More

    14ರಂದು ಧಾರವಾಡಕ್ಕೆ ಕುಮಾರಸ್ವಾಮಿ, ನವಲಗುಂದದಲ್ಲಿ ಪಂಚರತ್ನ ರಥಯಾತ್ರೆ

    ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ಕೈಗೊಂಡ ನಂತರ ಇದೇ ಮೊದಲ ಬಾರಿ ಧಾರವಾಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಜೆಡಿಎಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ತಿಳಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಫೆ. 14ರಂದು ಪಂಚರತ್ನ ರಥಯಾತ್ರೆ ನಡೆಯಲಿದೆ. ಮೊದಲು ಶಿರೂರು ಗ್ರಾಮಕ್ಕೆ ಆಗಮಿಸುವ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದರು.

    ನವಲಗುಂದ ಕ್ಷೇತ್ರದ ಮೊರಬದಲ್ಲಿ ಸಾರ್ವಜನಿಕ ಸಭೆ ನಂತರ ಅಳಗವಾಡಿಯಲ್ಲಿ ರೈತ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಹೆಬ್ಬಾಳ, ಜಾವೂರು ಜನರನ್ನು ಸಂಪರ್ಕ ಮಾಡಲಿದ್ದಾರೆ. ನವಲಗುಂದದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಕಾಲವಾಡ, ಆರೆಕುರಹಟ್ಟಿ, ಯಮನೂರಿನಲ್ಲಿ ಜೆಡಿಎಸ್ ಸಭೆಗಳು ನಡೆಯಲಿವೆ. ರಾತ್ರಿ ಹೆಬಸೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುವರು ಎಂದರು.

    ನವಲಗುಂದದಲ್ಲಿ ಈ ಬಾರಿ ಜೆಡಿಎಸ್ ಪರ ಒಲವು ಇದೆ. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಜನ ಉತ್ಸುಕರಾಗಿದ್ದಾರೆ ಎಂದು ಗಂಗಾಧರಮಠ ಹೇಳಿದರು.

    ಜೆಡಿಎಸ್​ನತ್ತ ಒಲವು: ಬೇರೆ ಬೇರೆ ಪಕ್ಷದಿಂದ ಜೆಡಿಎಸ್​ಗೆ ಬರಲು ಅನೇಕರು ಆಸಕ್ತಿ ಹೊಂದಿದ್ದಾರೆ. ಕೆಲ ಮಾಜಿ ಶಾಸಕರು ಹಿರಿಯ ನಾಯಕರ ಸಂಪರ್ಕದಲ್ಲಿದ್ದಾರೆ. ಅವರ ಪಕ್ಷ ಸೇರ್ಪಡೆ ಬಗ್ಗೆ ಮುಂದಿನ ದಿನಗಳಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

    ಕುಮಾರಸ್ವಾಮಿ ಅವರು ಧಾರವಾಡದಲ್ಲಿ ನೀರು ಸರಬರಾಜು ನೌಕರರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವರು. ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸವನ್ನು ಅವರು ಮಾಡುವರು ಎಂದರು.

    ಗೋಷ್ಠಿಯಲ್ಲಿ ಮುಖಂಡರಾದ ದೇವರಾಜ ಕಂಬಳಿ, ಪ್ರಕಾಶ ಅಂಗಡಿ, ಇಸ್ಮಾಯಿಲ್ ಕಾಲೆಬುಡ್ಡೆ, ಐ.ಜಿ. ಸಾಮುದ್ರಿ, ವಿನಯ ಭರಮಗೌಡ್ರ, ಶಿವಶಂಕರ ಕಲ್ಲೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts