More

    14ರ ಒಳಗೆ ಆಯುರ್ವೆದ ಕಿಟ್ ವಿತರಣೆ ಪೂರ್ಣ

    ಶಿವಮೊಗ್ಗ: ರೋಗ ನಿರೋಧಕ ಶಕ್ತಿ ವೃದ್ಧಿಸುವ ಉಚಿತ ಆಯುರ್ವೆದ ಕಿಟ್ ವಿತರಣೆ ಇಡೀ ರಾಜ್ಯದ ಗಮನ ಸೆಳೆದಿದ್ದು ಆ.14ರೊಳಗೆ ಮಹಾನಗರ ಪಾಲಿಕೆಯ ಉಳಿದ 25 ವಾರ್ಡ್​ಗಳಿಗೂ ಕಿಟ್ ವಿತರಣೆ ಮಾಡಲಾಗುವುದು ಎಂದು ಕರೊನಾ ಸುರಕ್ಷಾ ಪಡೆ ಖಜಾಂಚಿ ಡಿ.ಎಸ್.ಅರುಣ್ ತಿಳಿಸಿದರು.

    35 ವಾರ್ಡ್​ನ 300 ಬೂತ್​ಗಳ ಪ್ರತಿ ಮನೆಗೂ ಆಯುರ್ವೆದ ಕಿಟ್ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 10 ವಾರ್ಡ್​ಗಳ 82 ಬೂತ್​ಗಳಲ್ಲಿ 84,705 ಕಿಟ್ ವಿತರಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಸೋಮವಾರದಿಂದ 2ನೇ ಹಂತದಲ್ಲಿ 5 ವಾರ್ಡ್(22, 23, 24, 27 ಮತ್ತು 34)ಗಳಲ್ಲಿ ಕಿಟ್ ನೀಡಲಾಗುತ್ತಿದೆ. ಒಂದು ಕಿಟ್​ಗೆ 100 ರೂ. ಖರ್ಚಾಗುತ್ತಿದೆ. ಹಾಗಾಗಿ ಸಂಘ ಸಂಸ್ಥೆಗಳ ನೆರವು ಕೇಳಲಾಗುತ್ತಿದೆಯೇ ವಿನಾ ಯಾವುದೇ ಮನೆಗಳಿಗೆ ಹೋಗಿ ರಶೀದಿ ಕೊಟ್ಟು ಬಲವಂತದಿಂದ ಹಣ ವಸೂಲಿ ಮಾಡುತ್ತಿಲ್ಲ. ಈಗಾಗಲೇ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು 10 ಲಕ್ಷ ರೂ.ಗೂ ಅಧಿಕ ಹಣ ನೆರವು ನೀಡಿದ್ದಾರೆ ಎಂದರು.

    ಆಧಾರ್ ದುರುಪಯೋಗವಿಲ್ಲ: ಕಿಟ್ ವಿತರಣಾ ಸಂದರ್ಭದಲ್ಲಿ ಆಧಾರ್ ಕಾರ್ಡ್​ನಿಂದ ಯಾವುದೇ ತೊಂದರೆ ಇಲ್ಲ, ದುರುಪಯೋಗವೂ ಆಗಲ್ಲ. ಕಿಟ್ ವಿತರಣೆ ಪುನರಾವರ್ತನೆ ಆಗಬಾರದೆಂಬ ಕಾರಣಕ್ಕೆ ಆಧಾರ್ ಕೇಳಲಾಗುತ್ತಿದೆ. ಆಯುರ್ವೆದ ಕಿಟ್ ಎಲ್ಲರಿಗೂ ತಲುಪಿಸುವ ಮುಖ್ಯ ಆಶಯ ಹಾಗೂ ಕೊಟ್ಟವರಿಗೆ ಮತ್ತೆ ಕೊಡುವುದನ್ನು ತಪ್ಪಿಸುವ ಉದ್ದೇಶದಿಂದ ಮಾತ್ರ ಆಧಾರ್ ಸಂಖ್ಯೆ ಪಡೆಯಲಾಗುತ್ತದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಮೊದಲ ಹಂತದಲ್ಲಿ ಹಂಚಿರುವ ಕಿಟ್ ವಿತರಣೆ ಸೆಟ್​ನಲ್ಲಿ ಮುದ್ರಣ ದೋಷ ಆಗಿದ್ದು ಆಯುರ್ವೆದ ಕ್ವಾಥಾಚೂರ್ಣ 4 ಚಮಚ ಬದಲಿಗೆ ಕೇವಲ ಕಾಲು(1/4) ಚಮಚ ಮಾತ್ರ ತೆಗೆದುಕೊಳ್ಳಬೇಕಿದೆ. ಆದ್ದರಿಂದ ಜನರು ಕಷಾಯದ ಪುಡಿಯನ್ನು ಕಾಲು ಚಮಚ ಬಳಸಬೇಕು ಎಂದು ಮನವಿ ಮಾಡಿದರು.

    ಇದು ಡಾ. ಗಿರಿಧರ್ ಕಜೆ ಔಷಧವಲ್ಲ: ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧವೋ ವಿನಃ ಕರೊನಾ ಸೋಂಕಿತರಿಗೆ ಆಯುರ್ವೆದ ತಜ್ಞ ಡಾ. ಗಿರಿಧರ್ ಕಜೆ ಸಂಶೋಧಿಸಿರುವ ಔಷಧವಲ್ಲ ಎಂದ ಡಿ.ಎಸ್.ಅರುಣ್, ಬಹಳಷ್ಟು ನಾಗರಿಕರು ಗಿರಿಧರ್ ಕಜೆ ತಯಾರಿಸಿದ ಔಷಧ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಆದರೆ ಆಯುರ್ವೆದ ಕಿಟ್​ಗೂ ಅವರಿಗೂ ಸಂಬಂಧವಿಲ್ಲ. ಆದರೆ ಜು.29ರಂದು ಆಯುರ್ವೆದ ಕಿಟ್​ಗೆ ಚಾಲನೆ ಮಾತ್ರ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.

    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಆರ್​ಎಸ್​ಎಸ್ ಪ್ರಮುಖ ವಿಜೇಂದ್ರ ಸೂಲಿಕೆರೆ, ಎನ್.ಜಿ.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts