ಯವಸ್ಥಾಪನಾ ಮಂಡಳಿ ಸದಸ್ಯರು, ಸಂಶೋಧನಾ ವಿದ್ಯಾರ್ಥಿಗಳು ಸೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts