More

    ಕಲುಷಿತ ನೀರು ಸೇವಿಸಿ 14 ಮಂದಿ ಅಸ್ವಸ್ಥ

    ವೈ.ಎನ್.ಹೊಸಕೋಟೆ: ಗ್ರಾಮದ ಬೆಸ್ತರಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ತಾತಯ್ಯನ ಗುಡಿ ಹಿಂಭಾಗದ ನಿವಾಸಿಗಳಲ್ಲಿ 14 ಮಂದಿ ಕಲುಷಿತ ನೀರು ಸೇವಿಸಿ ಶನಿವಾರ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ 13 ಮಂದಿಗೆ ಗ್ರಾಮದ ಆಸ್ಪತ್ರೆ, ಒಬ್ಬರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗ್ರಾಮದಲ್ಲಿ ಶುದ್ಧ ನೀರಿನ ಹಲವು ಘಟಕಗಳಿದ್ದು, ಕೇವಲ ಎರಡು ಚಾಲ್ತಿಯಲ್ಲಿವೆ. ಉಳಿದ ಘಟಕಗಳು ಹಲವು ತಿಂಗಳಿನಿಂದ ಸರಿಯಾದ ನಿರ್ವಹಣೆ ಇಲ್ಲದೆ ನಿಂತಿವೆ. ಸಾರ್ವಜನಿಕ ನಲ್ಲಿಗಳಿಗೆ ಪೂರೈಕೆಯಾಗುವ ನೀರು ಸರಬರಾಜು ಸಂಪರ್ಕದ ಗೇಟ್‌ವಾಲ್ವ್‌ಗಳಲ್ಲಿ ಸೋರಿಕೆಯಾಗುತ್ತಿದ್ದು, ಅದರಲ್ಲಿ ಕಸಕಡ್ಡಿ ಸೇರಿ ಕ್ರಿಮಿಕೀಟಗಳು ಸೇರಿಕೊಂಡಿವೆ. ಇಂತಹ ಸುಮಾರು 30 ವಾಲ್ವ್‌ಗಳಿದ್ದು, ಬಹುಪಾಲು ಈ ಗುಂಡಿಗಳಲ್ಲಿ ಶೇಖರಣೆಗೊಂಡು ನೀರು ಕೊಳೆತು ಮತ್ತೆ ನಲ್ಲಿಗಳಲ್ಲಿ ಸೇರಿ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿವೆ. ಈ ನೀರು ಗ್ರಾಮದ ಬಹುಪಾಲು ಜನತೆ ಕುಡಿಯಲು ಬಳಸಿರುವುದರಿಂದ ಹಲವರು ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ, ಕೂಡಲೇ ಎಲ್ಲರನ್ನೂ ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.

    ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸುಜಾತಾ, ಇಒ ಶಿವರಾಜಯ್ಯ, ಪಿಡಿಒ ಶ್ರೀರಾಮನಾಯ್ಕ, ಎಇಇ ಹನುಮಂತರಾಯಪ್ಪ, ಇಂಜಿನಿಯರ್ ಬಸವಲಿಂಗಪ್ಪ ಗ್ರಾಮದಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ವಚ್ಛತೆ ಕ್ರಮಕೈಗೊಂಡು ಶೀಘ್ರವೇ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಸೂಚಿಸಿದರು.

    ಕಾಲಹರಣ ಮಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು: ಜೋಡಿ ಅಚ್ಚಮ್ಮನಹಳ್ಳಿಗೆ ಶುಕ್ರವಾರ ಭೇಟಿ ನೀಡಿದ್ದ ಎಸಿ, ತಹಸೀಲ್ದಾರ್ ಮತ್ತು ಸ್ಥಳೀಯ ಅಧಿಕಾರಿಗಳ ತಂಡದ ಎದುರು ಕುಡಿಯುವ ನೀರಿನ ಘಟಕಗಳ ವೈಫಲ್ಯದ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಕಲುಷಿತ ನೀರು ಕುಡಿದ 14 ಮಂದಿ ಅಸ್ವಸ್ಥರಾಗಿದ್ದಾರೆ. ವೈ.ಎನ್.ಹೊಸಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಮಂದಿ ವಾಸಿಸುತ್ತಿದ್ದರೂ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೊರತೆ ಕಾಡುತ್ತಿದೆ. ಗ್ರಾಪಂ ಸದಸ್ಯರು ಮೀಟಿಂಗ್, ದಿನನಿತ್ಯ ಪಂಚಾಯಿತಿ ಆವರಣದಲ್ಲಿ ಹರಟೆ ಹೊಡೆಯುವ ಪುಡಿ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುತ್ತಿರುವುದು ಬಿಟ್ಟರೆ ವಾರ್ಡ್‌ಗಳಲ್ಲಿ ಯಾವುದೇ ಆಸಕ್ತಿ ತೋರಿಸದ ಕಾರಣ ಜನ ಹಿಡಿಶಾಪ ಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts