More

    ಸಾಗರ: ಅಡಕೆ ಸಂಬಂಧಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಆವಿನಹಳ್ಳಿಯಿಂದ ಸಾಗರವರೆಗೆ ಪಾದಯಾತ್ರೆ ನಡೆಸಿದ ಬೆಳೆಗಾರರು, 20 ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಎಲೆಚುಕ್ಕೆ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅಡಕೆ ಆಮದು ಅನುಮತಿ ಹಿಂತೆಗೆದುಕೊಳ್ಳಬೇಕು. ಅಡಕೆ ತೋಟ ಹಾನಿಗೆ ಪರಿಹಾರ ನೀಡಬೇಕು. ಅಡಕೆ ರೋಗಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಪಡಿಸಿದರು.
    ಎಲೆಚುಕ್ಕೆ ರೋಗದಿಂದ ತೋಟಗಳೇ ನಶಿಸುತ್ತಿವೆ. ಆಳುವವರು ಜನರ ಸಂಕಷ್ಟವನ್ನು ಕೇಳುವ ಸ್ವಯಂಸೇವಕರಾಗಿರಬೇಕು. ನಮ್ಮ ಹೋರಾಟ ಯಾವುದೇ ಪಕ್ಷ, ಸಂಘಟನೆಯ ವಿರುದ್ಧವಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಗಳು ಸಂಖ್ಯೆಗಾಗಿ, ಅಂಕೆಗಾಗಿ, ಸಾಂಕೇತಿಕವಾಗಿ ನಡೆಯಬಾರದು. ನ್ಯಾಯ ಸಿಗುವವರೆಗೂ, ಗುರಿ ಮುಟ್ಟುವವರೆಗೂ ಹೋರಾಟ ಮಾಡೋಣ ಎಂದು ಸಿಗಂಧೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ರಾಮಪ್ಪ ಹೇಳಿದರು.
    ಪಾದಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಹೋರಾಟದ ಮೂಲಕವೇ ಪಡೆಕೊಳ್ಳಬೇಕಾದ ಸಂಕ್ರಮಣದ ಸ್ಥಿತಿಯಲ್ಲಿ ನಾವಿದ್ದೇವೆ. ಬದುಕಿಗೆ ಸಂಚಕಾರ ಬಂದಾಗ ಪಕ್ಷದ ಆಲೋಚನೆ ಮಾಡಬೇಡಿ, ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದರು.
    ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಈಗ ಅಡಕೆಗೆ ಪರಿಹಾರ, ತೋಟಕ್ಕೆ ಔಷಧಿ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಮೊದಲು ಸಂಶೋಧನೆಯತ್ತ ಗಮನ ಕೊಡಲಿ. ಕೋವಿಡ್ ಸಂದರ್ಭದಲ್ಲಿ ಸಂಶೋಧನೆ ನಡೆಸಿ ಹೇಗೆ ಔಷಧಿ ಕಂಡುಹಿಡಿಯಲಾಯಿತೋ, ಅದೇ ಮಾರ್ಗದಲ್ಲಿ ಇದನ್ನು ಮುನ್ನಡೆಸಲಿ. ಸರ್ಕಾರಗಳು ಯಾವತ್ತೂ ರೈತರು, ಸಂತ್ರಸ್ತರು, ಶೋಷಿತರ ಪರ ನಿಲ್ಲಬೇಕು. ಇಂತಹ ಹೋರಾಟಗಳಿಗೆ ಪಕ್ಷ ಪಂಗಡಗಳ ಹಣೆಪಟ್ಟಿ ಕಟ್ಟಬೇಡಿ ಎಂದರು.
    ಇದುವರೆಗೆ ನೋಡಿಲ್ಲ
    ನಾನು ಇಲ್ಲಿಯವರೆಗೂ ಎಲೆಚುಕ್ಕೆ ರೋಗದಂತಹ ಅಡಕೆಯ ಬಾಧೆ ನೋಡಿರಲಿಲ್ಲ. ಕಳೆದ ಎರಡು-ಮೂರು ವರ್ಷಗಳಿಂದ ಮಲೆನಾಡಿನ ಅಡಕೆ ತೋಟಗಳಿಗೆ ಇದು ಬೆನ್ನುಹತ್ತಿ ಅಡಕೆ ತೋಟವೇ ನಾಶವಾಗುವ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
    20 ವರ್ಷಗಳ ಹಿಂದೆ ನಿರ್ದಿಷ್ಟವಾಗಿ ಕೆಲವು ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಬೆಳೆಯಲಾಗುತ್ತಿತ್ತು. ಆದರೆ ಈಗ ಅಡಕೆ ಕೃಷಿ ಮಲೆನಾಡನ್ನು ಸಂಪೂರ್ಣ ಆವರಿಸಿದೆ. ಈ ಪ್ರದೇಶದ ಜನರ ಜೀವನಾಡಿಯಾಗಿರುವ ಅಡಕೆಯನ್ನು ಬೆಳೆಗಾರರು, ಕೂಲಿಕಾರರು ನಂಬಿಕೊಂಡೇ ಬದುಕುತ್ತಿದ್ದಾರೆ. ತೋಟ ನಾಶವಾದರೆ ಮುಂದೇನು ಎನ್ನುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಹೋರಾಟವೇ ಮಾರ್ಗೋಪಾಯ. ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ನೀಡುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts